More

    ಹಣಕಾಸು ವ್ಯವಹಾರ ದಕ್ಷ ನಿರ್ವಹಣೆ: ನಿರ್ದಿಷ್ಟ ಹೊಣೆ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಬೇರೆ ನಿಗಮ-ಮಂಡಳಿ, ಸಂಸ್ಥೆಗಳಿಗೆ ವ್ಯಾಪಿಸಿರಬಹುದು ಎಂಬ ಶಂಕೆ ಹೆಚ್ಚುತ್ತಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಅಲರ್ಟ್ ಆಗಿ ‘ಉತ್ತರದಾಯಿತ್ವ’ ನಿಗದಿಪಡಿಸಿದ್ದಾರೆ.

    ನಿಗಮ-ಮಂಡಳಿಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು ಇತ್ಯಾದಿ ಸಾರ್ವಜನಿಕ ಸಂಸ್ಥೆಗಳಿಗೆ ‘ವಿವೇಕಯುಕ್ತ ಹಣಕಾಸು ನಿರ್ವಹಣೆ’ ಬಗ್ಗೆ ನಿರ್ದೇಶನಗಳನ್ನು ನೀಡಿದ್ದಾರೆ.

    ಸಾಮೂಹಿಕ ಹೊಣೆಗಾರಿಕೆ

    ಮುಖ್ಯವಾಗಿ ಜಮಾ, ಖರ್ಚು ಒಳಗೊಂಡು ಆರ್ಥಿಕ ವ್ಯವಹಾರದಲ್ಲಿ ದಕ್ಷತೆ, ಪಾರದರ್ಶಕತೆ ಹಾಗೂ ವೆಚ್ಚದಲ್ಲಿ ನಿಖರತೆ, ಉದ್ದೇಶದ ಸ್ಪಷ್ಟತೆ-ಸಾರ್ಥಕತೆಯನ್ನು ರಜನೀಶ್ ಗೋಯಲ್ ಬಯಸಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾಲ್ಕು ಪುಟಗಳ ಸುದೀರ್ಘ ಸುತ್ತೋಲೆ ಹೊರಡಿಸಿ, ಸಾಮೂಹಿಕ ಹೊಣೆಗಾರಿಕೆ ನಿಗದಿಪಡಿಸಿದ್ದಾರೆ. ಅಧಿಕಾರಿಗಳು ಮಾತ್ರವಲ್ಲ ಅಧಿಕಾರೇತರ ನಿರ್ದೇಶಕ ಮಂಡಳಿ ಸದಸ್ಯರು ಏನು ಮಾಡಬೇಕೆಂದು ವಿಸ್ತೃತವಾಗಿ ತಿಳಿಸಿದ್ದಾರೆ.

    ಆಯಾ ನಿಗಮ-ಮಂಡಳಿಗಳು ವ್ಯವಸ್ಥಾಪಕ ನಿರ್ದೇಶಕ/ಸಿಇಒಗಳಿಗೆ ತುಸು ಹೆಚ್ಚಿನ ಜವಾಬ್ದಾರಿ ಗೊತ್ತುಪಡಿಸಿದ್ದಾರೆ. ಆಡಳಿತ ಇಲಾಖೆ ಕಾರ್ಯದರ್ಶಿಗಳಿಗೆ ಮೇಲ್ವಿಚಾರಣೆ, ಆಡಳಿತ ಮಂಡಳಿ ನಿರ್ದೇಶಕರಿಗೆ ತಪಾಸಣೆ ಅಗತ್ಯತೆ ಬಗ್ಗೆಯೂ ತಿಳಿಸಿದ್ದಾರೆ.

    ಈ ನಡುವೆ ನಿಗಮ-ಮಂಡಳಿ, ಸಾರ್ವಜನಿಕ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಲು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿರುವುದನ್ನು ಸ್ಮರಿಸಬಹುದು.

    ಯಾರಿಗೆ ಯಾವ ಜವಾಬ್ದಾರಿ ?

    ವ್ಯವಸ್ಥಾಪಕ ನಿರ್ದೇಶಕ/ ಸಿಇಒ: ಸಮಗ್ರ ಪರಿಶೀಲನೆ, ಅವಧಿ ಠೇವಣಿಗಳ ಪರಾಮರ್ಶೆ, ಪ್ರತಿ ತಿಂಗಳು ತೃತೀಯ ತಂಡದಿಂದ ಭೌತಿಕ ದೃಢೀಕರಣ, ಹೂಡಿಕೆಯ ವಿಧಾನ, ಠೇವಣಿಗಳ ಸಂಭಾವ್ಯ ಅಪಾಯ ನಿರ್ವಹಣೆ, ಪ್ರತಿ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯಸೂಚಿ ತುಲನೆ, ಆಂತರಿಕ ವರದಿ ಸಲ್ಲಿಕೆ

    ಆಡಳಿತ ಇಲಾಖೆ ಕಾರ್ಯದರ್ಶಿಗಳು: ಸಾರ್ವಜನಿಕ ನಿಗಮ, ಸಂಸ್ಥೆಗಳು ನಿರ್ದೇಶನ ಅನುಪಾಲನೆ ಮಾಡಿರುವುದನ್ನು ಖಾತರಿಪಡಿಸಿಕೊಳ್ಳುವುದು, ನಿರ್ದೇಶನ ಪಾಲನೆ ಮಾಡದ ನಿಗಮ/ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ/ಸಿಇಒ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು

    ಸರ್ಕಾರದಿಂದ ನಾಮ ನಿರ್ದೇಶಿತರು: ಬ್ಯಾಂಕ್‌ಗಳ ವಿವಿಧ ಖಾತೆಗಳಲ್ಲಿನ ಆರಂಭಿಕ, ಮುಕ್ತಾಯ ಶಿಲ್ಕುಗಳ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಪರಿಶೀಲನೆ, ಆಂತರಿಕ ಹಾಗೂ ಶಾಸನಾತ್ಮಕ ಲೆಕ್ಕಪರಿಶೋಧಕರ ವರದಿ ಪರಾಮರ್ಶೆ, ಹಣಕಾಸು ವಹಿವಾಟು ವರದಿಗಳನ್ನು ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts