More

    ಬೆಂಗಳೂರಿನಲ್ಲಿ ವೃದ್ಧೆ ಸಾವು, ಡೆಂಘೆ ಶಂಕೆ

    ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 80ರ ಹರೆಯದ ವೃದ್ಧೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದು, ಡೆಂಘೆ ರೋಗದಿಂದ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ.

    ಕೆಲ ದಿನಗಳ ಹಿಂದೆ ಈ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚೇತರಿಕೆ ಹಾದಿ ಹಿಡಿದ್ದರು. ಆದರೆ, ದಿಢೀರ್ ಆಗಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಆಸ್ಪತ್ರೆಯು ಡೆಂಘೆಯಿಂದ ಸಾವಿಗೀಡಾಗಿರುವುದನ್ನು ದೃಢಪಡಿಸಿಲ್ಲ. ಬದಲಾಗಿ ಬಿಬಿಎಂಪಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.

    ಕೆಲ ದಿನಗಳಿಂದ ನಗರದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ವೃದ್ಧೆಯ ಸಾವು ಆತಂಕ ಸೃಷ್ಟಿಸಿದೆ. ಕಳೆದ ಜನವರಿಯಿಂದ ಈ ತಿಂಗಳ ಮಧ್ಯ ಭಾಗದವರೆಗೆ 1230 ಡೆಂಘೆ ಪ್ರಕರಣಗಳು ದೃಢಪಟ್ಟಿದ್ದರೂ, ಯಾರೊಬ್ಬರೂ ಸತ್ತಿರಲಿಲ್ಲ. ಡೆಂಘೆ ಪ್ರಕರಣಗಳ ಉಲ್ಬಣದಿಂದಾಗಿ ಬಿಬಿಎಂಪಿ ನಗರದಲ್ಲಿ ಮನೆ ಮನೆ ಸಮಿಕ್ಷೆ ನಡೆಸಿ ಜಾಗೃತಿ ಮೂಡಿಸುತ್ತಿದೆ.

    ಡೆತ್ ಆಡಿಟ್‌ಗೆ ಸೂಚನೆ:

    ವೃದ್ಧೆ ಸಾವಿನ ಸಂಬಂಧ ನಿಖರವಾದ ಕಾರಣ ತಿಳಿಯಲು ಶನಿವಾರ ಡೆತ್ ಆಡಿಟ್ ಮಾಡಲು ನಿರ್ಧರಿಸಲಾಗಿದೆ. ಆ ನಂತರ ನಿಯಮ ಪ್ರಕಾರ ವರದಿಯನ್ನು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗುವುದು ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

    ಇದರ ಹೊರತಾಗಿಯೂ ಸ್ಯಾಂಪಲ್ ಒಳಗೊಂಡ ವರದಿಯನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಿ ದೃಢಪಡಿಸಿಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ವೃದ್ಧೆಯ ಸಾವು ಅನುಮಾನಾಸ್ಪದ ಎಂದೇ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts