More

    ಪ್ರೀತಂಗೌಡ ತನಿಖೆಗೆ ಹೈಕೋರ್ಟ್ ಸಮ್ಮತಿ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೆನ್‌ಡ್ರೈವ್ ಹಂಚಿಕೆ ಆರೋಪ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ತನಿಖಾಧಿಕಾರಿಗಳು ವಿವೇಚನೆಯಂತೆ ತನಿಖೆ ನಡೆಸಬಹುದು. ಆದರೆ, ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶಿಸಿದೆ.

    ಪ್ರಕರಣ ರದ್ದುಪಡಿಸುವಂತೆ ಪ್ರೀತಂಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಅಶ್ಲೀಲ ವಿಡಿಯೋಗಳನ್ನು ಕಿರಣ್, ಶರತ್ ಹಾಗೂ ಪ್ರೀತಂಗೌಡ ವೈರಲ್ ಮಾಡಿಸುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ ಅಷ್ಟೇ. ಆದರೆ ಅರ್ಜಿದಾರರರೇ ಹಂಚಿದ್ದಾರೆ ಎಂದು ಹೇಳಿಲ್ಲ. ವೈಯಕ್ತಿಕ ಸೇಡಿಗಾಗಿ ಪ್ರಕರಣವನ್ನು ಬಳಸಿಕೊಳ್ಳಲಾಗಿದ್ದು, ರದ್ದುಗೊಳಿಸುವಂತೆ ಮನವಿ ಮಾಡಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮಕುಮಾರ್, ಪ್ರಕರಣ ದಾಖಲಾಗಿ 20 ದಿನ ಆಗಿದೆ. ಈಗ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿರುವುದು ಅಚ್ಚರಿ ಸಂಗತಿ. ಚುನಾವಣೆ ಬಳಿಕ ರಾಜಕೀಯ ಸೇಡಿನ ಪ್ರಶ್ನೆ ಎಲ್ಲಿಂದ ಬರುತ್ತದೆ. ಪ್ರಕರಣ ರದ್ದುಪಡಿಸುವುದಾಗಲಿ, ತಡೆ ನೀಡುವುದಾಗಲಿ ಮಾಡಬಾರದು ಎಂದು ಮನವಿ ಮಾಡಿದರು.

    ಆಕ್ಷೇಪ-ಪ್ರತಿ ಆಕ್ಷೇಪ:
    ಆರೋಪಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂಧಿಸಿಯೇ ವಿಚಾರಣೆಗೊಳಪಡಿಸಬೇಕು ಎಂಬ ಹಠ ಏಕೆ? ನೀವು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರು, ನ್ಯಾಯಾಲಯ ಯಾರನ್ನು ಬಂಧಿಸಬೇಕು, ಬಂಧಿಸಬಾರದು ಎಂದು ಹೇಳುತ್ತಾ ಹೋದರೆ, ಪ್ರಕರಣದ ತನಿಖೆ ನಡೆಸುವುದಾದರೂ ಹೇಗೆ? ಎಂದರು. ಸರ್ಕಾರಿ ಅಭಿಯೋಜಕರ ಅಸಮಾಧಾನವನ್ನು ನ್ನಾಯಾಲಯ ದಾಖಲಿಸಿಕೊಳ್ಳಲಿದೆ ಎಂದು ಪೀಠ ಹೇಳಿತು.

    ಕೋರ್ಟ್ ಹೇಳಿದ್ದೇನು?
    – ಅರ್ಜಿದಾರರನ್ನು ಪೊಲೀಸರು ಬಂಧಿಸಬಾರದು
    – ವಿಚಾರಣೆಗೆ ಕರೆದಾಗ ಅರ್ಜಿದಾರರು ಹೋಗಬೇಕು
    – ಬೆಳಗ್ಗೆ 7ರಿಂದ ರಾತ್ರಿ 9 ಗಂಟೆ ತನಕ ವಿಚಾರಣೆ ನಡೆಸಬಹುದು
    – ಮೊಬೈಲ್ ಸೇರಿ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಳ್ಳಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts