More

    ೩೭೧(ಜೆ) ತಿದ್ದುಪಡಿ ಮಾಡಿದರೆ ಪ್ರತ್ಯೇಕ ರಾಜ್ಯ

    ಹುಲಸೂರು: ೩೭೧(ಜೆ) ಬದಲಿಸುವ ಅಧಿಕಾರ ರಾಜಕೀಯ ನಾಯಕರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗಿಲ್ಲ, ಇದು ಯಾರ ಸ್ವತ್ತಲ್ಲ, ಇದು ನಮ್ಮ ಹಕ್ಕು. ಅದನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಮೇಹಕರ, ತಡೋಳದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಅನುಭವ ಮಂಟಪದಲ್ಲಿ ಬೇಡ ಜಂಗಮ ಸಂಘದಿಂದ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯ ದ್ವಿತೀಯ ಜಯಂತಿ, ಯುಗಮನೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನದಲ್ಲಿ ದಿವ್ಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಹಿಂದುಳಿದ ಭಾಗವಾದ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಉದ್ದೇಶಕ್ಕಾಗಿ ಅಂದಿನ ಸರ್ಕಾರ ೩೭೧ (ಜೆ) ಕಾಯ್ದೆಯ ಮೂಲಕ ಈ ಭಾಗದ ಜನರಿಗೆ ವಿಶೇಷವಾದ ಹಕ್ಕು ನೀಡಿದೆ. ಆದರೆ ಮೈಸೂರಿನ ಒಂದು ಸಂಸ್ಥಾನ ಈ ಕಾಯ್ದೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಒಂದು ವೇಳೆ ಹೀಗೆ ಏನಾದರೂ ಆದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗಾಗಿ ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ಸಮಸ್ತ ಧಾರ್ಮಿಕ ಪ್ರತಿನಿಧಿಗಳಿಂದ ಹೋರಾಟ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಹೈದರಾಬಾದ್ ನಿಜಾಮ ಅಂದು ಸರ್ಕಾರಿ ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ನಿಯಮ ರೂಪಿಸಿದೆ. ಅದರಂತೆ ಇಂದು ಭಾರತ ಸರ್ಕಾರ ಈ ಭಾಗದ ಜನರ ನಿರಂತರ ಹೋರಾಟದ ಪ್ರತಿಫಲವಾಗಿ ೩೭೧(ಜೆ) ವಿಶೇಷ ಕಾಯ್ದೆಯನ್ನು ಜಾರಿಗೆ ತರುವುದರ ಮೂಲಕ ಈ ಭಾಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ನೆರವು ನೀಡಿದೆ. ಇದನ್ನು ಯಾವುದೇ ಕಾರಣಕ್ಕೂ ರದ್ದು ಗೊಳಿಸಬಾರದು ಎಂದು ಹೇಳಿದರು.

    ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಜಂಗಮ ಜನರು ತೀರಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಇವೆ. ಸರ್ಕಾರ ಅವರನ್ನು ಗುರುತಿಸಿ ಪರಿಶಿಷ್ಟ ಜಾತಿಯ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯಂತೆ ಬೇಡವ ಜಂಗಮರಿಗೆ ನೀಡಬೇಕು. ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನಕ್ಕಾಗಿ ತಂದಿರುವ ಸಂವಿಧಾನದ ೩೭೧( ಜೆ) ಕಾಯ್ದೆ ಏನಾದರೂ ರದ್ದುಗೊಳಿಸುವಂತೆ ಪ್ರಯತ್ನಿಸಿದರೆ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ತ್ರಿಪುರಾಂತದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗಡಿ ಗೌಡಗಾಂವದ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಸಾಯಗಾಂವ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿದರು.

    ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಡಾ.ನಾಗನಾಥ ತೋಗರಗೆ, ಉಪಾಧ್ಯಕ್ಷ ಸಡಕಯ್ಯ ಧನ್ನೂರೆ, ಪ್ರಧಾನ ಕಾರ್ಯದರ್ಶಿ ಅಮಿತ ಸ್ವಾಮಿ , ಪ್ರಮುಖರಾದ ಶಶಿಕಲಾ ಪಟ್ನೆ, ಸತೀಶ ಹಿರೇಮಠ, ನವನಾಥ ಭೋಪಳೆ, ಬಸವರಾಜ ಮುಕ್ತಾ, ಬಸವರಾಜ ಸ್ವಾಮಿ ಬುಕ್ಕಿಗರ, ರವಿ ಸ್ವಾಮಿ, ಲೋಕೇಶ ಸ್ವಾಮಿ, ಶಿವಕುಮಾರ ಮಠಪತಿ, ಸೋಮನಾಥ ಸ್ವಾಮಿ, ವಿಜಯಕುಮಾರ, ಸಿದ್ದಲಿಂಗ ಸ್ವಾಮಿ ಇತರರಿದ್ದರು. ಶಿವಕುಮಾರ ಪಂಚಯ್ಯ ಸ್ವಾಗತಿಸಿದರು. ರಾಜಕುಮಾರ ನಿಡೋದೆ ನಿರೂಪಣೆ ಮಾಡಿದರು.

    ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಗಾಗಿ ಸರ್ಕಾರ ೩೭೧ (ಜೆ) ತಿದ್ದುಪಡಿ ಮಾಡಿ ಜನರಿಗೆ ಸೌಲಭ್ಯ ನೀಡುತ್ತಿದೆ. ಆದರೆ ಮೈಸೂರು ಭಾಗದ ಕೆಲ ಸಂಘಟನೆಗಳು ವಿನಾಕಾರಣ ರದ್ದು ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದ್ದರಿಂದ ಈ ಭಾಗದ ಜನರಿಗೆ ತುಂಬಾ ನೋವುಂಟು ಮಾಡಿದೆ. ಒಂದು ವೇಳೆ ವಿಧೇಯಕ ತಿದ್ದುಪಡಿ ಮಾಡಿದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ.
    | ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts