More

    ಸಮಗ್ರ ಮೈಕ್ರೋ ಪ್ಲಾನ್ ಮೂಲಕ ಡೆಂಘೆ ನಿಯಂತ್ರಣ: ತುಷಾರ್​ ಗಿರಿನಾಥ್​

    ಬೆಂಗಳೂರು: ಮಹಾನಗರದಲ್ಲಿ ಸಮಗ್ರ ಮೈಕ್ರೋ ಪ್ಲ್ಯಾನ್ ಮಾಡಿಕೊಂಡು ಅದರ ಪ್ರಕಾರ ಡೆಂಘೆ ಪ್ರಕರಣಗಳನ್ನು ನಿಯಂತ್ರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೆ ನಿಯಂತ್ರಿಸಲು ವಲಯವಾರು ಡ್ರೈ ಡೇ ನಡೆಸಲಾಗುತ್ತಿದ್ದು, ಅದರ ಅಂಗವಾಗಿ ಶುಕ್ರವಾರ ಸಿ.ವಿ.ರಾಮನ್‌ನಗರದ ಜಿ.ಎಂ. ಪಾಳ್ಯ ಹಾಗೂ ಹೊಸ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ನೀಡಿ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯವನ್ನು ಪರಿಶೀಲಿಸಿದರು.

    ಈ ಎರಡೂ ಸ್ಥಳದಲ್ಲಿ ಕೆಲ ಮನೆಗಳಿಗೆ ಭೇಟಿ ನೀಡಿದ ಮುಖ್ಯ ಆಯುಕ್ತರು ಅಲ್ಲಿನ ನಾಗರಿಕರೊಂದಿಗೆ ಸಂವಾದ ನಡೆಸಿದರು. ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೆ ಹರಡುತ್ತದೆ. ಆದ್ದರಿಂದ ನೀರಿನ ಸಂಪ್, ಡ್ರಮ್, ಕೊಳಾಯಿ ಬಳಿ, ಹೂವಿನ ಕುಂಡ ಸೇರಿ ಇನ್ನಿತರ ಕಡೆಗಳಲ್ಲಿ ಪರಿಶೀಲಿಸಿ ವಾರಕ್ಕೊಮ್ಮೆ ಎಲ್ಲೆಡೆ ನೀರನ್ನು ಹೊರ ಹಾಕಿ ಒಣಗಿಸಿ ಮತ್ತೆ ಶುದ್ಧ ನೀರು ಸಂಗ್ರಹಿಸಿಕೊಳ್ಳಬೇಕು. ವಾರಕ್ಕಿಂತ ಹೆಚ್ಚು ದಿನಗಳು ಒಂದೇ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮೆ ತಪ್ಪದೆ ಹಳೆ ನೀರು ತೆಗೆದು ಹೊಸ ನೀರು ತುಂಬಿಸಿಕೊಳ್ಳುವಂತೆ ಮುಖ್ಯ ಆಯುಕ್ತರು ಮನವಿ ಮಾಡಿದರು.

    ವಲಯ ಆಯುಕ್ತರು ನೇತೃತ್ವದಲ್ಲಿ ಕಾರ್ಯಾಚರಣೆ:

    ಪಾಲಿಕೆ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಡ್ರೈ ಡೇ ಕಾರ್ಯಾಚರಣೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಕೂಡಾ ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಡ್ರೈ ಡೇ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಯಲಹಂಕ ವಲಯ ವಲಯ ಆಯುಕ್ತರು ಶಾಲೆಗೆ ಭೇಟಿ ನೀಡಿ, ನಿಮ್ಮ ಮನೆಯಲ್ಲಿ ವಾರಕ್ಕೊಮ್ಮೆ ನೀರು ಸ್ವಚ್ಛಮಾಡುವ, ಮನೆಗಳ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳುವ, ಅಕ್ಕ-ಪಕ್ಕದ ಮನೆಯವರಿಗೆ ಡೆಂಘೆ ಹರಡುವಿಕೆಯ ಬಗ್ಗೆ ತಿಳುವಳಿಕೆ ಮೂಡಿಸಲು ವಿಧ್ಯಾರ್ಥಿಗಳಿಗೆ ತಿಳಿಸಿದರು.
    ಈ ವೇಳೆ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ, ಆರೋಗ್ಯ ವೈದ್ಯಾಧಿಕಾರಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    ಧ್ವನಿವರ್ಧಕಗಳ ಮೂಲಕ ಜಾಗೃತಿ:

    ನಗರದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ಆಟೋಗಳ ಮೂಲಕ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಡೆಂಘೆ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸುವಂತೆ ಬಿಬಿಎಂಪಿಯು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts