More

    ವಿಶ್ವಕ್ಕೆ ಯೋಗ ಪರಿಚಯಿಸಿದ ಹೆಗ್ಗಳಿಗೆ ಭಾರತದ್ದು

    ಸಂಸದ ಪೂಜಾರಿ ಅಭಿಮತ | ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಐದು ಸಾವಿರಕ್ಕೂ ಹೆಚ್ಚು ವರ್ಷ ಹಳೆಯದಾದ ಯೋಗ ಪದ್ಧತಿ ಭಾರತೀಯತೆಯ ಪ್ರತೀಕವಾಗಿದೆ. ಇದನ್ನು ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಗೆ ಭಾರತದ್ದಾಗಿದೆ. ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಭಾರತೀಯ ಯೋಗ ಪ್ರಕಾರಗಳು ಪಸರಿಸಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಹೇಳಿದರು.

    ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್​ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಕೌಟ್ಸ್​ ಮತ್ತು ಗೈಡ್ಸ್​, ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.

    ಬದುಕಿನಲ್ಲಿ ಬಹುಮುಖ್ಯ ಪಾತ್ರ

    ದೈನಂದಿನ ಜೀವನ ಶೈಲಿಯಲ್ಲಿ ಯೋಗ ಬಹುಮುಖ್ಯ ಪಾತ್ರ ವಹಿಸುತ್ತದೆ. ನಿತ್ಯವೂ ವಿವಿಧ ಯೋಗಾಸನಗಳ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಂಡವರು ನಮ್ಮ ನಡುವೆಯೇ ಇದ್ದಾರೆ. ನಿತ್ಯದ ಕೆಲಸದ ಒತ್ತಡದ ಮಧ್ಯೆಯೂ ಯೋಗ ರೂಢಿಸಿಕೊಂಡರೆ ಬದುಕಿನಲ್ಲಿ ತಾಳ್ಮೆ, ನೆಮ್ಮದಿ ಲಭಿಸುತ್ತದೆ. ಅಂತಹ ಶಕ್ತಿ ಭಾರತೀಯ ಪರಂಪರೆಯಾದ ಯೋಗಕ್ಕಿದೆ ಎಂದರು.

    ಎಲ್ಲರೂ ಸಮಯ ಮೀಸಲಿಡಿ

    ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಯೋಗದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದಾಗಿಯೇ ಯೋಗ ದಿನ ಆಚರಿಸಲಾಗುತ್ತಿದೆ. ಯೋಗವು ಆರೋಗ್ಯಪೂರ್ಣ ಜೀವನ ನಡೆಸಲು ಸಹಕಾರಿಯಾಗಿದೆ. ಎಲ್ಲರೂ ಯೋಗಾಭ್ಯಾಸ ಮಾಡಲು ಸಮಯ ಮೀಸಲಿಡಬೇಕಿದೆ. ಮುಖ್ಯವಾಗಿ ಯುವಜನಾಂಗಕ್ಕೆ ಯೋಗದ ಮಹತ್ವದ ಕುರಿತು ಅರಿವು ಮೂಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.

    ಜಿಲ್ಲಾ ಆಯುಷ್​ ಅಧಿಕಾರಿ ಡಾ.ಸತೀಶ್​ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ವೀಣಾ ಕಾರಂತ್​ ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ನಾಗರಾಜ್​ ಕೌಲಗಿ ವಂದಿಸಿದರು.

    ಯೋಗ ಪ್ರಾತ್ಯಕ್ಷಿಕೆ, ಆಸನಗಳ ಅಭ್ಯಾಸ

    ಸಭಾ ಕಾರ್ಯಕ್ರಮದ ನಂತರ ಸುಮಾರು 45 ನಿಮಿಷ ಯೋಗದ ಪ್ರಾತ್ಯಕ್ಷಿಕೆ ನಡೆಯಿತು. ಯೋಗ ತರಬೇತುದಾರರಾದ ಚೆನ್ನಮ್ಮ ಉಡುಪ ಹಾಗೂ ಶೋಭಾ ಶೆಟ್ಟಿ ಯೋಗ ಪ್ರದರ್ಶಿಸಿ, ವಿವಿಧ ಆಸನ ಕಲಿಸಿದರು. ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಆಸನಗಳ ಅಭ್ಯಾಸ ನಡೆಸಿದರು.

    UDP-21-5-Yogasana


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts