More

    ಬಿಸಿಲು ಮಳೆಗೆ ಡೆಂಘೆ ವ್ಯಾಪಕ

    ಬೆಂಗಳೂರು: ಬಿಸಿಲಿನ ಜತೆಗೆ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೆ ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಕಳೆದೊಂದು ತಿಂಗಳಲ್ಲಿ 1,955 ಪ್ರಕರಣ ವರದಿಯಾಗಿವೆ. ಡೆಂಘೆ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಈವರೆಗೂ 98 ಸಾವಿರಕ್ಕೂ ಅಧಿಕ ಶಂಕಿತರನ್ನು ತಪಾಸಣೆಗೆ ಒಳಪಡಿಸಿದ್ದು, 45 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದೆ.

    ಈವರೆಗೆ 5,749 ಮಂದಿಯಲ್ಲಿ ಡೆಂಘೆ ದೃಢಪಟ್ಟಿದೆ. 2023ರಲ್ಲಿ 16,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಮೃತಪಟ್ಟಿದ್ದರು. ಈ ವರ್ಷ ಐವರು ಸಾವನ್ನಪ್ಪಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,595 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 1,385 ಮಂದಿಯಲ್ಲಿ ಜ್ವರ ಖಚಿತಪಟ್ಟಿದೆ. ಚಿಕ್ಕಮಗಳೂರು (491), ಮೈಸೂರು (431), ಹಾವೇರಿ (402), ಚಿತ್ರದುರ್ಗ (253), ಶಿವಮೊಗ್ಗ (249) ಹಾಗೂ ದಕ್ಷಿಣ ಕನ್ನಡ (233) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಖಚಿತಪಟ್ಟಿವೆ.

    ಚಿಕೂನ್ ಗುನ್ಯಾ ಪ್ರಕರಣಗಳೂ ಏರಿಕೆಯಾಗಿದ್ದು, ಈವರೆಗೆ 30 ಸಾವಿರಕ್ಕೂ ಅಧಿಕ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 12 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. 897 ಮಂದಿ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ಶಿವಮೊಗ್ಗ (147), ವಿಜಯಪುರ (105) ಹಾಗೂ ಮೈಸೂರು (82) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆ ಜೊತೆಗೆ ಜನಜಾಗೃತಿ ಕಾರ್ಯಕ್ರಮ ಚುರುಕುಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts