More

    ಇಷ್ಟಪಟ್ಟು ವಿದ್ಯೆ ಕಲಿತರೆ ಉತ್ತಮ ಸಾಧನೆ ಸಾಧ್ಯ

    ಬೇಲೂರು: ಮನುಷ್ಯರಿಗೆ ಅಗತ್ಯವಾಗಿ ಬೇಕಾದ ನೀರು ಮತ್ತು ಗಾಳಿಯ ಶುದ್ಧೀಕರಣ ತಂತ್ರಜ್ಞಾನ ಕುರಿತು ತೈವಾನ್ ದೇಶದಲ್ಲಿ ಸಂಶೋಧನೆ ನಡೆಸುತ್ತಿರುವ ತಂಡದಲ್ಲಿರುವ ಯುವ ವಿಜ್ಞಾನಿ ಟಿ.ಎಂ.ಸುಬ್ರಹ್ಮಣ್ಯ ಅವರನ್ನು ಬೇಲೂರು ತಾಲೂಕಿನ ತಗರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಪಾಠಿಗಳು ಹಾಗೂ ಶಿಕ್ಷಕರು ಮಂಗಳವಾರ ಅಭಿನಂದಿಸಿದರು.


    ಶಿಕ್ಷಕರು ಹಾಗೂ ಸಹಪಾಠಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯುವ ವಿಜ್ಞಾನಿ ಟಿ.ಎಂ.ಸುಬ್ರಹ್ಮಣ್ಯ, ಇಂದು ನಾನೇನಾದರೂ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದರೆ ಅದಕ್ಕೆ ನಮ್ಮ ಗ್ರಾಮ ಮತ್ತು ಶಾಲೆಯಲ್ಲಿ ಓದಿದ ಶಿಕ್ಷಕರು ಮತ್ತು ಸ್ನೇಹಿತರ ಸಹಕಾರ ಕಾರಣವಾಗಿದೆ. ಎಲ್ಲರೂ ಏನಾದರೂ ಸಾಧಿಸುತ್ತೇನೆ ಎಂದು ವಿದ್ಯೆಯನ್ನು ಇಷ್ಟಪಟ್ಟು ಕಲಿತರೆ ಉತ್ತಮ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.


    ಶಿಕ್ಷಕಿ ಎಚ್.ಆರ್.ಶಕುಂತಲಾ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಮೂಲತಃ ಬೇಲೂರು ತಾಲೂಕಿನ ತಗರೆ ಗ್ರಾಮದ ಟಿ.ಎಂ.ಸುಬ್ರಹ್ಮಣ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 6ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಉಡುಪಿಯಲ್ಲಿ ಪ್ರೌಢ ಮತ್ತು ಪದವಿ ಶಿಕ್ಷಣ ಪಡೆದು, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಮತ್ತು ಸಹಾಯಕ ವಿಜ್ಞಾನಿಯಾಗಿ 3 ವರ್ಷ ಕೆಲಸ ನಿರ್ವಹಿಸಿ, ಈಗ ತೈವಾನ್ ದೇಶದಲ್ಲಿ ಮನುಷ್ಯರಿಗೆ ಅಗತ್ಯವಾಗಿ ಬೇಕಾದ ನೀರು ಮತ್ತು ಗಾಳಿಯ ಶುದ್ಧೀಕರಣ ತಂತ್ರಜ್ಞಾನ ಕುರಿತು ಜಪಾನ್, ಕೊರಿಯಾ, ಅಮೆರಿಕ ಹಾಗೂ ಭಾರತೀಯ ವಿಜ್ಞಾನಿಗಳೊಂದಿಗೆ ತೈವಾನ್‌ನಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.


    ಟಿ.ಎಂ.ಸುಬ್ರಹ್ಮಣ್ಯ ಬರೆದಿರುವ 25ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ 2022ನೇ ಸಾಲಿನಲ್ಲಿ ಆರ್ ಆ್ಯಂಡ್ ಡಿ ವರ್ಡ್-100ನಲ್ಲಿ ಭಾರತದ ನ್ಯೂಡೆಲ್ಲಿಯಲ್ಲಿ ಎನ್ವ್‌ರಸ್‌ಮೆಂಟ್ ಆ್ಯಂಡ್ ಸೋಷಿಯಲ್ ಡೆವಲಪ್‌ಮೆಂಟ್ ಗ್ರೀನ್ ಲೀಡರ್‌ಷಿಪ್ ಪ್ರಶಸ್ತಿ, ಪಾಲಿಮರ್ ಸೊಸೈಟಿ ರಿಪಬ್ಲಿಕ್ ಚೈನಾದಿಂದ ಬೆಸ್ಟ್ ರಿಸರ್ಚ್ ಪ್ರಶಸ್ತಿ, 2023ರಲ್ಲಿ ತೈವಾನ್‌ನ ತಮಿಳು ಸಂಘದಿಂದ ಯಂಗ್ ರಿಸರ್ಚ್‌ರ್ ಪ್ರಶಸ್ತಿ ಪಡೆದು ತಾನು ವಿದ್ಯಾಭ್ಯಾಸ ಮಾಡಿದ ತಗರೆ ಶಾಲೆ ಹಾಗೂ ಗ್ರಾಮಕ್ಕೆ ಮತ್ತು ವಿದ್ಯೆ ಕಲಿಸಿದ ಶಿಕ್ಷಕರಿಗೆ ಗೌರವ ತಂದು ಕೊಡುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾದರಿಯಾಗಿದ್ದು, ಅವರಂತೆ ಇತರರು ಉನ್ನತ ಸ್ಥಾನಕ್ಕೆ ತೆರಳುವಂತಾಗಲಿ ಎಂದು ಆಶಿಸಿದರು.


    ತಗರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರುದ್ರೇಶ್, ಸಿಆರ್‌ಪಿ ರೇಖಾ, ಶಿಕ್ಷಕರಾದ ಮೋಹನ್, ಯುವ ವಿಜ್ಞಾನಿ ಟಿ.ಎಂ.ಸುಬ್ರಹ್ಮಣ್ಯಗೆ ಶಿಕ್ಷಕರಾಗಿದ್ದ ಪುಷ್ಪಾವತಿ, ಜಯ್ಯಮ್ಮ, ಗಂಗಾಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts