More

    ಹಣ ಪಾವತಿಸಿದರೂ ವಿದ್ಯುತ್ ಸಂಪರ್ಕ ನೀಡಿಲ್ಲ

    ಮದ್ದೂರು: ಅಕ್ರಮ, ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯಲು ಹಣ ಪಾವತಿ ಮಾಡಿದ್ದ ರೈತರಿಗೆ ಈ ವರೆಗೂ ಸಂಪರ್ಕ ನೀಡಿಲ್ಲ ಎಂದು ರೈತ ಮುಖಂಡ ಕ್ಯಾತಘಟ್ಟ ರವಿಕುಮಾರ್ ಆರೋಪಿಸಿದರು.


    ಪಟ್ಟಣದ ಸೆಸ್ಕ್ ಕಚೇರಿಯಲ್ಲಿ ಶನಿವಾರ ಅಹವಾಲುಗಳನ್ನು ಸ್ವೀಕರಿಸಿ ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಮೊದಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ಮಾಡದ ಕಾರಣ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
    ಅನುದಾನದ ಲಭ್ಯತೆ ಹಾಗೂ ಸಂಪರ್ಕದ ಅಂತರ ಗಮನದಲ್ಲಿರಿಸಿಕೊಂಡು 500 ಮೀ. ಅಂತರದೊಳಗೆ ಇರುವ ರೈತರಿಗೆ ಸಂಪರ್ಕ ನೀಡಲಾಗುವುದು. ಉಳಿದ ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಸೆಸ್ಕ್ ವತಿಯಿಂದಲೆ ಆನ್‌ಲೈನ್ ಅರ್ಜಿ ಸಲ್ಲಿಸಿದ್ದು, ಅವರೆಲ್ಲರಿಗೂ ಸಂಪರ್ಕ ಒದಗಿಸಲಾಗುವುದು ಎಂದರು.


    ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಚಂದೂಪುರ ಶಿವಲಿಂಗೇಗೌಡ ಮಾತನಾಡಿ, ಪಟ್ಟಣ ಸೇರಿದಂತೆ ಎಲ್ಲೆಡೆ ಟ್ರಾನ್ಸ್ ಫಾರ್ಮರ್ ಹಾಗೂ ಕಂಬಗಳಿಗೆ ಬಳ್ಳಿ ಬೆಳೆದುಕ್ಕೊಂಡಿವೆ. ಇದರಿಂದ ವಿದ್ಯುತ್ ಅವಘಡವಾದರೆ ಯಾರು ಹೊಣೆ ಎಂದರು. ಇಂತಹ ನಿರ್ಲಕ್ಷ್ಯಕ್ಕೆ ಅವಕಾಶ ಇಲ್ಲದಂತೆ ಕ್ರಮವಹಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಅಧೀಕ್ಷಕ ಅಭಿಯಂತರ ಸೋಮಶೇಖರ್ ಸೂಚಿಸಿದರು.
    ಅಜ್ಜಹಳ್ಳಿ ಗ್ರಾಮದಲ್ಲಿ ಹೈ ಟೆನ್ಸನ್ ತಂತಿಯನ್ನು ಸಾಮಾನ್ಯ ವೊಲ್ಟೆಜ್‌ನ ಸಂಪರ್ಕ ಇದ್ದ ಕಂಬಕ್ಕೆ ಅಳವಡಿಕೆ ಮಾಡಿ, ಹೊಸ ಕಂಬ ಹಾಕದೆ ಅಧಿಕಾರಿಗಳು ಲೋಪ ಎಸಗಿದ್ದಾರೆ. ಇದರಿಂದ ಎರಡೂ ಲೈನ್‌ಗಳು ಪರಸ್ಪರ ತಾಗಿ ಅವಘಡವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಗಮನಸೆಳೆದರು. ಇದಕ್ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಶೀಘ್ರವೇ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.


    ಸೊಮನಹಳ್ಳಿ ಬಳಿ ವಿದ್ಯುತ್ ವಿತರಣೆ ಕೇಂದ್ರ ಶೀಘ್ರದಲ್ಲೇ ಪ್ರಾರಂಭವಾಗುತ್ತಿದ್ದು, ಇದರಿಂದ ವಿದ್ಯುತ್ ಸರಬರಾಜಿನ ಕೊರತೆ ನೀಗಲಿದೆ. ಅಲ್ಲದೆ ಖಾಸಗಿಯವರ ಜಮೀನನ್ನು ಬಾಡಿಗೆ ಪಡೆದು ಸೋಲಾರ್ ಪ್ಲಾಂಟ್ ಅಳವಡಿಸಲು ತಿರ್ಮಾನಿಸಲಾಗಿದೆ. ಹೀಗಾಗಿ ರೈತರ ಅನುಪಯುಕ್ತ ಬೇಸಾಯದ ಜಮೀನು ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಗ್ರಾಹಕರು ತುರ್ತು ಸಮಸ್ಯೆ ಇದ್ದಲ್ಲಿ ಸಹಾಯವಾಣಿ 112ಗೆ ಕರೆಮಾಡುವಂತೆ ಸೋಮಶೇಖರ್ ಸಲಹೆ ನೀಡಿದರು.


    ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಮೇಶ, ಜಿ.ಮೋಹನ್, ಎಒ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts