More

    ಧರ್ಮೋ ರಕ್ಷತಿ ರಕ್ಷಿತಃ; ಕಮಲ್ ಪಂತ್

    ಬೆಂಗಳೂರು: ಧರ್ಮೋ ರಕ್ಷತಿ ರಕ್ಷಿತಃ ಅಂದರೆ ನ್ಯಾಯವನ್ನು ಕಾಪಾಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ. ನ್ಯಾಯವನ್ನು ಕೊಂದರೆ ಅದು ನಿಮನ್ನು ಕೊಲ್ಲುತ್ತದೆ ಎಂದು ಗೃಹ ರಕ್ಷಕ ದಳ ಮತ್ತು ಅಗ್ನಿ ಶಾಮಕ ದಳದ ಡಿಜಿಪಿ ಕಮಲ್ ಪಂತ್, ಅಭಿಪ್ರಾಯ ವ್ಯಕ್ತಪಡಿಸಿದರು.

    ಜೂನ್ 30ಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಕಮಲ್ ಪಂತ್ ಅವರಿಗೆ ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಬೀಳ್ಕೊಡುಗೆ ಕವಾಯತು ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕಮಲ್ ಪಂತ್, ಯಾವಾಗಲೂ ನ್ಯಾಯವನ್ನು ಕಾಪಾಡಬೇಕು. ನ್ಯಾಯವನ್ನು ಎತ್ತಿ ಹಿಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ ಎಂದು ಸಲಹೆ ನೀಡಿದರು.

    ರಾಜ್ಯ ಪೊಲೀಸ್‌ಗೆ ಇಡೀ ದೇಶದಲ್ಲೆ ಉತ್ತಮವಾದ ಹೆಸರಿದೆ. ನೀವೆಲ್ಲರೂ ಅದಕ್ಕೆ ಬದ್ಧರಾಗಿ, ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ. ಪೊಲೀಸ್ ಇಲಾಖೆಗೆ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    1990ರಲ್ಲಿ ಕರ್ನಾಟಕ ಪೊಲೀಸ್ ಕೇಡರ್ ಅಧಿಕಾರಿಯಾಗಿ ಆಯ್ಕೆಯಾಗಿ ಪೊಲೀಸ್ ಸೇವೆಗೆ ಬಂದಾಗ ರಾಜ್ಯದ ಪರಿಸ್ಥಿತಿ ಮತ್ತು ದೇಶದ ಪರಿಸ್ಥಿತಿ ಬಿಗುವಿನ ವಾತಾವರಣವಿತ್ತು. ಉತ್ತರ ಭಾರತದಲ್ಲಿ ಪೊಲೀಸ್ ಸೇವೆ ಎಂದು ಮುಖ ಮುರಿಯುವ ಸ್ಥಿತಿ. ಆದರಿಂದ ಸೇವೆಗೆ ಸೇರುವುದು ನಮ್ಮ ತಾಯಿಗೆ ಇಷ್ಟವಿರಲಿಲ್ಲ. ನನಗೂ ಪೊಲೀಸ್ ಸೇವೆಗೆ ಆಯ್ಕೆಯಾದಾಗ ಬಹಳ ಆತಂಕ ಇತ್ತು. ನನಗೆ ಭಾಷೆಯ ಸಮಸ್ಯೆಯಾಗಿತ್ತು. ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ರಾಜ್ಯದ ಜನರಿಂದ ಕನ್ನಡ ಭಾಷೆ ಕಲಿತೆ. ರಾಜ್ಯದ ಜನರು ನನಗೆ ಸಹಕಾರ ನೀಡಿ ಅರಸಿದರು.

    ಮೆಣಸಿನ ಹಾಡ್ಯದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆ ವೇಳೆ 600 ಮಂದಿ ಸಿಬ್ಬಂದಿ ಜತೆ ಆ ಸ್ಥಳಕ್ಕೆ ಹೋಗಿ ಸಂಜೆಯೇ ಅಲರ್ಟ್ ಆದೆವು. ಬೆಳಗಾಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದಾಗ ಬಹಳ ಆತಂಕ ಇತ್ತು. ಹಗಲಿರುಳು ಕರ್ತವ್ಯ ನಿಭಾಯಿಸಿದೆವು. ಒಬ್ಬ ನಾಗರಿಕನಿಗೂ ತೊಂದರೆಯಾಗದಂತೆ ಕಾರ್ಯಾಚರಣೆ ಮಾಡಬೇಕಾಗಿತ್ತು. ಅದರಂತೆ ಯಶಸ್ವಿ ಕಾರ್ಯಾಚರಣೆ ಸಹ ನಡೆಸಲಾಯಿತು. ಇಲ್ಲಿನ ಸಾಮ್ಯತೆ, ಸೌಜನ್ಯತೆ, ಸಂಸ್ಕೃತಿ, ಸಭ್ಯತೆ ಬೇರೆಲ್ಲೂ ಇಲ್ಲ. ರಾಜ್ಯದ ಜನತೆ ನಮಗೆ ನೀಡಿದ ಪ್ರೀತಿ, ವಿಶ್ವಾಸದಿಂದ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಯಿತು ಎಂದರು.
    ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡಿದಾಗ ಇದ್ದಂತಹ ಸಮಸ್ಯೆಯನ್ನು ಎಲ್ಲ ಸಿಬ್ಬಂದಿಯ ಸಹಕಾರದಿಂದ ಬಗೆಹರಿಸಲು ಸಾಧ್ಯವಾಯಿತು.

    ಒಬ್ಬ ವ್ಯಕ್ತಿಯಿಂದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ. ಕಾನ್‌ಸ್ಟೆಬಲ್‌ನಿಂದ ಎಸ್‌ಪಿ ವರೆಗೂ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಸಿದ್ಧಾಂತ ಇಟ್ಟುಕೊಂಡು 34 ವರ್ಷ ಸುದೀರ್ಘವಾಗಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ಸಿಬಿಐನಲ್ಲೂ ಕರ್ತವ್ಯ ನಿಭಾಯಿಸಿದೆ. ನ್ಯಾಯ, ನೀತಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಲು ನನಗೆ ಎಲ್ಲ ಹಿರಿಯ- ಕಿರಿಯ ಅಧಿಕಾರಿಗಳು ಸಹಕಾರ ಕೊಟ್ಟರು ಎಂದು ಕಮಲ್ ಪಂತ್ ತಿಳಿಸಿದರು. ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್, ಕೆಎಸ್‌ಆರ್‌ಪಿಯ ಎಡಿಜಿಪಿ ಉಮೇಶ್ ಕುಮಾರ್, ಐಜಿಪಿ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts