More

    ನಾನು ಚೀಪ್ ರಾಜಕೀಯ ಮಾಡುವುದಿಲ್ಲ

    ಕೆ.ಆರ್.ನಗರ: ನಾನು ಹೆಣ ಇಟ್ಟುಕೊಂಡು ಗಿಮಿಕ್ ಮತ್ತು ಚೀಪ್ ರಾಜಕೀಯ ಮಾಡುವಂತಹ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನಮ್ಮದೇನಿದ್ದರೂ ಎದೆ ಕೊಟ್ಟು ನಿಲ್ಲುವ ಜಾಯಮಾನ ಎಂದು ಶಾಸಕ ಡಿ.ರವಿಶಂಕರ್ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ದ ಕಿಡಿಕಾರಿದರು.

    ಪಟ್ಟಣದ ಗರಡು ಗಂಭ ವೃತ್ತದಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಲ್ಪಸಂಖ್ಯಾತ ಸಮುದಾಯದ ವಿವಿಧ ಕಾಲನಿಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ನಾನು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದು 20 ವರ್ಷಗಳ ರಾಜಕೀಯ ಅನುಭವ ಇದೆ. ಕ್ಷೇತ್ರದ ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಗೊಡ್ಡು ಬೆದರಿಕೆಗೆ ನಾನು ಅಂಜುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಯಾರು ಕೂಡ ಏನನ್ನು ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.

    ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿಗಾಗಿ ಸರ್ಕಾರದಿಂದ 200 ಕೋಟಿ ರೂಪಾಯಿಗಳ ಅನುದಾನ ತಂದಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮತ್ತಷ್ಟು ಕೆಲಸಗಳನ್ನು ಕೈಗೊಳ್ಳಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ. ವಿಚಾರವನ್ನು ಅರಿಯದೆ ಸುಖಾ ಸುಮ್ಮನೆ ರಸ್ತೆಯಲ್ಲಿ ನಿಂತು ಮಾತನಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

    ಕಪ್ಪಡಿ ಬಳಿ ಏತ ನಿರಾವರಿಗೆ 60 ಕೋಟಿ, ಪಟ್ಟಣಕ್ಕೆ ಅಮೃತಯೋಜನೆಯಡಿ 30 ಕೋಟಿ ಅನುದಾನ, ಮಧುವನಹಳ್ಳಿ-ಹೊಸಕೋಟೆ ರಸ್ತೆಗೆ 20 ಕೋಟಿ, ಮಹಾತ್ಮ ಗಾಂಧಿ ಉದ್ಯಾನ ಮತ್ತು ಶಿಶುವಿಹಾರ ಮೈದಾನ ಅಭಿವೃದ್ಧಿಗೆ ಅನುದಾನ, ಪಟ್ಟಣದ ಒಳ ಚರಂಡಿ ನಿರ್ಮಾಣಕ್ಕೆ 20 ಕೋಟಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿ, ವಿಸ್ತಾರ ಬಡಾವಣೆಗಳ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ, ಕ್ರೀಡಾಂಗಣ ಅಭಿವೃದ್ಧಿ, ರೇಡಿಯೋ ಮೈದಾನ ಅಭಿವೃದ್ಧಿ, ಸಾರ್ವಜನಿಕ ಆಸ್ಪತ್ರೆ ಆವರಣದ ಅಭಿವೃದ್ಧಿ, ಬಟಿಗನಹಳ್ಳಿಯಿಂದ ಮಿರ್ಲೆಗೆ ತೆರಳುವ ರಸ್ತೆ ಅಭಿವೃದ್ಧಿ ಸೇರಿದಂತೆ ಹತ್ತಾರು ಕೆಲಸ ಕಾರ್ಯಗಳು ಶೀಘ್ರದಲ್ಲೆ ಪ್ರಾರಂಭಿಸಿ ಎರಡು ತಾಲೂಕುಗಳ ಸಮಗ್ರ ಅಭಿವೃದ್ಧಿ ಮಾಡಿ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸುಕೊಳ್ಳುತ್ತೇನೆ ಎಂದರು.

    ಪ್ರಕರಣ ಹಿನ್ನೆಲೆ: ಇತ್ತೀಚೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ಡಿ.ರವಿ ಶಂಕರ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಹಾಗೂ ಚನ್ನಗಾಲದ ಒಂದೇ ಕುಟುಂಬದ ನಾಲ್ಕು ಜನರು ವಿಷ ಕುಡಿದು ಸಾವನಪ್ಪಿದ ಸಂದರ್ಭ ಶಾಸಕರು ಆರೋಪಿ ತಮ್ಮ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪ್ರಕರಣ ದಾಖಲಾಗದ ರೀತಿ ಮಾಡಿದ್ದಾರೆ ಎಂದು ದೂರಿದ್ದರು. ಈ ಹಿನ್ನೆಲೆ ಶಾಸಕ ಡಿ.ರವಿಶಂಕರ್ ವಾಗ್ದಾಳಿ ನಡೆಸಿದ್ದಾರೆ.

    ಪುರಸಭೆ ಸದಸ್ಯ ಜಾವೀದ್, ಸಿದ್ದಿಕ್, ಮುಖಂಡ ನವೀದ್, ಜಾಮೀಯ ಮಸ್ಜೀದ್ ಕಮಿಟಿ ಅಧ್ಯಕ್ಷ ಅಪ್ಸರಬಾಬು, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಸದಸ್ಯ ಕೋಳಿಪ್ರಕಾಶ್, ನಟರಾಜು, ಮಿಕ್ಸರ್‌ಶಂಕರ್, ಶಿವುನಾಯಕ್, ಶಂಕರ್‌ಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಮುಖಂಡ ಗೀತಾಮಹೇಶ್, ಕೆ.ವಿನಯ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts