More

    ಜನರು ಮತ್ತು ಕೆಲಸದ ಮೇಲೆ ‘ಉದ್ಯಮ 5.0’ರ ಪರಿಣಾಮಗಳು

    | ಸುಧೀಶ್‌ ವೆಂಕಟೇಶ್
    ಶತಮಾನಗಳಿಂದಲೂ, ಹಲವು ಆವಿಷ್ಕಾರಗಳಿಂದ ಪ್ರೇರಿತವಾದ ಕ್ರಾಂತಿಗಳು – ಮುದ್ರಣ ಯಂತ್ರ, ಉಗಿಯ ಶಕ್ತಿ, ವಿದ್ಯುಚ್ಛಕ್ತಿ ಮತ್ತು ಕಂಪ್ಯೂಟರೀಕರಣ ಮುಂತಾದವು ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಹೆಚ್ಚಿಸಿವೆ. ವಿದ್ಯುಚ್ಛಕ್ತಿಯ ಆವಿಷ್ಕಾರದೊಂದಿಗೆ ಬ್ರಿಟನ್‌ನ ಆರ್ಥಿಕತೆಯಲ್ಲಿ ಹದಿನೈದು ಪಟ್ಟು ಏರಿಕೆ ಕಂಡುಬಂದಿತು. ಅದೇ ಸಮಯದಲ್ಲಿ ಜನಸಂಖ್ಯೆಯಲ್ಲಿ ಕೇವಲ ಐದು ಪಟ್ಟು ಹೆಚ್ಚಳ ಕಂಡುಬಂದಿದ್ದರಿಂದ ಅಲ್ಲಿನ ಜನರ ಸಂಪತ್ತಿನಲ್ಲಿ ಭಾರಿ ಹೆಚ್ಚಳಕ್ಕೆ ಇದು ಕಾರಣವಾಯಿತು.

    ಪ್ರತಿ ಕ್ರಾಂತಿಯೂ ಮಾನವರನ್ನು ಮತ್ತು ಅವರ ಸಾಮಾಜಿಕ ನಡವಳಿಕೆಯನ್ನು ಗಮನಾರ್ಹವಾಗಿ ಪ್ರಭಾವಿಸಿವೆ. ಉದಾಹರಣೆಗೆ, ವಿದ್ಯುಚ್ಛಕ್ತಿಯ ಆವಿಷ್ಕಾರದಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾರಿನ ಬಿಡಿಭಾಗಗಳನ್ನು ತಯಾರಿಸಿ ಅವುಗಳನ್ನು ಅಂತಿಮ ಉತ್ಪನ್ನವಾಗಿ ಹೊರಹೊಮ್ಮುವಂತೆ ಜೋಡಿಸಲು ಸಾಧ್ಯವಾಯಿತು. ಆದರೆ ಈ ಮೊದಲು ಒಬ್ಬ ಕುಶಲಕರ್ಮಿಯು ಸರಳವಾದ ಉಪಕರಣಗಳನ್ನು ಬಳಸಿಕೊಂಡು ಸಂಪೂರ್ಣ ಎತ್ತಿನ ಬಂಡಿಯನ್ನು ತನ್ನ ಕೈಗಳಿಂದಲೇ ನಿರ್ಮಿಸುತ್ತಿದ್ದ. ಈ ಅತ್ಯಾಧುನಿಕ ಕ್ರಾಂತಿಗಳು ಉದ್ಯೋಗ ನಷ್ಟವನ್ನು ಉಂಟುಮಾಡುತ್ತವೆ ಎಂಬ ವಾದವು ಪ್ರಶ್ನಾರ್ಹವಾಗಿದೆ. ಏಕೆಂದರೆ ಪ್ರತಿ ಕ್ರಾಂತಿಯು ಸಾಂಪ್ರದಾಯಿಕ ಉದ್ಯೋಗಗಳ ಸ್ಥಾನದಲ್ಲಿ ಹೊಸ ಕೌಶಲ್ಯಗಳ ಅಗತ್ಯತೆಗಳನ್ನು ಮತ್ತು ಹೊಸ ಉದ್ಯೋಗಗಳಿಗೆ ಬೇಡಿಕೆಯನ್ನು ಏಕಕಾಲದಲ್ಲಿ ಸೃಷ್ಟಿಸಿತು. ಯಾರು ಈ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡರೋ ಅವರಿಗೆ ಜೀವನ ರೂಪಿಸಿಕೊಳ್ಳುವುದು ಸಾಧ್ಯವಾಗಿದೆ.

    ಉದ್ಯಮ 5.0 ಮಾನವ ಕೇಂದ್ರಿತ, ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವದ ತತ್ವಗಳ ಮೇಲೆ ನಿರ್ಮಿತವಾಗಿದ್ದು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಅನೇಕ ತಂತ್ರಜ್ಞಾನಗಳು ಸಂಯೋಜಿತವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ. ಇದಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆ (AI), ಬಿಗ್ ಡೇಟಾ, ಬ್ಲಾಕ್ ಚೈನ್, ಕ್ಲೌಡ್ ಕಂಪ್ಯೂಟಿಂಗ್, ಮೆಶೀನ್‌ ಲರ್ನಿಂಗ್ ಮತ್ತು 5ಜಿ ಸಂಪರ್ಕ ಮುಂತಾದವುಗಳನ್ನು ಉದಾಹರಿಸಬಹುದು. ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾದ ವಿಶ್ಲೇಷಣೆಯು ಉದ್ಯಮವು ಎದುರಿಸಬಹುದಾದ ಸಂಭವನೀಯ ಸಮಸ್ಯೆಗಳನ್ನು ಅದು ಸಂಭವಿಸುವ ಮೊದಲೇ ಊಹಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೈಗಾರಿಕೆಗಳಲ್ಲಿ ಕೆಲಸವು ಸ್ಥಗಿತಗೊಳ್ಳಬಹುದಾದ ಅವಧಿಯನ್ನು ಕಡಿಮೆಗೊಳಿಸುತ್ತದೆ ಮತ್ತು ಉತ್ಪಾದಕರ ಹಣವನ್ನು ಉಳಿಸುತ್ತದೆ. ಅಂತೆಯೇ, ಉತ್ಪಾದನಾ ಪ್ರಕ್ರಿಯೆಯಲ್ಲಿ 5ಜಿಯು ಆಗುಮೆಂಟೆಡ್‌ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ಬಳಕೆಯನ್ನು ಬೆಂಬಲಿಸುತ್ತದೆ. ಇದು ಉತ್ಪಾದನಾ ಪ್ರಕ್ರಿಯೆಗಳನ್ನು ದೃಶ್ಯೀಕರಿಸಲು ಮತ್ತು ನಿಯಂತ್ರಿಸಲು ಹೊಸ ಮಾರ್ಗಗಳನ್ನು ಒದಗಿಸುತ್ತದೆ; 3ಡಿ ಮುದ್ರಣ ಮತ್ತು ಸಂಯೋಜಿತ ಉತ್ಪಾದನಾ ಪ್ರಕ್ರಿಯೆಗಳು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ

    ನನ್ನ ದೃಷ್ಟಿಯಲ್ಲಿ, ಉದ್ಯಮ 5.0 ಒಂದು ಕ್ರಾಂತಿಯಲ್ಲ, ಅದು ವಿಕಾಸವಾಗಿದೆ. ಇದು ಒಂದು ಯುಗದಿಂದ ಮುಂದಿನದಕ್ಕೆ ನಾಟಕೀಯ ಸ್ವರೂಪದ ಬದಲಾವಣೆಯಲ್ಲ – ಇದು ಉದ್ಯಮದ ವಿವಿಧ ಹಂತಗಳಲ್ಲಿ ಜೀವನ ಸಾಗಿಸುತ್ತಿರುವ ಜನರು, ದೇಶಗಳು ಮತ್ತು ಸಮಾಜಗಳಲ್ಲಿ ನಿರಂತರವಾಗಿ ಉಂಟಾಗುವ ಬದಲಾವಣೆಯಾಗಿದೆ.

    ಇದರ ಹೊರತಾಗಿಯೂ ಇದರಲ್ಲಿ ಇತರ ಅನೇಕ ಸವಾಲುಗಳಿರುವ ಸಾಧ್ಯತೆಗಳಿದೆ. ಉದಾಹರಣೆಗೆ ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆಯು ದುಬಾರಿಯಾಗಿದ್ದು ಹೆಚ್ಚಿನ ಸಮಯ ಬೇಡುತ್ತದೆ; ಯಂತ್ರಗಳು ಮತ್ತು ತಂತ್ರಜ್ಞಾನಾಧಾರಿತ ವ್ಯವಸ್ಥೆಗಳು ಅನೇಕ ಕೆಲಸಗಳನ್ನು ನಿರ್ವಹಿಸಲು ಶಕ್ತರಾಗುವುದರಿಂದ ಕಡಿಮೆ ಕೌಶಲ್ಯದ ಕೆಲಸಗಾರರಿಗೆ ಉದ್ಯೋಗ ನಷ್ಟವಾಗುತ್ತದೆ. ಇದರಿಂದ ನವೀನ ತಂತ್ರಜ್ಞಾನಗಳೊಂದಿಗೆ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ಹೊಂದಿರುವವರ ಕೊರತೆ ಎದುರಾಗುತ್ತದೆ. ಈ ತಂತ್ರಜ್ಞಾನಾಧಾರಿತ ಕಾರ್ಯಾಚರಣೆಗಳು ಸೈಬರ್ ಬೆದರಿಕೆಗೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ದತ್ತಾಂಶ ಮತ್ತು ಎಐಯ ಹೆಚ್ಚಿದ ಬಳಕೆಯು ಮಧ್ಯಮ ಹಂತದ ವ್ಯವಸ್ಥಾಪಕರು ಮತ್ತು ಆಡಳಿತಾತ್ಮಕ ಹುದ್ದೆಗಳ ಅಗತ್ಯವನ್ನು ಕಡಿಮೆಗೊಳಿಸುತ್ತದೆ.

    ಸಾಮಾಜಿಕವಾಗಿ ವಿಶಾಲ ನೆಲೆಯಲ್ಲಿ ಉದ್ಯಮ 5.0 ಇದು ರೋಗನಿರ್ಣಯದ ನಿಖರತೆ, ವೈದ್ಯಕೀಯ ಕಾರ್ಯವಿಧಾನಗಳ ವೆಚ್ಚದಲ್ಲಿ ಕಡಿತ ಮತ್ತು ದೂರದ ಸ್ಥಳದಿಂದಲೇ ಆರೋಗ್ಯದ ಮೇಲ್ವಿಚಾರಣೆ, ಸುಧಾರಿತ ಚಿಕಿತ್ಸಾ ವಿಧಾನಗಳ ಮೂಲಕ ಆರೋಗ್ಯ ರಕ್ಷಣೆಯ ಭರವಸೆಯನ್ನು ನೀಡುತ್ತದೆ. ಅಲ್ಲದೆ ಇದು ಸ್ಮಾರ್ಟ್​ಸಿಟಿಗಳ ರಚನೆ, ಉತ್ತಮ ಸಾರಿಗೆ, ಹೊಸ ರೀತಿಯ ವಿರಾಮ ಮತ್ತು ಮನರಂಜನೆಯ ಅವಕಾಶಗಳ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಇದೇ ಸಂದರ್ಭದಲ್ಲಿ, ಇದು ಹೆಚ್ಚುತ್ತಿರುವ ಆದಾಯದ ಅಸಮಾನತೆ ಮತ್ತು ಉದ್ಯೋಗದ ಸ್ಥಳಾಂತರದ ಜೊತೆಗೆ; ಹೆಚ್ಚಿದ ಕಣ್ಗಾವಲು, ವೈಯಕ್ತಿಕ ಡೇಟಾದ ಸಂಗ್ರಹಣೆ ಹಾಗೂ ಬಳಕೆಯ ಬಗ್ಗೆ ಸಾಮಾಜಿಕ ಮತ್ತು ನೈತಿಕ ಕಾಳಜಿ, ಕಳವಳಗಳನ್ನು ವ್ಯಕ್ತಪಡಿಸುತ್ತದೆ.

    ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ಬದಲಾಗುತ್ತಿರುವ ದುಡಿಯುವ ಸಮುದಾಯದ ಸ್ವರೂಪ, ತಾತ್ಕಾಲಿಕ ರಿಮೋಟ್ ವರ್ಕ್​ (ದೂರದ ಪ್ರದೇಶದಿಂದ ಕೆಲಸ ನಿರ್ವಹಿಸುವುದು) ಮತ್ತು ಗಿಗ್ ಆರ್ಥಿಕತೆಯ (ಪೂರ್ಣಕಾಲಿಕ ಕೆಲಸಕ್ಕೆ ಬದಲಾಗಿ ಅರೆಕಾಲಿಕ, ಫ್ರೀಲಾನ್ಸ್, ಗುತ್ತಿಗೆ ಆಧಾರದ ಕೆಲಸಗಳ ಮೇಲೆ ಅವಲಂಬಿತವಾಗಿರುವ ಆರ್ಥಿಕತೆ) ಏರಿಕೆಯೊಂದಿಗೆ, ಸಂಸ್ಥೆಗಳು ಮತ್ತು ಅದರ ಉದ್ಯೋಗಿಗಳ ಅಗತ್ಯಗಳನ್ನು ಬೆಂಬಲಿಸುವ ಮಾದರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ (HR) ನಾಯಕರುಗಳು ಚುರುಕಾಗಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಇದು ಅಗತ್ಯಕ್ಕೆ ತಕ್ಕಂತೆ ಬದಲಾಗುವ (ಫ್ಲೆಕ್ಸಿಬಲ್‌) ಕೆಲಸದ ಅವಧಿಗಳು, ಒಪ್ಪಂದದ ಮೇರೆಗೆ ಅಲ್ಪಾವಧಿ ಕಾರ್ಯನಿರ್ವಹಿಸುವ ಕಾರ್ಯಪಡೆ (ಕಾಂಟಿಜೆಂಟ್‌ ವರ್ಕ್​ಫೋರ್ಸ್​) ಮತ್ತು ನಿರ್ದಿಷ್ಟ ಪ್ರಾಜೆಕ್ಟ್‌ಗಳಲ್ಲಿ (ಪ್ರಾಜೆಕ್ಟ್‌ ಬೇಸಡ್‌ ಟೀಮ್‌) ಕೆಲಸ ಮಾಡುವ ತಂಡಗಳ ಬಳಕೆಯನ್ನು ಒಳಗೊಂಡಿರುತ್ತದೆ.

    ಮಾನವ ಸಂಪನ್ಮೂಲ ಮಾಹಿತಿ ವ್ಯವಸ್ಥೆಗಳು (HRIS), ಅರ್ಜಿದಾರರ ಟ್ರ್ಯಾಕಿಂಗ್​ ಸಿಸ್ಟಮ್‌ಗಳಿಂದ (ATS), ಕ್ಲೌಡ್-ಆಧಾರಿತ ಪರಿಹಾರಗಳು ಮತ್ತು ಎಐ(AI) ಪರಿಕರಗಳವರೆಗೆ ವಿಸ್ತರಿಸಿರುವ ತಂತ್ರಜ್ಞಾನವು ಮಾನವ ಸಂಪನ್ಮೂಲ ವಿಭಾಗವು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತಿದೆ. ಇದು ಮಾನವ ಸಂಪನ್ಮೂಲ (HR) ಪ್ರಕ್ರಿಯೆಗಳಲ್ಲಿ ಹೆಚ್ಚಿನ ದಕ್ಷತೆ ಮತ್ತು ಪರಿಣಾಮಕಾರಿತ್ವ ಸಾಧಿಸಲು ಅವಕಾಶ ಒದಗಿಸುತ್ತದೆ. ಅಲ್ಲದೆ ಇದು ಪ್ರತಿಭೆ ನಿರ್ವಹಣೆ, ವೃತ್ತಿಯಲ್ಲಿ ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸುವತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಬೃಹತ್‌ ದತ್ತಾಂಶ (ಡೇಟಾ)ದ ಏರಿಕೆ, ಅತ್ಯಾಧುನಿಕ ವಿಶ್ಲೇಷಣಾ ಸಾಧನಗಳ ಲಭ್ಯತೆಯಿಂದಾಗಿ ಮಾನವ ಸಂಪನ್ಮೂಲ ವಿಭಾಗದಲ್ಲಿ ದತ್ತಾಂಶ (ಡೇಟಾ)- ಆಧಾರಿತ ನಿರ್ಣಯಗಳಿಗೆ ಹೆಚ್ಚಿನ ಒತ್ತು ನೀಡಿಕೆ ಪ್ರಾರಂಭವಾಗುತ್ತದೆ. ದತ್ತಾಂಶ ವಿಶ್ಲೇಷಣೆ (ಡೇಟಾ ಅನಾಲಿಟಿಕ್ಸ್), ಮೌಲ್ಯಮಾಪನದ ವ್ಯವಸ್ಥೆಯು (ಮೆಟ್ರಿಕ್ಸ್‌) ನೇಮಕಾತಿ, ಪ್ರತಿಭಾವಂತ ಉದ್ಯೋಗಿಗಳ ಪ್ರಗತಿಯಿಂದ ಆರಂಭಗೊಂಡು ಕಾರ್ಯಕ್ಷಮತೆ ನಿರ್ವಹಣೆ ಹಾಗೂ ವೇತನ ಮತ್ತು ಭತ್ಯೆ (ಕಾಂಪೊನ್ಸೇಷನ್)ವರೆಗೆ ಎಲ್ಲವನ್ನೂ ತಿಳಿಸುತ್ತದೆ. ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ತಂತ್ರಗಳು ಹಾಗೂ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ದಾರಿಯಲ್ಲಿ ಮಾನವ ಸಂಪನ್ಮೂಲ ವಿಭಾಗವು ಸಂಸ್ಥೆಯನ್ನು ಮುನ್ನಡೆಸಬೇಕು ಎನ್ನುವ ನಿರೀಕ್ಷೆಯು ಈ ಇಲಾಖೆಯ ಮೇಲಿರುತ್ತದೆ.

    ಇದನ್ನೂ ಓದಿ: ನೋವುನಿವಾರಕದ ಡಬ್ಬಿ​ ನುಂಗಿ 9 ತಿಂಗಳ ಮಗು ಸಾವು; ಮದ್ವೆಯಾಗಿ 10 ವರ್ಷದ ಬಳಿಕ ಜನಿಸಿದ್ದ ಪುತ್ರಿ!

    ಯಾವುದೇ ವ್ಯಕ್ತಿಯು ಉದ್ಯಮ 5.0ಗೆ ಹೊಂದಿಕೊಳ್ಳಬೇಕಾದರೆ ಅವರಲ್ಲಿನ ದತ್ತಾಂಶ ವಿಶ್ಲೇಷಣೆ, ಪ್ರೋಗ್ರಾಮಿಂಗ್, ಡಿಜಿಟಲ್ ಮಾರ್ಕೆಟಿಂಗ್​​ನಂತಹ ಡಿಜಿಟಲ್‌ ಕೌಶಲ್ಯಗಳು, ಸಂವಹನ, ಟೀಮ್‌ ವರ್ಕ್, ಸಮಸ್ಯೆ ಪರಿಹಾರ ಹಾಗೂ ವಿಮರ್ಶಾತ್ಮಕ ಚಿಂತನೆಯಂತಹ ಕಾರ್ಯಸ್ಥಳದ ವೃತ್ತಿಪರ ಕೌಶಲ್ಯದ ಪರಿಣತಿಯು ಮುಖ್ಯಪಾತ್ರ ವಹಿಸುತ್ತದೆ. ದಿನನಿತ್ಯದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಕಂಪನಿಗಳು ತಂತ್ರಜ್ಞಾನವನ್ನು ಅವಲಂಬಿಸಿರುವುದರಿಂದ, ಹೆಚ್ಚು ಸಂಕೀರ್ಣ ಮತ್ತು ಸೃಜನಾತ್ಮಕ ಕಾರ್ಯಗಳ ಮೇಲೆ ಕಂಪನಿಗಳ ಗಮನ ಹೆಚ್ಚುತ್ತಿದ್ದು ಅದಕ್ಕೆ ಈ ಹೊಸ ವೃತ್ತಿಪರ ಕೌಶಲಗಳ ಅಗತ್ಯವಿದೆ.
    ತ್ವರಿತಗತಿಯ ತಾಂತ್ರಿಕ ಬದಲಾವಣೆಯೊಂದಿಗೆ ಹೊಂದಿಕೊಳ್ಳುವವರು ನವೋದ್ಯಮದ ಸನ್ನಿವೇಶದಲ್ಲಿ ಮುಂದೆ ಸಾಗಲು ಶಕ್ತರಾಗುತ್ತಾರೆ. ಆದ್ದರಿಂದ, ಬೆಳವಣಿಗೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು, ಬದಲಾವಣೆಗೆ ತೆರೆದುಕೊಳ್ಳುವುದು, ಆಧುನಿಕ ತಂತ್ರಜ್ಞಾನಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ನಿರಂತರವಾಗಿ ಹೊಸ ಕಲಿಕೆಯ ಅವಕಾಶಗಳನ್ನು ಹುಡುಕುವುದು ಈ ಪರಿರ‍್ತನೆಯ ಸಮಯದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಬಲ್ಲದು. ನಮಗೆ ಅಂತರ್‌-ಶಿಸ್ತೀಯ ಶಿಕ್ಷಣ, ವಿಭಿನ್ನ ಉದ್ಯಮಗಳಲ್ಲಿನ ಅನುಭವ, ವೈವಿಧ್ಯಮಯ ಸಂಸ್ಕೃತಿ ಮತ್ತು ದೃಷ್ಟಿಕೋನಗಳಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ.

    (ಲೇಖಕರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಮುಖ್ಯ ಸಂವಹನ ಅಧಿಕಾರಿ ಮತ್ತು ವ್ಯವಸ್ಥಾಪಕ ಸಂಪಾದಕ)

    ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts