More

    ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ರಾಣೆಬೆನ್ನೂರ ಶಹರ ಠಾಣೆ ಪೊಲೀಸರು; 23 ಲಕ್ಷ ರೂ. ಮೌಲ್ಯದ 29 ಬೈಕ್ ವಶ; ಎಸ್‌ಪಿ ಅಂಶುಕುಮಾರ ಮಾಹಿತಿ

    ರಾಣೆಬೆನ್ನೂರ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ರಾಣೆಬೆನ್ನೂರ ಶಹರ ಠಾಣೆ ಪೊಲೀಸರು ಬಂಧಿಸಿ, ಅವರಿಂದ 23 ಲಕ್ಷ ರೂ. ಮೌಲ್ಯದ 29 ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದರು.
    ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಕಳ್ಳರ ಪತ್ತೆಗಾಗಿ ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ ಮಾರ್ಗದರ್ಶನದಲ್ಲಿ ಶಹರ ಸಿಪಿಐ ಡಾ.ಶಂಕರ ಎಸ್.ಕೆ. ನೇತೃತ್ವದಲ್ಲಿ ಪಿಎಸ್‌ಐಗಳಾದ ಗಡ್ಡೆಪ್ಪ ಗುಂಜುಟಗಿ, ಎಚ್.ಎನ್.ದೊಡ್ಡಮನಿ, ಅಪರಾಧ ಹಾಗೂ ತಾಂತ್ರಿಕ ಸಿಬ್ಬಂದಿ ಒಳಗೊಂಡ ಒಂದು ವಿಶೇಷ ತಂಡ ರಚಿಸಲಾಗಿತ್ತು ಎಂದರು.
    ಈ ತಂಡ ನಗರದ ಹಳೆ ಪಿ.ಬಿ.ರಸ್ತೆಯ ಎನ್.ವಿ.ಹೋಟೆಲ್ ಬಳಿ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಸಿಕ್ಕ ನಂಬರ್ ಪ್ಲೇಟ್ ಇಲ್ಲದ ಎರಡು ದ್ವಿಚಕ್ರ ವಾಹನಗಳ ಕುರಿತು ಎಮ್.ಸಿ.ಸಿ.ಟಿ.ಎನ್.ಎಸ್ ತಂತ್ರಾಂಶದಲ್ಲಿ ಪರಿಶೀಲಿಸಿದರು. ಆಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾದ ಬೈಕ್‌ಗಳು ಎಂಬುದು ಖಚಿತವಾಗಿತ್ತು.
    ತಕ್ಷಣವೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಿರೇಕೆರೂರಿನ ಎಲೇಕ್ನಿಷಿಯನ್ ಮೆಹಮೂದ ಹಜರತ್ ಅಲಿ ಮುಗಳಗೇರಿ (28), ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ತನ್ವಿರ್ ಅಬ್ದುಲ್ ಮುನಾಫ್ ಲಕ್ಷ್ಮೇಶ್ವರ (28), ಹಿರೇಕೆರೂರಿನ ಗ್ಯಾರೇಜ್ ಕೆಲಸಗಾರ ಖಲಂದರ್ ಸರ್ಪರಾಜ್ ಪಠಾಣ (22) ಕಳ್ಳತನದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಹಿರೇಕೆರೂರಿನ ಹಬ್ಬಿವುಲ್ಲಾ ಬಾರಾಸಾಬ ಕಚವಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
    ಆರೋಪಿಗಳ ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಸಂದಣಿ ಪ್ರದೇಶ, ರೇಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಕುರಿತು ವಿಚಾರಣೆ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.
    ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸಿ.ಬಿ.ಕಡ್ಲೆಪ್ಪನವರ, ವೈ.ಬಿ.ಓಲೇಕಾರ, ಪಿ.ಕೆ.ಸನದಿ, ಎಚ್.ಎಲ್.ದನುವಿನಮನಿ, ವಿಠಲ್.ಡಿ.ಬಿ. ರಾಮರಡ್ಡಿ ಕುಸಗೂರ, ವಾಹನ ಚಾಲಕ ಶ್ರೀಕಾಂತ ಕೊರವರ, ತಾಂತ್ರಿಕ ವಿಭಾಗದ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಹಾಗೂ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದಾಗಿ ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ, ಶಹರ ಸಿಪಿಐ ಡಾ.ಶಂಕರ ಎಸ್.ಕೆ., ಪಿಎಸ್‌ಐ ಗಡ್ಡೇಪ್ಪ ಗುಂಜುಟಗಿ, ಎಚ್.ಎನ್.ದೊಡ್ಡಮನಿ, ಇತರರಿದ್ದರು.
    ಎಲ್ಲೆಲ್ಲಿ ಎಷ್ಟು ?
    ಬಂಧಿತರಿಂದ ಹಾವೇರಿ ಠಾಣೆ ವ್ಯಾಪ್ತಿಯ 8, ಡಾವಣಗೆರೆಯ 5, ಶಿವಮೊಗ್ಗದ 5, ಚಿಕ್ಕಮಗಳೂರಿನ 3, ಉತ್ತರ ಕನ್ನಡ ಜಿಲ್ಲೆಯ 3, ಹಾಸನ ಜಿಲ್ಲೆಯ 1, ಗದಗನ 1, ಬೆಳಗಾವಿ 1, ಬೆಂಗಳೂರು 1, ಇತರೆ 1 ಸೇರಿದಂತೆ 23 ಲಕ್ಷ ರೂ. ಮೌಲ್ಯದ 29 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts