More

    ಹಿರೇಕೆರೂರ ವಾಲ್ಮೀಕಿ ಭವನ ಕಾಮಗಾರಿ ಅಪೂರ್ಣ

    ಹಿರೇಕೆರೂರ: ಪಟ್ಟಣದ ಅಯ್ಯಪ್ಪ ಸ್ವಾಮಿ ನಗರದಲ್ಲಿ ನಿರ್ವಣವಾಗುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಅನುದಾನದ ಕೊರತೆಯಿಂದ ಕುಂಟುತ್ತ ಸಾಗಿದೆ.

    7 ಗುಂಟೆ ನಿವೇಶನದಲ್ಲಿ ಭವನ ನಿರ್ವಣಕ್ಕೆ 2016-17ರಲ್ಲಿ ಮೊದಲು 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ವಹಿಸಿತ್ತು. ಒಂದಿಲ್ಲೊಂದು ವಿಘ್ನಗಳಿಂದ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿತು. ಆಗ ಅಂದಿನ ಶಾಸಕರು, ಸಮಾಜದವರು ನಿರಂತರ ಹೋರಾಟ ಮಾಡಿ, ಕಟ್ಟಡದ ವಿನ್ಯಾಸ ಬದಲಿಸಿ, ವಿಶೇಷ ಸೌಕರ್ಯಗಳೊಂದಿಗೆ ಮೂರು ಅಂತಸ್ತಿನ ಭವನ ನಿರ್ವಿುಸಲು 1 ಕೋಟಿ ರೂಪಾಯಿ, ನಂತರ 2 ಕೋಟಿ ರೂಪಾಯಿ ಸೇರಿದಂತೆ 3 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರು ಮಾಡಿಸಿದರು. ಹೊಸ ವಿನ್ಯಾಸದಂತೆ ಕಟ್ಟಡದ ನಿರ್ಮಾಣ ನಡೆಯುತ್ತಿದೆ.

    2017ರಲ್ಲಿ ಆರಂಭಗೊಂಡ ಕಾಮಗಾರಿಗೆ ಒಮ್ಮೆಲೆ ಎಲ್ಲ ಅನುದಾನ ಬಿಡುಗಡೆಯಾಗಲಿಲ್ಲ. ಹಂತ ಹಂತವಾಗಿ ಅನುದಾನ ಬಂದಿದ್ದರಿಂದ ಹಾಗೂ ಇನ್ನೂ 1.25 ಕೋಟಿ ರೂಪಾಯಿ ಅನುದಾನ ಬಾಕಿ ಇರುವುದರಿಂದ ಕಾಮಗಾರಿ ಕುಂಟುತ್ತ್ತ ಸಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕಟ್ಟಡ ಕಾಮಗಾರಿಗೆ 1ರಿಂದ 1.5 ವರ್ಷ ಅವಧಿ ನಿಗದಿಪಡಿಸಲಾಗಿರುತ್ತದೆ. ಮುಂದುವರಿದ ಭಾಗವಾಗಿ ಕನಿಷ್ಠ ಮೂರು ವರ್ಷಗಳಲ್ಲಿ ಭವನ ನಿರ್ವಣಗೊಂಡು 2020ರಲ್ಲೇ ಲೋಕಾರ್ಪಣೆಯಾಗಬೇಕಿತ್ತು. ಆದರೆ, ಕಾಮಗಾರಿ ಆರಂಭಗೊಂಡು 7 ವರ್ಷ ಕಳೆದರೂ ನಿರ್ಮಾಣ ಕಾರ್ಯ ಇನ್ನೂ ಮುಗಿದಿಲ್ಲ. ಮೂರು ಅಂತಸ್ತಿನ ಕಟ್ಟಡ ನಿರ್ವಣವಾಗಿದೆ. ಇನ್ನು ಕಿಟಕಿಗಳು, ಫ್ಲೋರಿಂಗ್, ಪೇಂಟಿಂಗ್, ಇಲೆಕ್ಟ್ರಿಕ್, ಬಾಗಿಲುಗಳ ಅಳವಡಿಕೆ ಸೇರಿದಂತೆ ಇತರ ಸಣ್ಣಪುಟ್ಟ ಕೆಲಸ ಆಗಬೇಕಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಬಾಕಿ ಅನುದಾನ ಕೂಡಲೇ ಬಿಡುಗಡೆ ಮಾಡಿಸಿ, ವಾಲ್ಮೀಕಿ ಭವನ ನಿರ್ಮಾಣ ಪೂರ್ಣಗೊಳಿಸಬೇಕಿದೆ.

    ಅನುದಾನದ ಕೊರತೆಯಿಂದ ಕೆಲಸ ಬಾಕಿ ಇದೆ. ಈಗಾಗಲೇ ಸರ್ಕಾರಕ್ಕೆ ಬಾಕಿ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಭವನದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.

    | ಮಂಜುನಾಥ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹಾವೇರಿ

    2017ರಲ್ಲಿ ಮೊದಲಿನ ನೀಲಿನಕ್ಷೆಯಂತೆ ಕಾಮಗಾರಿ ಆರಂಭಿಸಲಾಯಿತು. ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಯಿತು. ಮತ್ತೆ ಭವನದ ವಿನ್ಯಾಸ ಮಾರ್ಪಾಡು ಮಾಡಿ, ಮುಂದುವರಿದ ಕಾಮಗಾರಿಗೆ ಸರ್ಕಾರದಿಂದ 1 ಕೋಟಿ ರೂಪಾಯಿ ಹೆಚ್ಚುವರಿ ವಿಶೇಷ ಅನುದಾನ ಬಿಡುಗಡೆ ಮಾಡಿಸಲಾಯಿತು. ನಂತರ ಮೂರು ಅಂತಸ್ತಿನ ಕಟ್ಟಡ ನಿರ್ವಿುಸಲು ಮತ್ತೆ 2 ಕೋಟಿ ಹೀಗೆ ಒಟ್ಟು 4 ಕೋಟಿ ರೂ ಅನುದಾನ ಮಂಜೂರು ಮಾಡಿಸಿದರು. ಇಲ್ಲಿಯವರೆಗೆ 2.75 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನು 1.25 ಕೋಟಿ ರೂ ಬಿಡುಗಡೆಯಾಗಬೇಕಿದೆ. ಅನುದಾನ ಬಂದ ತಕ್ಷಣ ಭವನದ ಬಾಕಿ ಇರುವ ಎಲ್ಲ ಕೆಲಸ ಪೂರ್ಣಗೊಳಿಸಲಾಗುವುದು.

    | ವಿ.ಎ. ಸಿದ್ದೇಶ, ಇಂಜಿನಿಯರ್, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts