More

    ಹಿಂದು ಸಂಸ್ಕೃತಿ ಅತ್ಯಂತ ಉತ್ಕೃಷ್ಟ

    ಶಿವಮೊಗ್ಗ: ಸನಾತನ ಹಿಂದು ಸಂಸ್ಕೃತಿ ಅತ್ಯಂತ ಉತ್ಕೃಷ್ಟವಾದುದು. ಇದು ನಮ್ಮ ವಿಶ್ವಾಸ ಮತ್ತು ಗೌರವದ ಪ್ರತೀಕ. ನಮ್ಮ ಸಂಸ್ಕೃತಿಯ ಆಚರಣೆಗೆ ಯಾರೂ ಮುಜುಗರಪಡುವ ಅಗತ್ಯವಿಲ್ಲ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

    ಎಲ್‌ಬಿಎಸ್ ನಗರದಲ್ಲಿ ಆರ್ಯ ವಿಜ್ಞಾನ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ನಾವು ಅಂದುಕೊಂಡಿದ್ದನ್ನು ಪಡೆಯಲು ವಿಶೇಷ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
    ವಿದ್ಯಾವಂತನಾಗಿ ಬೆಳೆದ ಮನುಷ್ಯನಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿ ಜೀವನ ಬದುಕಿನ ಸುವರ್ಣಾವಕಾಶ. ವಿದ್ಯೆ ಪಡೆಯುವಾಗ ಮಕ್ಕಳು ಯಾವುದೇ ದುರಭ್ಯಾಸಕ್ಕೆ ಅದರಲ್ಲೂ ವಿಶೇಷವಾಗಿ ಮೊಬೈಲ್ ಗೀಳಿಗೆ ಒಳಗಾಗಬಾರದು. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದಕ್ಕೆ ಮಾತ್ರ ವ್ಯಾಸಂಗ ಮಾಡದೆ ಕಲಿತಿರುವ ವಿದ್ಯೆ ಎಷ್ಟು ಎಂಬುದನ್ನು ತಿಳಿಯಲು ಪರೀಕ್ಷೆ ಎದುರಿಸಬೇಕು. ಪಾಲಕರು, ಗುರುಗಳು ಹೇಳಿದ್ದನ್ನು ಮಕ್ಕಳು ಸರಿಯಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
    ಆರ್ಯ ವಿಜ್ಞಾನ ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್, ಖಜಾಂಚಿ ಸುನೀತಾದೇವಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಶ್ರೀಗಳು ಕಾಲೇಜಿನ ನಾಮಫಲಕ ಅನಾವರಣಗೊಳಿಸಿದ ಬಳಿಕ ಸರಸ್ವತಿ ಪೂಜೆ ನಡೆಸಿಕೊಟ್ಟರು. ಪ್ರಯೋಗಾಲಯ ಉದ್ಘಾಟಿಸಿದರು.
    ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ್, ಸಂಸ್ಥೆ ಅಧ್ಯಕ್ಷ ಡಾ. ಪರಮೇಶ್, ಉಪಾಧ್ಯಕ್ಷ ಕೆ.ಸಿದ್ಧಾರ್ಥ್, ಸಹಕಾರ್ಯದರ್ಶಿ ಮೋನಿಷಾ ಸಿದ್ಧಾರ್ಥ್, ನಿರ್ದೇಶಕರಾದ ಎಸ್.ಮುಕುಂದ್, ಡಾ. ರಾಧಿಕಾದೇವಿ, ಮಾಜಿ ಸಂಸದ ಆಯನೂರು ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts