More

    ‘ಚೌಕಿದಾರ್’ಗೆ ಧನ್ಯಾ ಜೋಡಿ; ಬಹುಭಾಷಾ ಚಿತ್ರಕ್ಕೆ ಅವಕಾಶ ಪಡೆದ ದೊಡ್ಮನೆ ಹುಡುಗಿ

    ಬೆಂಗಳೂರು: ‘ನಿನ್ನ ಸನಿಹಕೆ’ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಧನ್ಯಾ ರಾಮ್‌ಕುಮಾರ್, ‘ಹೈಡ್ ಆ್ಯಂಡ್ ಸೀಕ್’, ‘ದ ಜಡ್ಜ್‌ಮೆಂಟ್’ ಸಿನಿಮಾಗಳಲ್ಲಿ ನಟಿಸಿದ್ದು, ಸದ್ಯ ‘ಕಾಲಾಪತ್ಥರ್’, ‘ಪೌಡರ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೇ ಮತ್ತೊಂದು ಚಿತ್ರಕ್ಕೆ ಅವಕಾಶ ಪಡೆದಿದ್ದು, ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ನಲ್ಲಿ ನಾಯಕ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೆ ತಮ್ಮ ಪಾತ್ರ ಹಾಗೂ ಸಿನಿಮಾ ಕರಿಯರ್ ಕುರಿತು ‘ವಿಜಯವಾಣಿ’ ಜತೆ ಧನ್ಯಾ ಮಾತನಾಡಿದ್ದಾರೆ.

    ಜು.3ಕ್ಕೆ ಚಿತ್ರದ ಮುಹೂರ್ತ:
    ಬಹುಭಾಷೆಯಲ್ಲಿ ಮೂಡಿಬರುತ್ತಿರುವ ‘ಚೌಕಿದಾರ್’ ಚಿತ್ರವನ್ನು ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಲಿದ್ದಾರೆ. ಇತ್ತೀಚೆಗೆಷ್ಟೇ ನಟ ಶ್ರೀಮುರಳಿ ಪೋಸ್ಟರ್ ಬಿಡುಗಡೆ ಮಾಡಿದ್ದರು. ಬಳಿಕ ಸಾಯಿಕುಮಾರ್ ಪಾತ್ರವನ್ನು ಚಿತ್ರತಂಡ ಪರಿಚಯಿಸಿತ್ತು. ಕುಟುಂಬ ಪ್ರಧಾನವಾದ ಈ ಚಿತ್ರವು ಜು.3ರಂದು ಮುಹೂರ್ತ ನಡೆಯಲಿದೆ. ಸಚಿನ್ ಬಸ್ರೂರು ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ.
    ಚಿತ್ರದ ಬಗ್ಗೆ ಧನ್ಯಾ, ‘ನನ್ನ ಹಿಂದಿನ ಮೂರು ಚಿತ್ರಗಳ ಪಾತ್ರಗಿಂತ ಈ ಚಿತ್ರದ ಪಾತ್ರ ತುಂಬಾ ವಿಭಿನ್ನವಾಗಿದೆ. ಹಾಗಾಗಿ ಈ ಕಥೆಗೆ ಒಪ್ಪಿಕೊಂಡೆ. ಇದು ನನಗೆ ಹೊಸ ಅನುಭವ ನೀಡಲಿದೆ ಎಂದುಕೊಳ್ಳುತ್ತೇನೆ. ಮೊದಲಿನಿಂದಲೂ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇತ್ತು. ಅದಕ್ಕೆ ತಕ್ಕಂತೆ ಈ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಪಾತ್ರದ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ’ ಎಂದು ಹೇಳಿಕೊಳ್ಳುತ್ತಾರೆ.

    ಭಿನ್ನ, ವಿಭಿನ್ನ ಧನ್ಯಾ
    ‘ಹಾಸ್ಯ ಪ್ರಧಾನ ‘ಪೌಡರ್’ ಅ.15ಕ್ಕೆ ರಿಲೀಸ್ ಆಗಲಿದೆ. ಇನ್ನೊಂದು ‘ಕಾಲಾಪತ್ಥರ್’ ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಾಗಿದೆ. ಗಂಗಾ ಎಂಬ ಶಿಕ್ಷಕಿ ಪಾತ್ರ ಮಾಡಿದ್ದೇನೆ. ಈ ಪಾತ್ರವು ಹಲವು ರೀತಿಯ ಅನುಭವ ನೀಡಿದೆ. ಅಲ್ಲದೇ ಗ್ರಾಮೀಣ ಭಾಗದ ಬದುಕು ಏನೆಂಬುದು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ’ ಎನ್ನುತ್ತಾರೆ ಧನ್ಯಾ.

    ಇತ್ತೀಚೆಗೆ ಜನರು ಥಿಯೇಟರ್‌ಗಳಿಗೆ ಬರುತ್ತಿಲ್ಲ. ಹಾಗಾಗಿ ನಾವು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳ ಮೂಲಕ ಬರಬೇಕಿದೆ. ಇಲ್ಲಿ ನಮ್ಮ ವೈಯಕ್ತಿಕ ಬೆಳವಣಿಗೆಗಿಂತ ಇಡೀ ಕನ್ನಡ ಚಿತ್ರೋದ್ಯಮ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಉತ್ತಮ ಕಂಟೆಂಟ್ ಸಿನಿಮಾಗಳು ಮುಂದೆ ಬರಲಿವೆ. ‘ಪೌಡರ್’, ‘ಕಾಲಾಪತ್ಥರ್’ ಮತ್ತು ‘ಚೌಕಿದಾರ್’ ಅಂತಹ ಉತ್ತಮ ಕಂಟೆಂಟ್ ಚಿತ್ರಗಳೇ ಆಗಿವೆ.
    ಧನ್ಯಾ ರಾಮ್‌ಕುಮಾರ್, ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts