More

    ಕೆಂಪೇಗೌಡ ಜಯಂತಿ ಆಚರಿಸುವ ನೈತಿಕ ಹಕ್ಕಿಲ್ಲ

    *ಸರ್ಕಾರದ ವಿರುದ್ಧ ಭೂಸ್ವಾಧೀನ ಹೋರಾಟ ಸಮಿತಿ ಮುಖಂಡರ ಆಕ್ರೋಶ


    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಒಕ್ಕಲುತನ ಉತ್ತೇಜಿಸಲು ಶ್ರಮಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಮತಿ ಆಚರಿಸುವ ನೈತಿಕ ಹಕ್ಕಿಲ್ಲ ಎಂದು ಭೂಸ್ವಾಧೀನ ಹೋರಾಟ ಸಮಿತಿ ಅಧ್ಯಕ್ಷ ನಲ್ಲಪ್ಪನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
    ಪಟ್ಟಣದಲ್ಲಿ ಶನಿವಾರ ರೈತ ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
    ಬೆಂಗಳೂರು ಹಾಗೂ ಗ್ರಾಮಾಂತರ ಹಾಗೂ ಸುತ್ತಮುತ್ತಲ ಭಾಗ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತು. ಸಮೃದ್ಧಿಯಿಂದ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಒಕ್ಕಲುತನವನ್ನೆ ನಂಬಿದ ರೈತರಿಗೆ ಕೆಂಪೇಗೌಡರು ಕೆರೆಗಳನ್ನು ನಿರ್ಮಿಸಿ ಕೃಷಿಗೆ ಉತ್ತೇಜನ ನೀಡಿದ್ದರು, ಆದರೆ ಸರ್ಕಾರಗಳು ರೈತರನ್ನೆ ಒಕ್ಕಲೆಬ್ಬಿಸುತ್ತಿರುವುದರಿಂದ ಕೆಂಪೇಗೌಡರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಕಿಡಿಕಾರಿದರು.
    ದೇವನಹಳ್ಳಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ 13 ಹಳ್ಳಿಗಳ ರೈತರ ಪಾಲಿಗೆ ಮುಳುವಾಗಿದ್ದಾರೆ, ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ 1777 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಿರತರಿಗೆ ನ್ಯಾಯ ಒದಗಿಸಲು ಸಾಧ್ಯವಾಗದೇ ಇರುವುದು ವಿಪರ್ಯಾಸ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಜತೆ ಮಾತನಾಡುತ್ತೇನೆ ಎಂದು ಹೇಳುತ್ತಲೆ ಇದ್ದಾರೆ, ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ, ಸರ್ಕಾರ ಇವರ ಮಾತನ್ನು ಕೇಳುತ್ತಿಲ್ಲವೋ ಅಥವಾ ಇವರೇ ಪ್ರಯತ್ನ ಮಾಡುತ್ತಿಲ್ಲವೋ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ರೈತರ ಹಿತ ಕಾಪಾಡುತ್ತಿಲ್ಲ: ನಮ್ಮ ಹೋರಾಟ ಬಿಜೆಪಿ ಸರ್ಕಾರದ ಅವಧಿಯಿಂದಲೂ ಹೋರಾಟ ಮಾಡುತ್ತಿದ್ದೇವೆ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಮುಖ್ಯಮಂತ್ರಿ ಸೇರಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮಾರೇಗೌಡ ದೂರಿದರು. ಅವರದೇ ಸರ್ಕಾರವಿದ್ದರೂ ರೈತರ ಹಿತ ಕಾಪಾಡಲು ಸಾಧ್ಯವಾಗಿಲ್ಲ, ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಮಾಡುವ ಇವರು ರೈತರ ಹಿತ ಕಾಪಾಡಿದ್ದರೆ ಅವರ ಆಶಯಗಳಿಗೆ ಬೆಲೆ ಬರುತ್ತಿತ್ತು, ಇನ್ನಾದರೂ ಉಸ್ತುವಾರಿ ಸಚಿವರು ಜಿಲ್ಲಾಡಳಿತ ನಮ್ಮ ಮೇಲೆ ಕರುಣೆ ತೋರುತ್ತಾರೆಯೇ ಕಾದು ನೋಡಬೇಕಿದೆ. ಅಂತಹ ಮಹಾನ್ ವ್ಯಕ್ತಿಯ ಜಯಂತಿಗೆ ನಮ್ಮ ವಿರೋಧವಿಲ್ಲ ಆದರೆ ಅವರ ಆಶಯಗಳನ್ನು ಈಡೇರಿಸುವುದು ಮುಖ್ಯ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡಬೇಕೆಂದು ತೀರ್ಮಾನಿಸಿದ್ದೆವು ಉಸ್ತುವಾರಿ ಮಂತ್ರಿಗಳು ಹಾಗೂ ಜಿಲ್ಲಾಡಳಿತಕ್ಕೆ ಮನ್ನಣೆ ನೀಡಿ ನಮ್ಮ ಮತ ಬಹಿಷ್ಕಾರ ಹಿಂಪಡೆದೆವು, ಕೂಡಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts