More

    “ಏನು, ಎಸ್​ಪಿಬಿ ಕೇಳಿದ್ರಾ! ಇದೊಂಥರ ಗಂಗೆಯೇ ಬಂದು ಗಂಗಾಜಲ ಕೇಳಿದ ಹಾಗಾಯ್ತಲ್ಲಾ”

    ಸೆ. 25 ಎಸ್​ಪಿಬಿ ಅವರ 2ನೇ ಪುಣ್ಯಸ್ಮರಣೆ ಪ್ರಯುಕ್ತ ಈ ಲೇಖನ…

    ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸರಸ್ವತೀ ಪುತ್ರ ಬಾಲಸುಬ್ರಹ್ಮಣ್ಯಂ ಎಂಬ ಕೀರ್ತಿಗೆ ಪಾತ್ರರಾದವರು. ಅದ್ಭುತ ಕಂಠದ ಮೂಲಕ 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ, ಸರ್ವಕಾಲಕ್ಕೂ ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದರು. ಎಲ್ಲಾ ಭಾಷೆಯ ಪ್ರಸಿದ್ಧ ನಾಯಕ ನಟರಿಗೆ ಇವರದ್ದೇ ಧ್ವನಿ. ನಾಳೆ (ಸೆ.25) ಇವರ ಎರಡನೇ ಪುಣ್ಯಸ್ಮರಣೆ.

    ಎಲ್ಲಾ ಭಾಷೆಯ ನಾಯಕ ನಟರಿಗೆ ಹಾಡು ಹೇಳಿದ್ದ ಎಸ್​ಪಿಬಿ ಅವರಿಗೆ, ಕನ್ನಡದ ಮೇರು ನಟ ಡಾ. ರಾಜ್​ ಕುಮಾರ್ ಅವರು ಹಾಡು ಹಾಡಿದ್ದಾರೆ. ಅಷ್ಟೇ ಅಲ್ಲ, ಎಸ್​ಪಿಬಿ ಅವರ ಕೋರಿಕೆಗೆ ವಿನಮ್ರವಾಗಿ ಪ್ರತಿಕ್ರಿಯಿಸಿ ಹಾಡು ಹಾಡಿದ್ದರು. ಕೊನೆಗೆ ಫೋನ್ ಮಾಡಿ ನಾನು ಹಾಡಿದ ಹಾಡಿನಲ್ಲಿ ಏನಾದರು ಲೋಪದೋಷವಿದ್ದರೆ ಮನ್ನಿಸಿ ಎಂದು ಕೇಳಿಕೊಂಡಿದ್ದರಂತೆ ಡಾ. ರಾಜ್​ ಕುಮಾರ್.

    ಶಶಿಕುಮಾರ್ ಅಭಿನಯಿಸಿದ್ದ ‘ಮುದ್ದಿನ ಮಾವ’ ಸಿನಿಮಾದಲ್ಲಿ ಬಾಲಸುಬ್ರಹ್ಮಣ್ಯಂ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಮಾವನ ಪಾತ್ರದಲ್ಲಿ ಅಭಿನಯಿಸಿದ್ದ ಎಸ್​ಪಿಬಿ, ತಮ್ಮ ಶ್ರೇಷ್ಠ ಅಭಿನಯವನ್ನು ಚಿತ್ರದಲ್ಲಿ ತೋರಿಸಿದ್ದರು. ಈ ಸಿನಿಮಾದಲ್ಲಿ ಎಸ್​ಪಿಬಿ ಪಾತ್ರದ ಹಾಡೊಂದಕ್ಕೆ ಡಾ. ರಾಜ್​ ಕುಮಾರ್ ಧ್ವನಿಯಾಗಿದ್ದರು.

    ಶಶಿಕುಮಾರ್ ಅವರ ಬಹುತೇಕ ಸಿನೆಮಾಗಳಿಗೆ ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದಾರೆ. ಇವರ ಧ್ವನಿ ಶಶಿಕುಮಾರ್ ಅವರಿಗೆ ಹೊಂದಿಕೆಯಾಗುತ್ತಿತ್ತು. ಹೀಗಾಗಿ ಮುದ್ದಿನ ಮಾವ ಸಿನೆಮಾದಲ್ಲೂ ಎಸ್​ಪಿಬಿ ಅವರೇ ನನಗೆ ಹಾಡಬೇಕು. ಬೇರೆ ಯಾರೂ ಹಾಡು ಹಾಡಬಾರದು ಎಂದು ತಾಕೀತು ಮಾಡಿದ್ದರಂತೆ. ನಾಯಕನ ಹಾಡನ್ನೂ ಹಾಡಿ, ತನ್ನ ಪಾತ್ರದ ಹಾಡನ್ನು ತಾನೇ ಹಾಡುವುದು ಎಸ್​ಪಿಬಿ ಅವರಿಗೆ ಸರಿ ಕಾಣಲಿಲ್ಲವಂತೆ. ಶಶಿಕುಮಾರ್ ಅವರ ಹಠ ಎಸ್​ಪಿಬಿ ಅವರನ್ನು ಸಂದಿಗ್ಧ ಪರಿಸ್ಥಿತಿಗೆ ಕೊಂಡು ಹೋಗಿತ್ತಂತೆ.

    ನಿರ್ದೇಶಕರ ಜತೆಗಿನ ಚರ್ಚೆಯ ನಂತರ ಹೀರೋ ಹಾಡನ್ನು ಎಸ್​ಪಿಬಿ ಹಾಡುವುದು. ಎಸ್​ಪಿಬಿ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡುವುದು ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಎಸ್​ಪಿಬಿ ಅವರಿಗೆ ಧ್ವನಿಯಾಗುವುದು ಯಾರು ಎಂಬ ಪ್ರಶ್ನೆ ಬಂದಾಗ ಉತ್ತರವಾಗಿ ಕಂಡಿದ್ದು, ವರನಟ ಡಾ. ರಾಜ್​ ಕುಮಾರ್.

    ಆದರೆ ಅವರು ಹಾಡಲು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಅವರಿಂದ ಹಾಡಿಸಲು ಪ್ರಯತ್ನಿಸೋಣ. ನಾನೇ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಎಸ್​ಪಿಬಿ ಹೇಳಿದ್ದರು. ಈ ಬಗ್ಗೆ ಮೊದಲು ಅವರ ಪುತ್ರ ರಾಘವೇಂದ್ರ ರಾಜ್​ಕುಮಾರ್ ಅವರ ಬಳಿ ಕೇಳಿಕೊಂಡೆ. ಅವರು ತಂದೆಯವರಲ್ಲಿ ಕೇಳಿ, ತಿಳಿಸುತ್ತೇನೆ ಹೇಳಿದರು ಎಂದು ಎಸ್​​ಪಿಬಿ ಈ ಹಿಂದೆ ಖಾಸಗಿ ವೇದಿಕೆಯಲ್ಲಿ ಹೇಳಿಕೊಂಡಿದ್ದರು.

    ನನ್ನ ವಿನಂತಿಯನ್ನು ಡಾ. ರಾಜ್​ ಕುಮಾರ್ ಅವರು ಒಪ್ಪಿಕೊಂಡರು. ರಾಘವೇಂದ್ರ ರಾಜ್ ಕುಮಾರ್ ಅವರು ನೀವು ಎಸ್​ಪಿಬಿ ಅವರಿಗೊಂದು ಹಾಡು ಹಾಡಬೇಕಂತೆ ಎಂದು ಹೇಳಿದರಂತೆ. ಸಂತಸಗೊಂಡ ರಾಜ್​ ಕುಮಾರ್ ಅವರು ಮಗನಲ್ಲಿ, ಆ ಪುಣ್ಯಾತ್ಮನಿಗೆ ಹಾಡುವ ಹಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ‘ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ’ ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.

    ನನಗಾಗಿ ರಾಜ್​ ಕುಮಾರ್ ಅವರು ಹಾಡು ಹಾಡಿ ಸುಮ್ಮನಾಗಲಿಲ್ಲ. ಕರೆ ಮಾಡಿ ನಿಮಗೆ ಹಾಡುವ ಪ್ರಯತ್ನ ಮಾಡಿದ್ದೇನೆ. ನಿಮ್ಮಂತಹ ಗಾಯಕರಿಗೆ ಸರಿಸಾಟಿ ನಾನು ಆಗಲಾರೆ. ನನ್ನಿಂದ ತಪ್ಪಾಗಿದ್ದರೆ ಮನ್ನಿಸಿ ಎಂದು ಕೇಳಿಕೊಂಡಿದ್ದರೆಂದು ಎಸ್.ಪಿ.ಬಾಲಸುಬ್ರಮಣ್ಯಂ ಅವರು ಹಲವು ವೇದಿಕೆಯಲ್ಲಿ ನೆನಪಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts