More

    ಬಿಜೆಪಿ ಮೇಲೇಕೆ ಗೂಬೆ ಕೂರಿಸುತ್ತಿರಿ?

    ಹುಬ್ಬಳ್ಳಿ : ಕಾಂಗ್ರೆಸ್ ತನ್ನ ಎಡೆಯಲ್ಲಿ ಕತ್ತೆ ಸತ್ತು ಬಿದ್ದರೆ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ವಿವಾದದಲ್ಲಿ ಬಿಜೆಪಿಯವರ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.

    ರಾಜ್ಯ ಸರ್ಕಾರದ ಸಚಿವರೊಬ್ಬರು ಸಿಎಂ, ಡಿಸಿಎಂ ಚರ್ಚೆ, ವಿವಾದ ಹುಟ್ಟು ಹಾಕುವಲ್ಲಿ ಬಿಜೆಪಿಯ ಕೈವಾಡವಿದೆ ಎಂದಿದ್ದಾರೆ. ಈ ಆರೋಪಕ್ಕೆ ಯಾವ ಆಧಾರವಿದೆ ಎಂದು ಪ್ರಶ್ನಿಸಿದ ಜೋಶಿ, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದರು.

    ಮೂವರು ಡಿಸಿಎಂ ಸೃಷ್ಟಿ, ಸಿಎಂ ಬದಲಾವಣೆ ಕಾಂಗ್ರೆಸ್​ನ ಆಂತರಿಕ ವಿಚಾರ. ಆದರೆ ಆ ಪಕ್ಷದ ಮುಖಂಡರು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಮೂವರು ಡಿಸಿಎಂ ಸೃಷ್ಟಿ ಕೂಗಿನ ಹಿಂದೆ ನೇರ ಸಿಎಂ ಸಿದ್ದರಾಮಯ್ಯ ಅವರದ್ದೇ ಪಾತ್ರವಿದೆ ಎಂದು ಪ್ರಲ್ಹಾದ ಜೋಶಿ ದೂರಿದರು.

    ಸಿಎಂ, ಡಿಸಿಎಂ ಹುದ್ದೆ ವಿಚಾರದಲ್ಲಿ ಬಿಜೆಪಿ ಯಾರ ಪರವೂ ಇಲ್ಲ ಅಥವಾ ಸಿದ್ದರಾಮ್ಯಯ ಮತ್ತು ಡಿ.ಕೆ. ಶಿವಕುಮಾರ ವಿರುದ್ಧವೂ ಇಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ವಿವಾದದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ ಅವರು ಸಚಿವ, ಶಾಸಕರಿಗೆ ಹುಷಾರ್ ಎಂಬ ಎಚ್ಚರಿಕೆ ಕೊಟ್ಟರು. ಆದರೆ, ಸಿಎಂ ಸಿದ್ದರಾಮಯ್ಯ ಮೌನ ತಾಳಿದ್ದಾರೆ. ಡಿಸಿಎಂ ಬಗ್ಗೆ ರ್ಚಚಿಸಬೇಡಿ ಎಂದು ಸಿಎಂ ಯಾರಿಗೂ ಹೇಳಿಲ್ಲ ಏಕೆ? ಇದರ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದರು.

    ಕಾಂಗ್ರೆಸ್​ಗೆ ಹೈಕಮಾಂಡ್ ಅಷ್ಟೇ ಅಲ್ಲ್ಲ ಕಮಾಂಡೇ ಇಲ್ಲ ಎಂದು ಟೀಕಿಸಿದ ಪ್ರಲ್ಹಾದ ಜೋಶಿ, ಆ ಪಕ್ಷದಲ್ಲಿ ಅಶಿಸ್ತು ತುಂಬಿದೆ. ಸಚಿವ, ಶಾಸಕರನ್ನು ನಿಯಂತ್ರಿಸಲು ವರಿಷ್ಠರಿಗೆ ಹಿಡಿತವೇ ಇಲ್ಲ ಎಂದು ವ್ಯಂಗ್ಯವಾಡಿದರು.

    ಸಿಎಂ, ಡಿಸಿಎಂ ಹುದ್ದೆ, ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆ ಮಾಡಿ, ಇಡಿ ಆಡಳಿತ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಜನ ಕೊಟ್ಟ ಅಧಿಕಾರ, ಅವಕಾಶವನ್ನು ಭ್ರಷ್ಟಾಚಾರ, ತುಷ್ಟೀಕರಣದ ರಾಜಕಾರಣ ಮೂಲಕ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts