More

    ಸಂಪಾದಕೀಯ: ಡೆಂಘೆ ನಿಯಂತ್ರಿಸಿ

    ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಯಿಲೆಗಳ ಹಾವಳಿ ಹೆಚ್ಚಿದ್ದು, ಜನರು ಹೈರಾಣಾಗಿದ್ದಾರೆ. ಅದರಲ್ಲೂ ಡೆಂಘ ಪ್ರಕರಣಗಳ ಸಂಖ್ಯೆ ಏರಿಕೆ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸೋಮವಾರದವರೆಗೆ 5,374 ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಐವರ ಸಾವು ಸಂಭವಿಸಿದೆ. ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಘ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 1200ಕ್ಕೂ ಅಧಿಕ ಡೆಂಘ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತವರ್ಗ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಸಾಕ್ಷಿ.

    ಕಳೆದ ವರ್ಷದ (2023) ಜೂನ್​ಗೆ ಹೋಲಿಸಿದರೆ ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ನಿದರ್ಶನ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಡೆಂಘ ಜ್ವರದಿಂದ ಬಳಲುತ್ತಿದ್ದು, ಈ ಕಾಯಿಲೆ ನಿಯಂತ್ರಣಕ್ಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಅವಶ್ಯಕತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಡೆಂಘ ನಿಯಂತ್ರಣದ ದೃಷ್ಟಿಯಿಂದ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಅಗತ್ಯ ಚುಚ್ಚುಮದ್ದು ಮತ್ತು ಪ್ಲೇಟ್​ಲೆಟ್​ಗಳ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಡೆಂಘ ಸೇರಿದಂತೆ ಮಳೆಗಾಲದಲ್ಲಿ ಆವರಿಸುವ ಕಾಯಿಲೆಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಮಾಹಿತಿ ಅಷ್ಟೊಂದು ಇಲ್ಲದಿರುವುದು ಕೂಡ ಈ ಸ್ಥಿತಿಗೆ ಕಾರಣ. ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆಯಲ್ಲಿ ತೊಡಗಿವೆ ಎಂಬ ಆರೋಪ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಮಳೆನೀರು ನಿಲ್ಲುವ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಗಳ ಸಂತತಿ ಹೆಚ್ಚುತ್ತಿದ್ದು, ಡೆಂಘ ವೇಗವಾಗಿ ಹರಡಲು ಕಾರಣವಾಗಿದೆ. ಸೊಳ್ಳೆಗಳ

    ಉತ್ಪತ್ತಿ ತಾಣಗಳನ್ನು ಸ್ಥಳೀಯ ಸಂಸ್ಥೆಗಳು ಗುರುತಿಸಿ, ಲಾರ್ವಾ ನಾಶಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಮನೆ-ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಬೇಕು. ಜನಜಾಗೃತಿಗೂ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುವುದು ಅವಶ್ಯ. ಬಿಬಿಎಂಪಿ ಸೇರಿದಂತೆ ಇತರ ನಗರಗಳ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಜನರ ಕಷ್ಟವನ್ನು ಪರಿಹರಿಸಬೇಕಿದೆ. ಡೆಂಘ ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆಯಾದರೂ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮತ್ತು ಕಾಯಿಲೆಯ ಪ್ರಸರಣ ಪ್ರಮಾಣ ತಗ್ಗಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

    ನಗರಪ್ರದೇಶಗಳಲ್ಲಿ ಮಳೆನೀರಿನ ಸರಾಗ ಹರಿವಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಮಳೆಗಾಲ ಆರಂಭವಾಗುವ ಮುನ್ನ ಸ್ಥಳೀಯ ಸಂಸ್ಥೆಗಳು ಇಂಥ ಸಮಸ್ಯೆಗಳನ್ನು ಬಗೆಹರಿಸುವುದೂ ಇಲ್ಲ. ಕಾಯಿಲೆಯ ಪ್ರಸರಣ ಪ್ರಮಾಣ ಹೆಚ್ಚಳಗೊಂಡ ಮೇಲೆ ಕ್ರಮಕ್ಕೆ ಮುಂದಾಗುವ ಬದಲು, ಮಳೆಗಾಲ ಆರಂಭಕ್ಕೂ ಮುನ್ನ ಸೂಕ್ತ ತಯಾರಿ ಮಾಡಿಕೊಂಡಿದ್ದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಜನರ ಸಂಕಷ್ಟವನ್ನು ತಪ್ಪಿಸಬಹುದಿತ್ತು. ಸೊಳ್ಳೆಗಳ ನಿಯಂತ್ರಣ ಸೇರಿ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಈಗಿನ ಅಗತ್ಯ. ಸ್ಥಳೀಯ ಆಡಳಿತಗಳ ಜತೆಗೂಡಿ ಆರೋಗ್ಯ ಇಲಾಖೆ ಈ ಬಗ್ಗೆ ಜನರಲ್ಲೂ ಅರಿವು ಮೂಡಿಸಬೇಕು. ಸ್ವಚ್ಛತೆ ಮೂಲಮಂತ್ರವಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts