More

    ಎಲ್ಲರಿಗೂ ಧನ್ಯವಾದ…ದ್ರಾವಿಡ್​ ವಿದಾಯದ ಭಾಷಣ ಕೇಳಿದ್ರೆ ಕಣ್ತುಂಬಿ ಬರುತ್ತೆ! ಟೀಮ್​ ಇಂಡಿಯಾ ಭಾವುಕ

    ನವದೆಹಲಿ: ಟೀಮ್​​ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಿದೆ. 2021ರ ನವೆಂಬರ್ ತಿಂಗಳಲ್ಲಿ ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ದ್ರಾವಿಡ್, ಟೀಮ್ ಇಂಡಿಯಾವನ್ನು 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿ ಫೈನಲ್​ಗೆ, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ಗೆ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಮುನ್ನಡೆಸಿದರು. ಈ ಎಲ್ಲ ಟೂರ್ನಿಯಲ್ಲಿ ಕೊನೆಯ ಹಂತದಲ್ಲಿ ಟೀಮ್​ ಇಂಡಿಯಾಗೆ ಅದೃಷ್ಟ ಕೈಕೊಟ್ಟಿತು.

    ಆದರೆ, ಈ ಬಾರಿ ಅಮೆರಿಕ-ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ದಾಖಲಿಸುವ ಮೂಲಕ 13 ವರ್ಷಗಳ ನಂತರ ಟೀಮ್​ ಇಂಡಿಯಾ ವಿಶ್ವಕಪ್​ ಜಯಿಸಿತು. ಕಳೆದ ಮೂರು ವರ್ಷಗಳಲ್ಲಿ ದ್ರಾವಿಡ್ ಅವರ ಕೋಚಿಂಗ್ ಅಡಿಯಲ್ಲಿ ಟೀಮ್​ ಇಂಡಿಯಾ ಅತ್ಯುತ್ತಮ ಹಾಗೂ ಬಲಿಷ್ಠ ತಂಡವಾಗಿ ಬೆಳೆದಿದೆ. ಹಿರಿಯರ ಜತೆಗೆ ದ್ರಾವಿಡ್ ತಂಡದಲ್ಲಿ ಕಿರಿಯರಿಗೂ ಉತ್ತಮ ಅವಕಾಶ ನೀಡುವ ಮೂಲಕ ಸೂಪರ್ ಸ್ಟ್ರಾಂಗ್ ತಂಡವನ್ನಾಗಿಸಿದರು. ಟೀಮ್​ ಇಂಡಿಯಾದ ಯಶಸ್ಸಿನಲ್ಲಿ ದ್ರಾವಿಡ್​ ಪಾತ್ರ ಮಹತ್ವದ್ದಾಗಿದೆ.

    ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನೊಂದಿಗೆ ಮುಖ್ಯ ಕೋಚ್ ದ್ರಾವಿಡ್ ಅವಧಿ ಮುಗಿದಿದೆ. ವಿಶ್ವಕಪ್ ಗೆದ್ದ ನಂತರ ದಿಗ್ಗಜ ದ್ರಾವಿಡ್ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳಲಿದ್ದಾರೆ. ತಮ್ಮ ಕೋಚಿಂಗ್‌ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿದ್ದರಿಂದ ತುಂಬಾ ಖುಷಿಯಾಗಿದ್ದಾರೆ. ಇದೇ ವೇಳೆ ದ್ರಾವಿಡ್ ಕೋಚ್ ಆಗಿ ತಂಡವನ್ನು ತೊರೆಯುತ್ತಿರುವುದಕ್ಕೆ ತುಂಬಾ ಭಾವುಕರಾದರು. ಅಂತಿಮ ಪಂದ್ಯದ ನಂತರ, ದ್ರಾವಿಡ್ ಅವರು ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಮುಖ್ಯ ಕೋಚ್ ಆಗಿ ತಮ್ಮ ಕೊನೆಯ ಭಾಷಣ ಮಾಡಿದರು. ಆ ಭಾಷಣ ಕೇಳಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಣ್ಣೀರು ಹಾಕುವುದು ಖಚಿತ. ದ್ರಾವಿಡ್ ಮಾತನಾಡುವಾಗ ನಾಯಕ ರೋಹಿತ್ ಶರ್ಮಾ ಜೊತೆಗೆ ಭಾರತದ ಆಟಗಾರರು ಕೂಡ ಭಾವುಕರಾದರು.

    See also  ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದು ವಾರೆ ನೋಟ: ಕೈ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

    ನಾನು ಮೂಕವಿಸ್ಮಿತನಾಗಿದ್ದೇನೆ. ಈ ಕ್ಷಣಗಳು ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎಷ್ಟು ರನ್ ಗಳಿಸಿದ್ದೀರಿ ಮತ್ತು ಎಷ್ಟು ವಿಕೆಟ್​ಗಳನ್ನು ಪಡೆದಿದ್ದೀರಿ ಎಂಬುದು ನೆನಪಿರುವುದಿಲ್ಲ ಆದರೆ, ಈ ವಿಜಯದ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ಇದನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

    ಸಾಕಷ್ಟು ನಿರಾಸೆಗಳ ಬಳಿಕವೂ ನೀವು ಹಿಂತಿರುಗಿದ ರೀತಿ, ನೀವು ಹೋರಾಡಿದ ರೀತಿ, ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ ರೀತಿ ನಿಜಕ್ಕೂ ಸ್ಮರಣೀಯವಾಗಿದೆ. ಜಯದ ಹತ್ತಿರ ಬಂದು ಸೋಲು ಅನುಭವಿಸಿದ ಕೆಲವು ನಿರಾಶೆ ಕ್ಷಣಗಳಿವೆ. ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಆದರೆ, ನಮ್ಮ ಹುಡುಗರ ತಂಡ ಏನು ಮಾಡಿದೆ, ನೀವೆಲ್ಲರೂ ಏನು ಮಾಡಿದ್ದೀರಿ, ಸಹಾಯಕ ಸಿಬ್ಬಂದಿಯಲ್ಲಿ ಎಲ್ಲರೂ ಏನು ಮಾಡಿದ್ದಾರೆ, ನಾವು ಪಟ್ಟ ಶ್ರಮ ಎಂಥದ್ದು, ನಾವು ಮಾಡಿದ ತ್ಯಾಗ ಎಲ್ಲವೂ ನಿಮಗೆ ತಿಳಿದಿದೆ. ನಾನು ಒಟ್ಟಾರೆಯಾಗಿ ಯೋಚಿಸುವುದೇನೆಂದರೆ, ನಿಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಮತ್ತು ನೀವು ಏನನ್ನು ಸಾಧಿಸಿದ್ದೀರಿ ಎಂಬುದರ ಬಗ್ಗೆ ಇಡೀ ದೇಶವು ನಿಜವಾಗಿಯೂ ಹೆಮ್ಮೆಪಡುತ್ತದೆ ಎಂದು ದ್ರಾವಿಡ್​ ಹೇಳಿದರು.

    ಈ ವೈಭವದ ಹಾದಿಯಲ್ಲಿ ಎಲ್ಲರೂ ಮಾಡಿದ ತ್ಯಾಗವನ್ನು ಸ್ಮರಿಸಿದ ದ್ರಾವಿಡ್​, ನೀವು ಇಲ್ಲಿ ಆನಂದಿಸುತ್ತಿರುವುದನ್ನು ನೋಡಲು ನಿಮ್ಮ ಕುಟುಂಬಗಳು ಮಾಡಿದ ಹಲವಾರು ತ್ಯಾಗಗಳಿವೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಕುಟುಂಬದ ಸದಸ್ಯರು, ಪಾಲಕರು, ಹೆಂಡತಿ, ಮಕ್ಕಳು, ಒಡಹುಟ್ಟಿದವರು, ನಿಮ್ಮ ತರಬೇತುದಾರರು ಸಾಕಷ್ಟು ತ್ಯಾಗ ಮಾಡಿದ್ದಕ್ಕೆ ಈ ಡ್ರೆಸ್ಸಿಂಗ್ ರೂಮ್‌ನಲ್ಲಿ ನೀವು ಒಳ್ಳೆಯ ಕ್ಷಣಗಳನ್ನು ಆನಂದಿಸುತ್ತಿದ್ದೀರಿ. ಈ ಕ್ಷಣಗಳ ಭಾಗವಾಗಿ ನನ್ನನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನು ಮತ್ತು ನನ್ನ ತಂಡವನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನಮ್ಮನ್ನು ಗೌರವಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದರು.

    See also  ಸಖತ್ ಟ್ರೋಲ್ ಆಗುತ್ತಿದೆ ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ!

    ಕೋಚ್​ ಆಗಿ ಮುಂದುವರಿಯಲು ನನ್ನನ್ನು ಕೇಳಿದ್ದಕ್ಕಾಗಿ ರೋಹಿತ್ ಶರ್ಮ ಅವರಿಗೆ ಧನ್ಯವಾದಗಳು. ಒಬ್ಬ ನಾಯಕನಾಗಿ ಮತ್ತು ಕೋಚ್ ಆಗಿ ನಮ್ಮ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ನನಗೆ ತಿಳಿದಿದೆ. ರೋಹಿತ್​ ನಿಮಗೆ ಒಳ್ಳೆಯದಾಗಲಿ. ನಮ್ಮ ಯಶಸ್ಸು ಸಾಮೂಹಿಕ ಯಶಸ್ಸು. ಇಲ್ಲಿ ಯಾವುದೇ ಒಬ್ಬ ವ್ಯಕ್ತಿಯಿಂದಲ್ಲ. ಇದು ತಂಡದ ಪ್ರಯತ್ನವಾಗಿದೆ. ಕಳೆದ ಒಂದು ತಿಂಗಳಿನಿಂದ ಒಂದು ತಂಡವಾಗಿ ನಮ್ಮ ಶ್ರಮದ ಫಲವಿದು. ವೈಯಕ್ತಿಕವಾಗಿ ಎಲ್ಲರಿಗೂ ಹತ್ತಿರವಾಗುವ ಅವಕಾಶ ಸಿಕ್ಕಿತು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ದ್ರಾವಿಡ್ ಭಾವನಾತ್ಮಕ ಭಾಷಣ ಮಾಡಿದರು.

    ದ್ರಾವಿಡ್​ ಅವರ ವಿದಾಯದ ಭಾಷಣವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ದ್ರಾವಿಡ್​ ಅವರ ಭಾವುಕ ಮಾತುಗಳನ್ನು ಕೇಳಿದ ಸಾವಿರರು ನೆಟ್ಟಿಗರು ದ್ರಾವಿಡ್​ ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಶುಭ ಹಾರೈಸುತ್ತಿದ್ದಾರೆ. (ಏಜೆನ್ಸೀಸ್​)

    ಆತ 24 ಕ್ಯಾರೆಟ್ ಶುದ್ಧ ಚಿನ್ನದಂತೆ! ಟೀಮ್​ ಇಂಡಿಯಾ ಆಟಗಾರನನ್ನು ಕೊಂಡಾಡಿದ ಆಕಾಶ್​ ಚೋಪ್ರಾ

    ವಿಶ್ವಕಪ್​​​ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಪಿಚ್​ ಮಣ್ಣು ತಿಂದಿದ್ದೇಕೆ? ರೋಹಿತ್​ ಕೊಟ್ಟ ಉತ್ತರ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts