More

    ಗತ್ತು ಕಳೆದುಕೊಳ್ಳುತ್ತಿರುವ ಎವರೆಸ್ಟ್ ದಿಗ್ವಿಜಯ

    ಗತ್ತು ಕಳೆದುಕೊಳ್ಳುತ್ತಿರುವ ಎವರೆಸ್ಟ್ ದಿಗ್ವಿಜಯವ್ಯಾಪಾರೀಕರಣದ ಅಡ್ಡಪರಿಣಾಮ ಗೌರಿಶಂಕರ ಪರ್ವತದ ಮೇಲೂ ಕಾಣಬರುತ್ತಿದೆ. ಚಾರಣಿಗರು ಬಿಟ್ಟು ಹೋಗುತ್ತಿರುವ ತ್ಯಾಜ್ಯದಿಂದ ಮೌಂಟ್ ಎವರೆಸ್ಟ್ ಮಲಿನವಾಗುತ್ತಿದೆ. ನೇಪಾಳ ಪೊಲೀಸರು ಕೈಗೊಂಡ ಐವತ್ತು ದಿನಗಳ ಹಿಮಾಲಯ ಸ್ವಚ್ಛತಾ ಅಭಿಯಾನದಲ್ಲಿ ಮೌಂಟ್ ಎವರೆಸ್ಟ್ ಒಂದರಲ್ಲೇ ಹನ್ನೊಂದು ಟನ್ ತ್ಯಾಜ್ಯದ ಜೊತೆಗೆ ಕೆಲ ಮೃತದೇಹಗಳನ್ನೂ ಸಂಗ್ರಹಿಸಲಾಗಿದೆ.

    ಮೌಂಟ್ ಎವರೆಸ್ಟ್ ಶಿಖರದ ಪಾದದ ಬಳಿಯ ಮೊದಲನೇ ಕ್ಯಾಂಪ್​ನಲ್ಲಿ 2024ರ ಮೇ 23 ರಂದು ಮಹಿಳಾಮಣಿಗಳ ಗುಂಪೊಂದು ನೆರೆದಿತ್ತು. ಆ ಗುಂಪಿನ ಮಧ್ಯದಲ್ಲಿದ್ದ ಮಹಿಳೆಯ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಅಲ್ಲಿದ್ದವರು ಹಾತೊರೆಯುತ್ತಿದ್ದರೆ ಆಕೆ ಮಾತ್ರ ಶಾಂತಚಿತ್ತದಿಂದ ಸ್ಪಂದಿಸುತ್ತ, ನಗುಮುಖದಿಂದ ಎಲ್ಲರನ್ನೂ ಬರಮಾಡಿಕೊಳ್ಳುತ್ತಿದ್ದಳು. ಆ ಸಂಭ್ರಮಕ್ಕೆ ಕಾರಣ ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನೇರಿದ ಪ್ರಥಮ ಭಾರತೀಯ ಮಹಿಳೆ ಎಂಬ ಖ್ಯಾತಿಯನ್ನು ಸ್ಥಾಪಿಸಿದ ಬಚೇಂದ್ರಿ ಪಾಲ್​ರ ದಾಖಲೆಗೆ ಅಂದು ನಲವತ್ತು ವರ್ಷಗಳು ತುಂಬಿತ್ತು.

    ‘ವಾಣಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಮಹಿಳೆಯರಿಗೆ ಸಾಹಸ ಕ್ರೀಡೆಗಳ ತರಬೇತಿ ನೀಡುತ್ತ ಬಂದಿರುವ ಪಾಲ್​ಗೆ ಇದೀಗ ಎಪ್ಪತ್ತೊಂದು ವಸಂತಗಳು ತುಂಬಿವೆ. ಪೂರಕ ಸಲಕರಣೆ, ಸೌಲಭ್ಯದ ಅಭಾವದ ನಡುವೆಯೂ ಎಲ್ಲ ತೊಂದರೆ, ಅಡೆತಡೆಗಳನ್ನು ಮೆಟ್ಟಿನಿಂತು ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಬಚೇಂದ್ರಿ ಪಾಲ್ ಅವರಿಗೆ ಇಂದಿನ ನವಪೀಳಿಗೆ ಬರೀ ನೂತನ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ, ಅವುಗಳನ್ನೇ ನಂಬಿ ಹೆಚ್ಚಿನ ಪೂರ್ವತಯಾರಿ ಇಲ್ಲದೆ ಹುಚ್ಚು ಧೈರ್ಯದಿಂದ ಮೌಂಟ್ ಎವರೆಸ್ಟ್ ಹತ್ತಲು ಹೋಗುತ್ತಿರುವ ಬಗ್ಗೆ ವಿಷಾದವಿದೆ.

    ಏನು ಮಾಡೋದು ಹೇಳಿ ಈ ಮೌಂಟ್ ಎವರೆಸ್ಟ್​ನ ಆಕರ್ಷಣೆಯೇ ಅಂಥದ್ದು. ಅದನ್ನೇರುವ ಉಮೇದಿನಲ್ಲಿ ಪ್ರಾಣ ಕಳೆದುಕೊಂಡವರು ಅದೆಷ್ಟೋ ಜನರು ಎಂಬ ವಿಷಯ ಗೊತ್ತಿದ್ದೂ ಮತ್ತೆ ಆ ಸಾಹಸಕ್ಕೆ ಕೈ ಹಾಕುವವರ ಸಂಖ್ಯೆ ಕಮ್ಮಿಯಾಗಿಲ್ಲ. ಭಾರತದಲ್ಲಿ ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಮೌಂಟ್ ಎವರೆಸ್ಟ್ ಮೇಲೆ ಅವರುಗಳಿಗೆ ಅದೇಕೋ ತುಂಬ ವ್ಯಾಮೋಹವಿತ್ತು. ಈ ಕಾರಣಕ್ಕೆ ಅವರುಗಳು ಆ ಶಿಖರಕ್ಕೆ ತಮ್ಮವರದೇ ಹೆಸರನ್ನಿಟ್ಟಿದ್ದು. ವಿಪರ್ಯಾಸವೆಂದರೆ ಅತ್ಯುತ್ತಮ ಪರ್ವತಾರೋಹಿಗಳನ್ನು ಹೊಂದಿರುವ ರಾಷ್ಟ್ರವೆಂಬ ಖ್ಯಾತಿಹೊಂದಿದ್ದರೂ ಅವರುಗಳಿಗೆ ತನ್ನ ನೆತ್ತಿಯ ಮೇಲೆ ಬ್ರಿಟಿಷರ ಧ್ವಜವನ್ನು ಹಾರಿಸಲು ಗೌರಿಶಂಕರ ಎಂದೂ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಆ ಕೊರಗನ್ನು ನೀಗಿಸಲು ಹಲವು ಬ್ರಿಟಿಷ್ ತಂಡಗಳು ಪ್ರಯತ್ನಿಸಿ ವಿಫಲರಾದ ಹಿನ್ನೆಲೆಯಲ್ಲಿ 1924ರಲ್ಲಿ ಅತ್ಯುತ್ತಮ ಚಾರಣಿಗರ ತಂಡವೊಂದು ಭರ್ಜರಿ ತಯಾರಿಯೊಡನೆ ಮೌಂಟ್ ಎವರೆಸ್ಟ್​ಗೆ ಲಗ್ಗೆ ಇಟ್ಟಿತು. 1924ರ ಜೂನ್ 8ರಂದು ಪ್ರತಿಕೂಲ ಹವಾಮಾನದಲ್ಲೇ ಮುನ್ನಡೆದ ತಂಡವು ಅಂತಿಮ ಘಟ್ಟವನ್ನು ತಲುಪಿದಾಗ ಉಳಿದವರು ಇಬ್ಬರೇ ಜಾರ್ಜ್ ಮಾಲೋರಿ ಮತ್ತು ಆಂಡ್ರು ಇರ್ವಿನ್. ಅಲ್ಲಿಂದ ಸುಮಾರು ಒಂದು ಸಾವಿರ ಅಡಿಗಳಷ್ಟು ಎತ್ತರದಲ್ಲಿತ್ತು ಮೌಂಟ್ ಎವರೆಸ್ಟ್​ನ ಮುಕುಟ.

    ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ಆಕ್ಸಿಜನ್ ಸ್ಟಾಕ್ ಮುಗಿಯುತ್ತ ಬಂದರೂ ಧೃತಿಗೆಡದೆ ಮುಂದುವರಿದ ಇವರಿಬ್ಬರ ಸಾಹಸವನ್ನು ಕೆಳಗಿನ ಘಟ್ಟದಲ್ಲೇ ಉಳಿದುಕೊಂಡು ಗಮನಿಸುತ್ತಿದ್ದ ತಂಡದ ಇತರ ಸದಸ್ಯರುಗಳಿಗೆ ಮೌಂಟ್ ಎವರೆಸ್ಟ್​ನ ಮುಕುಟವನ್ನು ತಲುಪುತ್ತಿರುವ ಎರಡು ಬಿಂದುವಿನಂತೆ ಕಾಣುತ್ತಿದ್ದರು. ಅಷ್ಟೇ ಧುತ್ತನೆ ಬಂದ ಹಿಮಮಾರುತಗಳ ನಡುವೆ ಮಸುಕಾಗುತ್ತ ಹೋದ ಈ ಎರಡು ಬಿಂದುಗಳು ಅದಾದ ನಂತರ ಮತ್ತೆ ಕಾಣಲೇ ಇಲ್ಲ.

    1999ರಲ್ಲಿ ಮೌಂಟ್ ಎವರೆಸ್ಟ್ ಶಿಖರದ ಚಾರಣವನ್ನು ಕೈಗೊಂಡ ತಂಡವೊಂದರ ಸದಸ್ಯನಿಗೆ ಹಿಮದರಾಶಿಯಲ್ಲಿ ಹುದುಗಿದ್ದ ಶವ ಕಾಲಿಗೆ ತೊಡರಿತು. ಅದರ ಚಹರೆಗಳನ್ನು ಗುರುತಿಸಿಕೊಂಡು ವಾಪಸ್ಸಾದ ಮೇಲೆ ತನ್ನ ಈ ಅನುಭವವನ್ನು ವಿವರಿಸಿದ್ದೇ ತಡ ವಿಷಯ ಎಲ್ಲೆಡೆ ಹಬ್ಬಿ ಹಲವು ವರ್ಷಗಳ ಹಿಂದಿನ ಬಹುರ್ಚಚಿತ ಘಟನೆ ಮತ್ತೆ ಮುನ್ನೆಲೆಗೆ ಬಂತು. ಶವ ಸಿಕ್ಕ ಸ್ಥಳವನ್ನು ಜಾಲಾಡಿಸಿದ ನಂತರ ಅದು ಬ್ರಿಟಿಷ್ ಮೂಲದ ಚಾರಣಿಗ ಜಾರ್ಜ್ ಮಾಲೋರಿಯದ್ದೇ ಎಂಬುದು ಖಾತ್ರಿಯಾಯಿತು. 1924ರ ಜೂನ್ 8ರ ಆ ಘಟನೆಗೆ ಇದೀಗ ನೂರು ವರ್ಷ ತುಂಬಿದೆ. 1953ರ ಮೇ 29ರಂದು ತೇನ್ ಸಿಂಗ್ ಮತ್ತು ಎಡ್ಮಂಡ್ ಹಿಲೇರಿ ಮೌಂಟ್ ಎವರೆಸ್ಟನ್ನೇರುವ ಪ್ರಥಮವನ್ನು ದಾಖಲಿಸಿದರೂ ಬ್ರಿಟಿಷ್ ಮಾಧ್ಯಮಗಳು 1924ರ ಹಳೆಯ ಚಾರಣದ ಕಥೆಯನ್ನು ಮುನ್ನೆಲೆಗೆ ತಂದಿವೆ. ಅಂದಿನ ಆ ತಂಡದಲ್ಲಿದ್ದ ಸದಸ್ಯರನ್ನು ಹೀರೋಗಳನ್ನಾಗಿ ವಿಜೃಂಭಿಸುವ ಪ್ರಯತ್ನ ನಡೆದಿದೆ. ಅಂದು ಜಾರ್ಜ್ ಮಾಲೋರಿ ಆಕ್ಸಿಜನ್ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಸಿಲೆಂಡರನ್ನು ಆಂಡ್ರು ಇರ್ವಿನ್​ಗೆ ಹಸ್ತಾಂತರಿಸಿದನೆಂದೂ ನಂತರ ಆತ ಮೌಂಟ್ ಎವರೆಸ್ಟ್​ನ ತುತ್ತತುದಿಯೇರಲು ಯಶಸ್ವಿಯಾದನೆಂಬುದು ಅವರ ವಾದ. ನೂರುವರ್ಷದ ಹಿಂದಿನ ಆ ಚಾರಣದ ನಂತರ ಹಲವು ತಂಡಗಳು ಸತ್ಯಶೋಧನೆಗಾಗಿ ನಡೆಸಿದ ಹುಡುಕಾಟದಲ್ಲಿ ಪೂರಕ ದಾಖಲೆಯಾಗಿ ಇರ್ವಿನ್​ನ ಶವವಿನ್ನೂ ಸಿಕ್ಕೇ ಇಲ್ಲ. ‘ದಿ ಗ್ರೇಟ್ ಎವರೆಸ್ಟ್ ಮಿಸ್ಟರಿ’ ಅಂದರೆ ಎವರೆಸ್ಟ್​ನ ಇತಿಹಾಸದ ಅತ್ಯಂತ ನಿಗೂಢ ರಹಸ್ಯವೆಂದೇ ಖ್ಯಾತಿಯಾಗಿರುವ ಈ ಕಥಾನಕ ಇಂದಿಗೂ ಬಗೆಹರಿಯದಿದ್ದರೂ ಆತನೇ ಎವರೆಸ್ಟನ್ನೇರಿರುವ ಮೊದಲಿಗನೆಂದು ನಂಬುವ ಬ್ರಿಟಿಷರ ಸಂಖ್ಯೆಯೇನೂ ಕಮ್ಮಿಯಿಲ್ಲ.

    ಮೌಂಟ್ ಎವೆರೆಸ್ಟ್ ಹತ್ತುತ್ತಿರುವ ಚಾರಣಿಗರ ವಿಡಿಯೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತುಂಬ ಓಡಾಡುತ್ತಿತ್ತು. ಅದರಲ್ಲಿ ಕಂಡುಬಂದ ಚಾರಣಿಗರ ಸಾಲು ಬೆಂಗಳೂರಿನ ಆಫೀಸ್ ಸಮಯದ ಪ್ರಮುಖ ರಸ್ತೆಗಳನ್ನು ನೆನಪಿಸುತ್ತಿತ್ತು. 1953ರಲ್ಲಿ ಮೊದಲಬಾರಿಗೆ ತೇನ್ ಸಿಂಗ್ ಮತ್ತು ಎಡ್ಮಂಡ್ ಹಿಲೇರಿ ಆ ಶಿಖರದ ತುದಿಯಲ್ಲಿ ಕಾಲಿಟ್ಟ ಸಮಯಕ್ಕೂ ಈಗಿನ ಎವರೆಸ್ಟಿನ ಪರಿಸ್ಥಿತಿಗೂ ಅಜಗಜಾಂತರವಿದೆ ಎಂಬುದನ್ನು ಹೇಳಲು ಆ ಚಿತ್ರಕ್ಕಿಂತ ಬೇರೆ ಉತ್ತಮ ದಾಖಲೆ ಬೇಕಿಲ್ಲ. 1990ರವರೆಗೆ ವರ್ಷವೊಂದಕ್ಕೆ ಮೌಂಟ್ ಎವರೆಸ್ಟ್ ದಂಡಯಾತ್ರೆಗೆ ಹೋಗುವ ತಂಡಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇರುತ್ತಿತ್ತು, ಜಗತ್ತಿನ ತ್ರಾಸದಾಯಕ ಚಾರಣಗಳಲ್ಲಿ ಪ್ರಮುಖವಾದದ್ದೆಂದು ಹೇಳಲಾಗುವ ಈ ಚಾರಣಕ್ಕೆ ಅಗತ್ಯವಾಗಿರುವ ಕೌಶಲ, ಪರಿಣಿತಿ, ಸಾಮರ್ಥ್ಯ ಮತ್ತು ಖರ್ಚುಗಳನ್ನು ಸಂಭಾಳಿಸುವುದು ಎಲ್ಲರಿಗೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚಿನವರು ಈ ಸಾಹಸಕ್ಕೆ ಕೈ ಹಾಕದೆ ದೂರವುಳಿಯುತ್ತಿದ್ದರು.

    ಕಳೆದ ಶತಮಾನದ ಕೊನೆಯಲ್ಲಿ ನೇಪಾಳವು ಪ್ರವಾಸೋದ್ಯಮವನ್ನು ಉತ್ತೇಜಿಸಿ ತನ್ನ ಕಮಾಯಿಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಹಿಮಾಲಯದ ಚಾರಣಕ್ಕಿದ್ದ ನಿರ್ಬಂಧಗಳನ್ನೆಲ್ಲ ಸಡಿಲಿಸಿತು. ಅದರ ಪರಿಣಾಮ 2000ರಲ್ಲಿ 56, 2010ರಲ್ಲಿ 81, 2019ರಲ್ಲಿ 92 ದಂಡಯಾತ್ರೆಗಳು ಕೈಗೊಳ್ಳಲ್ಪಟ್ಟವು. ಒಂದು ಕಾಲದಲ್ಲಿ ಎಂಟೆದೆಯವರಿಗೆ ಮಾತ್ರ ಎಂದೇ ಬಿಂಬಿಸಲ್ಪಡುತ್ತಿದ್ದ ಮೌಂಟ್ ಎವರೆಸ್ಟ್​ನ ಚಾರಣ ವ್ಯಾಪಾರೀಕರಣದಿಂದ ಸಂಪೂರ್ಣವಾಗಿ ಬದಲಾಯಿತು. ಹಿಮಾಲಯದ ಶ್ರೇಣಿಗಳಲ್ಲಿನ ಕೆಲ ಪರ್ವತಗಳನ್ನು ಹತ್ತಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿದವರಿಗೆ ಮಾತ್ರ ಮೌಂಟ್ ಎವರೆಸ್ಟ್​ನ ಚಾರಣದ ಪರವಾನಿಗೆ ಎಂಬ ಕಟ್ಟಳೆಗಳನ್ನೆಲ್ಲ ಗಾಳಿಗೆ ತೂರಲಾಯಿತು. ಅಷ್ಟೇ ಅಲ್ಲ ಚಾರಣಕ್ಕೆ ಬಂದವರ ಭಾರವನ್ನು ಹಗುರ ಮಾಡಲು ಯಾಕ್ ಮತ್ತು ಶೇರ್ಫಾಗಳ ಬಳಕೆ, ಶಿಖರದ ಪಾದದಲ್ಲಿರುವ ಬೇಸ್​ಕ್ಯಾಂಪ್ ಬದಲಿಗೆ ಕಾಸು ಕೊಟ್ಟವರಿಗೆ ಹೆಲಿಕಾಪ್ಟರ್ ಮೂಲಕ ನೇರವಾಗಿ ಎರಡನೇ ಕ್ಯಾಂಪ್​ಗೆ ಏರ್​ಲಿಫ್ಟ್ ಹೀಗೆ ವಿವಿಧ ಸೇವೆಗಳು ಆರಂಭವಾಗಿ ಅರೆಬೆಂದ ಚಾರಣಿಗರೆಲ್ಲ ‘ಎವರೆಸ್ಟ್ ಹೀರೋ’ಗಳ ಪಟ್ಟಿಗೆ ಸೇರ್ಪಡೆಯಾದರು. ಹೀಗಾಗಿ ಒಂದು ಕಾಲದಲ್ಲಿ ದೇಶ-ದೇಶಗಳ ನಡುವೆ ಪ್ರತಿಷ್ಠೆಯ ವಿಷಯವಾಗಿದ್ದ ಮೌಂಟ್ ಎವರೆಸ್ಟಿನ ದಿಗ್ವಿಜಯವಿದೀಗ ನಿಧಾನವಾಗಿ ತನ್ನ ಗತ್ತನ್ನು ಕಳೆದುಕೊಳ್ಳುತ್ತಿದೆ.

    ವಸಂತಕಾಲ ಮೌಂಟ್ ಎವರೆಸ್ಟ್ ಶಿಖರದ ಚಾರಣಕ್ಕೆ ಅತ್ಯಂತ ಪ್ರಸಕ್ತ ಸಮಯ. ಹೀಗಾಗಿ ಈ ಸಮಯದಲ್ಲಿ ಗೌರಿಶಂಕರದ ಚಾರಣಕ್ಕೆ ಜನ ಮುಗಿಬೀಳುತ್ತಾರೆ. ದುಡ್ಡು ಮಾಡಲೂ ಇದು ಸೂಕ್ತ ಸಮಯವೆಂದು ಅರಿತಿರುವ ನೇಪಾಳವು ಈ ವರ್ಷದಲ್ಲಿ ಈಗಾಗಲೇ ನಾಲ್ಕುನೂರಕ್ಕೂ ಹೆಚ್ಚು ಜನರಿಗೆ ಪಾಸನ್ನು ನೀಡಿದೆ. ಸಹಜವಾಗಿಯೇ ವ್ಯಾಪಾರೀಕರಣದ ಸೈಡ್​ಎಫೆಕ್ಟ್ ಇದೀಗ ಈ ಮೇರುಪರ್ವತದ ಮೇಲೂ ಕಾಣಬರುತ್ತಿದೆ. ದಂಡಿಯಾಗಿ ಬರುತ್ತಿರುವ ಚಾರಣಿಗರು ವಾಪಸ್ಸಾಗುವಾಗ ಬಿಟ್ಟು ಹೋಗುತ್ತಿರುವ ತ್ಯಾಜ್ಯದಿಂದ ಮೌಂಟ್ ಎವರೆಸ್ಟ್ ಮಲಿನವಾಗುತ್ತಿದೆ. ಒಂದು ಅಂದಾಜಿನಂತೆ ಮೌಂಟ್ ಎವರೆಸ್ಟ್​ಗೆ ಚಾರಣಿಸುವ ಪ್ರತಿಯೊಬ್ಬನೂ ಸುಮಾರು ಎಂಟು ಕಿಲೋ ತ್ಯಾಜ್ಯವನ್ನು ಉತ್ಪಾದಿಸುತ್ತಾನೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿವರ್ಷ ಅಲ್ಲಿ ಭೇಟಿ ನೀಡುವ ಚಾರಣಿಗರು ಸಾವಿರಾರು ಕಿಲೋ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಅಲ್ಲಿನ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್ ಬಾಟಲಿ, ಫೋಟೋಗಾಗಿ ಕೊಂಡೊಯ್ಯುವ ಧ್ವಜಗಳು, ಪೊಟ್ಟಣ, ಬಟ್ಟೆಬರೆ, ಸ್ಯಾನಿಟರಿ ಪ್ಯಾಡ್ ಇವುಗಳದ್ದೇ ಸಿಂಹಪಾಲು. ಇದನ್ನು ಗಮನಿಸಿ ಅಲ್ಲಿನ ಪರಿಸರದ ರಕ್ಷಣೆಗೆ ಕೆಲವು ಸಂಘಸಂಸ್ಥೆಗಳು ಧ್ವನಿಯೆತ್ತಿದ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರಕ್ಕೆ ಬಿಸಿತಟ್ಟಿದೆ. ಕಳೆದ ಮೇ ತಿಂಗಳಿನಲ್ಲಿ ಅಲ್ಲಿನ ಪೊಲೀಸರು ಕೈಗೊಂಡ ಐವತ್ತು ದಿನಗಳ ಹಿಮಾಲಯ ಸ್ವಚ್ಛತಾ ಅಭಿಯಾನದಲ್ಲಿ ಕೇವಲ ಮೌಂಟ್ ಎವರೆಸ್ಟ್ ಒಂದರಲ್ಲೇ ಹನ್ನೊಂದು ಟನ್ ತ್ಯಾಜ್ಯದ ಜೊತೆಗೆ ಕೆಲ ಮೃತದೇಹಗಳನ್ನೂ ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧಗಳನ್ನು ಹಾಕುವ ಮೂಲಕ ಅಲ್ಲಿನ ಪರಿಸರವನ್ನು ಕಾಪಾಡುವತ್ತ ನೇಪಾಳದ ಚಿತ್ತವಿದೀಗ ಹರಿದಿದೆ. ಸದ್ಯಕ್ಕೆ ಅಲ್ಲಿ ಐವತ್ತು ಟನ್ ತ್ಯಾಜ್ಯ ಮತ್ತು ಇನ್ನೂರಕ್ಕೂ ಹೆಚ್ಚು ಶವಗಳು ಇನ್ನೂ ಹರಡಿಕೊಂಡಿವೆ ಎಂಬುದು ಪರಿಣಿತರ ಅಂದಾಜು. ಈ ನಡುವೆ ನೇಪಾಳದ ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಮೌಂಟ್ ಎವರೆಸ್ಟ್ ಚಾರಣಕ್ಕೆ ಪ್ರತಿ ವರ್ಷ ಕೊಡುವ ಪಾಸ್​ಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ತಾಕೀತು ಮಾಡಿದೆ. ಇದು ಬರುವ ದಿನಗಳಲ್ಲಿ ಮೌಂಟ್ ಎವರೆಸ್ಟ್​ನ ಪರಿಸ್ಥಿತಿಯನ್ನು ಸುಧಾರಿಸಲಿದೆಯೇ ಕಾದುನೋಡಬೇಕಿದೆ.

    ಜು.02 ನಟ ಗಣೇಶ್ ಹುಟ್ಟುಹುಬ್ಬ; ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ ಗೋಲ್ಡನ್ ಸ್ಟಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts