More

    ನಿರ್ಭಯಾ ಕೇಸ್​ನ ಅಪರಾಧಿಗಳನ್ನು ನೇಣಿಗೇರಿಸಲು ಕೈದಿಗಳೇ ತಯಾರಿಸಿದ್ರಾ ಹಗ್ಗ?, ಪೂರ್ವಸಿದ್ಧತೆ ಹೇಗಿತ್ತು- ಇಲ್ಲಿದೆ ಮಾಹಿತಿ..

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ 2012ರ ಡಿಸೆಂಬರ್​ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ಜಾರಿಯಾಗಿದ್ದು, ತಡವಾಗಿಯಾದರೂ ಆಕೆಗೆ ನ್ಯಾಯ ಸಿಕ್ಕಿತು ಎಂಬ ಮಾತು ವ್ಯಾಪಕವಾಗಿ ಕೇಳುತ್ತಿದೆ. ಈ ಪೈಶಾಚಿಕ ಕೃತ್ಯವೆಸಗಿದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸುವುದಕ್ಕೆ ತಿಹಾರ್ ಜೈಲು ಹೇಗೆ ಸಿದ್ಧವಾಗಿತ್ತು, ಏನೆಲ್ಲ ತಯಾರಿ ಮಾಡಿಕೊಂಡಿತ್ತು ಎಂಬ ಸಹಜ ಕುತೂಹಲ ಎಲ್ಲರಿಗೂ ಇರುತ್ತದೆ. ತಿಹಾರ್ ಜೈಲಿನ ಅಧಿಕಾರಿಗಳು ಬಹಿರಂಗಪಡಿಸಿದ ಮಾಹಿತಿಯ ವಿವರ ಇಲ್ಲಿದೆ.

    ನಿರ್ಭಯಾ ಕೇಸ್​ನ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಲು ದೆಹಲಿಯ ಸಿಟಿ ಕೋರ್ಟ್ ನಿರಾಕರಿಸಿದ ಕೂಡಲೇ, ಶಿಕ್ಷೆ ಜಾರಿಗೊಳಿಸಲು ತಿಹಾರ್​ ಜೈಲಿನಲ್ಲಿ ಸಿದ್ಧತೆ ಆರಂಭವಾಗಿತ್ತು. ಶುಕ್ರವಾರ ಮುಂಜಾನೆ 5.30ಕ್ಕೆ ಅಪರಾಧಿಗಳ ಪ್ರಾಣ ಹೋಗುವ ತನಕ ನೇಣುಗಂಬಕ್ಕೇರಿಸಲು ಸಿದ್ಧತೆಯ ಅಂತಿಮ ಹಂತದ ಪರಿಶೀಲನೆ ಆರಂಭವಾಗಿತ್ತು.

    ಅಪರಾಧಿಗಳನ್ನು ನೇಣಿಗೆ ಹಾಕುವುದಕ್ಕಾಗಿ ಬಿಹಾರದ ಬಕ್ಸರ್​ನಿಂದ 10 ತುಂಡು ಹಗ್ಗಗಳನ್ನು ತರಿಸಲಾಗಿತ್ತು. ಆ ಹಗ್ಗಗಳನ್ನು ನೇಣುಗಂಬಕ್ಕೆ ಬಿಗಿದು ಧೃಡವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗಿತ್ತು. ಬಕ್ಸರ್​ ಜೈಲಿನಲ್ಲಿ ಕೈದಿಗಳು ಆ ಹಗ್ಗವನ್ನು ತಯಾರಿಸಿದ್ದು, ಅವುಗಳನ್ನು ಬೆಣ್ಣೆ ಅಥವಾ ಮೇಣದಲ್ಲಿ ಅದ್ದಿ ಗಟ್ಟಿಗೊಳಿಸಿದ್ದಾರೆ. ಕುಣಿಕೆಯಿಂದ ಜಾರದಂತೆ ಹಗ್ಗ ಬಿಗಿಗೊಳ್ಳುವುದಕ್ಕೆ ಇದು ಕೂಡಾ ಸಹಕಾರಿ. ತಿಹಾರ್ ಜೈಲಿನ ಆವರಣದಲ್ಲಿರುವ ಗಲ್ಲು ಶಿಕ್ಷೆ ಜಾರಿಗೊಳಿಸುವ ನೇಣುಗಂಬಗಳಲ್ಲಿ ಅಣಕು ಪ್ರದರ್ಶನವನ್ನು ಮಾಡಲಾಗಿತ್ತು. ಈ ಅಣಕು ಪ್ರದರ್ಶನಕ್ಕೆ ಮರಳಿನ ಚೀಲಗಳನ್ನು ವ್ಯಕ್ತಿಗಳ ಜಾಗದಲ್ಲಿ ಬಳಸಲಾಗಿತ್ತು.
    ಗುರುವಾರ ಅಪರಾಹ್ನ ನಾಲ್ವರು ಅಪರಾಧಿಗಳ ಬಳಿ ತೆರಳಿದ್ದ ಅಧಿಕಾರಿಗಳು ಅಂತಿಮ ಆಸೆ ಇದ್ದರೆ ತಿಳಿಸುವಂತೆ ಸೂಚಿಸಿದ್ದರು. ಆದರೆ, ಗುರುವಾರ ತಡರಾತ್ರಿವರೆಗೂ ಯಾರೂ ಏನೂ ಹೇಳಿರಲಿಲ್ಲ. ಸಂಜೆ ವೇಳೆಗೆ ನಾಲ್ವರೂ ಅಪರಾಧಿಗಳ ಕುಟುಂಬದ ಸದಸ್ಯರು ಜೈಲಿಗೆ ಆಗಮಿಸಿದ್ದು, ನಾಲ್ವರನ್ನೂ ಪ್ರತ್ಯೇಕ ಸೆಲ್​ಗಳಲ್ಲಿ ಇರಿಸಿ ಅವರ ಭೇಟಿಗೆ ಅವಕಾಶ ಮಾಡಿಕೊಡಲಾಗಿತ್ತು. ಬಿಗಿ ಭದ್ರತೆಯೂ ಅಲ್ಲಿತ್ತು. ಅಪರಾಧಿಗಳು ತುಂಬಾ ಆತಂಕ, ಕಳವಳದಲ್ಲಿ ಇದ್ದಂತೆ ಕಾಣುತ್ತಿತ್ತು. ಬಹುಶಃ ಎಲ್ಲ ರೀತಿಯ ಕಾನೂನು ಹೋರಾಟಗಳೂ ಕೊನೆಗೊಂಡಿವೆ ಎಂಬ ಅರಿವು ಆದ ಕಾರಣ ಆ ರೀತಿ ಆದದ್ದಿರಬಹುದು. ನಾಲ್ವರು ಅಪರಾಧಿಗಳ ಪೈಕಿ ಯಾರೊಬ್ಬರೂ ತಮ್ಮ ಕೊನೆಯಾಸೆ ಹೇಳಿಕೊಳ್ಳಲಿಲ್ಲ.

    ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಅವರನ್ನು ನೇಣುಗಂಬವೇರಲು ಸಜ್ಜುಗೊಳಿಸಲಾಗಿದೆ. ಜೈಲು ಸೂಪರಿಂಟೆಂಡೆಂಟ್​ ಈ ನಾಲ್ವರು ಅಪರಾಧಿಗಳನ್ನು ಭೇಟಿ ಮಾಡಿ ಅವರಿಗೆ ಚಹಾ ಮತ್ತು ಉಪಾಹಾರ ಒದಗಿಸಿದ್ದರು. ಅವರಿಗೆ ಸ್ನಾನ ಮತ್ತು ಪ್ರಾರ್ಥನೆ ಅವಕಾಶ ಮಾಡಿಕೊಡಲಾಗಿತ್ತು. ಮುಂಜಾನೆ 5 ಗಂಟೆ ಸುಮಾರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್​/ಹೆಚ್ಚುವರಿ ಮ್ಯಾಜಿಸ್ಟ್ರೇಟ್​ ಜೈಲಿಗೆ ಆಗಮಿಸಿದ್ದು, ಮರಣದಂಡನೆ ಪ್ರಕ್ರಿಯೆ ಜಾರಿಯಾಗುವುದನ್ನು ಸ್ಥಳದಲ್ಲಿದ್ದು ಗಮನಿಸಿದ್ದಾರೆ. ಮರಣದಂಡನೆ ಜಾರಿಗೊಳಿಸುವ ಅನುಸರಿಸುವ ನಿಯಮ ಪ್ರಕಾರ ಅಪರಾಧಿಗಳ ಕೈಗಳನ್ನು ಬಿಗಿಯಾಗಿ ಕಟ್ಟಿದ್ದು, ತಲೆಗೆ ಮುಸುಕು ಹಾಕಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಗಲ್ಲು ಶಿಕ್ಷೆ ಜಾರಿಯಾಗಿದೆ.

    ಸಾಮಾನ್ಯವಾಗಿ ಈ ಶಿಕ್ಷೆ ಜಾರಿಗೊಳಿಸುವ ವೇಳೆ ಅಲ್ಲಿ 10-12 ಜನ ಮಾತ್ರ ಇರುತ್ತಾರೆ. ಇವರ ಪೈಕಿ ಹ್ಯಾಂಗ್​ಮನ್ ಒಬ್ಬರಾದರೆ, ಇನ್ನೊಬ್ಬರು ನ್ಯಾಯಾಧೀಶರು. ಉಳಿದಂತೆ, ಡಿಜಿಪಿ, ಎಡಿಜಿಪಿ, ಜೈಲ್ ಸುಪರಿಂಟೆಂಡೆಂಟ್​ ಮತ್ತು ಕೆಲವು ಗಾರ್ಡ್​ಗಳು ಇರುತ್ತಾರೆ. (ಏಜೆನ್ಸೀಸ್)

    ಜೈಲು ವಾಸದ ಅವಧಿಯಲ್ಲಿ ನಿರ್ಭಯಾ ಅಪರಾಧಿಗಳು ಸಂಪಾದಿಸಿದ ಹಣವೆಷ್ಟು? ಎಷ್ಟು ಬಾರಿ ಜೈಲು ನಿಯಮ ಉಲ್ಲಂಘಿಸಿದರು?

    ನೇಣಿಗೇರುವ ಮುನ್ನ ಇಡೀ ರಾತ್ರಿ ನಾಲ್ವರು ಅಪರಾಧಿಗಳ ವರ್ತನೆ ಹೇಗಿತ್ತು? ಅಧಿಕಾರಿಗಳು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts