More

    ಶ್ರದ್ಧೆಯಿಂದ ಮಾಡುವ ಕೆಲಸ ಸಾರ್ಥಕವಾದುದು

    ಶಿವಮೊಗ್ಗ: ಆದಿಶಂಕರರು 1,200 ವರ್ಷಗಳ ಹಿಂದೆ ಅವತರಿಸಿ, ಎಲ್ಲರ ಜೀವನದ ಸಾರ್ಥಕ್ಯಕ್ಕೆ ಬೇಕಾದ ಮಾರ್ಗದರ್ಶನ ಮಾಡಿದ್ದಾರೆ. ಅದನ್ನು ಎಲ್ಲರೂ ಅನುಸರಣೆ ಮಾಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

    ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶೃಂಗೇರಿ ಶಂಕರ ಮಠದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಸತ್ಪುರುಷರಾಗಿ ನಡೆದುಕೊಳ್ಳುವುದು ಹೇಗೆ, ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದು ಹೇಗೆ, ಎಂಬುದನ್ನು ಶಂಕರರು ವಿವರಿಸಿದ್ದಾರೆ ಎಂದರು.
    ಭಜಗೋವಿಂದಂ ಸ್ತೋತ್ರದಲ್ಲಿ ಶಂಕರ ಭಗವತ್ಪಾದರು ತಿಳಿಸಿದಂತೆ ನಾವು, ಭಗವದ್ಗೀತೆ ಪಠಣ ಮಾಡಬೇಕು. ಆ ಮೂಲಕ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಭಕ್ತನಿಗೆ ಇರಬೇಕಾದ ಅರ್ಹತೆ ಏನು ಎಂಬುದನ್ನು ಭಗವದ್ಗೀತೆಯಲ್ಲಿ ಭಗವಂತ ಭಕ್ತರಲ್ಲಿ ಭಕ್ತಿ, ಶ್ರದ್ಧೆಯನ್ನು ಮಾತ್ರ ನೋಡುತ್ತಾನೆಯೇ ಹೊರತು ಆಸ್ತಿಯನ್ನಲ್ಲ ಎಂದು ತಿಳಿಸಿದರು.
    ಅಂಧಶ್ರದ್ಧೆಯಿಂದ ಮಾಡುವ ಅನುಷ್ಠಾನದ ಫಲ ಬಲಿ ಚಕ್ರವರ್ತಿಗೆ ಸಲ್ಲುತ್ತದೆ. ಶ್ರದ್ಧೆಯಿಂದ ಮಾಡಿದ ಕೆಲಸ ಮಾತ್ರ ನಮಗೆ ಸಿಗುತ್ತದೆ. ಇದರಿಂದ ನಮ್ಮ ಶ್ರಮವೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
    ದೇವರಿಗೆ ನಮ್ಮನ್ನು ಶ್ರದ್ಧೆಯಿಂದ ಸಮರ್ಪಣೆ ಮಾಡಿಕೊಂಡರೆ ಭಗವಂತ ನಮಗೆ ಬೇಕಾದ್ದನ್ನು ಕರುಣಿಸುತ್ತಾನೆ. ಭಕ್ತರು ಯಾವುದನ್ನೋ ಕೇಳುತ್ತಾರೆ. ಆದರೆ ದೇವರು ನಮಗೆ ಹಿತವಾದದ್ದನ್ನು ಮಾತ್ರ ಕರುಣಿಸುತ್ತಾನೆ. ನಾವು ಕೇಳದಿದ್ದರೂ ನಮಗೆ ಅಗತ್ಯವಾದದ್ದು ಭಗವಂತ ನೀಡುತ್ತಾನೆ. ಅನುಗ್ರಹ ಒದಗಿಸುತ್ತಾನೆ ಎಂದರು.
    ಭಗವಂತನ ನಾಮ ಸಂಕೀರ್ತನೆಗೆ ಬಹಳಷ್ಟು ವೈಶಿಷ್ಟೃಗಳಿವೆ. ಲಭ್ಯ ಸಮಯದಲ್ಲಿ ಅನಗತ್ಯ ವ್ಯವಹಾರ, ಮಾತುಗಳನ್ನು ಬಿಟ್ಟು, ಬೇಡದ ಮಾತುಗಳ ಬದಲಿಗೆ ಭಗವಂತನ ನಾಮಸ್ಮರಣೆ ಮಾಡಬೇಕೆಂಬುದು ಶಂಕರರ ಅನುಗ್ರಹವಾಗಿದೆ ಎಂದು ಹೇಳಿದರು.
    ಶಂಕರರ ಉಪದೇಶ ಪಾಲಿಸಿ:ಯಾವಾಗಲೂ ನಾವು ಸತ್ಪುರುಷರ ಸಹವಾಸ ಮಾಡಿದರೆ ಲೋಕದಲ್ಲಿ ನಮಗೆ ಗೌರವ ಪ್ರಾಪ್ತಿಯಾಗುತ್ತದೆ. ನಮ್ಮ ಕೈಲಾದಷ್ಟು ಅನ್ಯರಿಗೆ ಸಹಾಯ ಮಾಡಬೇಕು ಎಂದು ಶಂಕರರು ಉಪದೇಶ ಮಾಡಿದ್ದಾರೆ ಎಂದು ವಿಧುಶೇಖರ ಶ್ರೀಗಳು ತಿಳಿಸಿದರು. ಶಂಕರರು ರಚಿಸಿದ ಒಂದೊಂದು ಶ್ಲೋಕದಲ್ಲೂ ಭಕ್ತಿರಸವಿದೆ. ಅವರ ಲೋಕಾನುಗ್ರಹ ವಿಸ್ತ್ರತವಾದುದು. ಅದಕ್ಕೆ ಸಮನಾದುದು ಯಾವುದೂ ಇಲ್ಲ. ಅವರು ತೋರಿದ ಮಾರ್ಗದಲ್ಲಿ ಕೃತಾರ್ಥರಾಗಬೇಕು ಎಂದು ಶ್ರೀಗಳು ಅನುಗ್ರಹಿಸಿದರು.
    ಪೂರ್ಣಾಹುತಿಯಲ್ಲಿ ಭಾಗಿ:ಬೆಳಗ್ಗೆ ಶಂಕರ ಮಠದಲ್ಲಿ ಏರ್ಪಡಿಸಿದ್ದ 108 ನಾರಿಕೇಳ ಗಣಹೋಮದ ಪೂರ್ಣಾಹುತಿಯಲ್ಲಿ ವಿಧುಶೇಖರ ಭಾರತೀ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಜೆ ಶಾರದಾ ಶಂಕರ ಭಜನಾ ಮಂಡಳಿಗಳಿಂದ ಶಂಕರ ಭಗವತ್ಪಾದರು ವಿರಚಿತ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ, ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀ ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರಗಳನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು.
    ವಿಪ್ರ ಪ್ರಮುಖರಿಂದ ಸ್ವಾಗತ:ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ್, ಬ್ರಾಹ್ಮಣ ಮಹಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ವಿಪ್ರ ಸಮಾಜದ ಪ್ರಮುಖರು ವಿಧುಶೇಖರ ಶ್ರೀಗಳನ್ನು ಸ್ವಾಗತಿಸಿದರು. ಋತ್ವಿಜರು ವೇದ ಘೋಷ ನಡೆಸಿಕೊಟ್ಟರು. ಶಾರದಾ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಭಜನಾ ತಂಡದ ಸದಸ್ಯೆಯರು ಶಾಂಕರ ಸ್ತೋತ್ರ ಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts