More

    ಹೊರಗುತ್ತಿಗೆಯಲ್ಲೂ ಮೀಸಲಾತಿ ನೀಡಲು ಒತ್ತಾಯ: ದಲಿತ ಹಕ್ಕುಗಳ ಸಮಿತಿಯಿಂದ ಮನವಿ ಸಲ್ಲಿಕೆ

    ಮಂಡ್ಯ: ಹೊರಗುತ್ತಿಗೆ ನೇಮಕಾತಿಯಲ್ಲಿ ಕಾಯಂ ಮೀಸಲಾತಿ ನಿಯಮವನ್ನೇ ಅನುಸರಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಎಲ್ಲ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು. ಹೊರ ಸಂಪನ್ಮೂಲ ಏಜೆನ್ಸಿಗಳಲ್ಲೂ(ಟೆಂಡರ್) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಧ್ಯತೆ ನೀಡಿ ಹೊರ ಗುತ್ತಿಗೆ ನೌಕರರನ್ನು ಒದಗಿಸುವಂತಹ ಅವಕಾಶವನ್ನು ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದರು.
    ಹೊರಗುತ್ತಿಗೆ ಆಧಾರದಲ್ಲಿ ನೇಮಕವಾದವರನ್ನು ಪ್ರತಿ 11 ತಿಂಗಳ ನಂತರ ಕೈಬಿಡುವುದನ್ನು ನಿಲ್ಲಿಸಿ, ಅವರನ್ನೇ ಮುಂದುವರಿಸಬೇಕು. ಕನಿಷ್ಟ ಐದು ವರ್ಷ ಗುತ್ತಿಗೆ ಆಧಾರದಲ್ಲಿ ದುಡಿದವರಿಗೆ ಕಾಯಂ ನೇಮಕಾತಿ ಮಾಡುವ ಸಂದರ್ಭದಲ್ಲಿ ಮೊದಲ ಆದ್ಯತೆ ನೀಡಬೇಕು. ಹತ್ತು ವರ್ಷ ಹೊರಗುತ್ತಿಗೆ ನೌಕರರಾಗಿ ದುಡಿದವರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.
    ಸರ್ಕಾರಿ ಇಲಾಖೆ, ಮಂಡಳಿ, ವಿವಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ರಾಜ್ಯ ಸರ್ಕಾರ ಬಂಡವಾಳಶಾಹಿ, ಕಾರ್ಪೊರೇಟ್ ಕಂಪನಿಗಳ ಪರವಾದ ಉದಾರಿಕರಣ ಖಾಸಗೀಕರಣ ನೀತಿಗಳನ್ನು ಕೈಬಿಟ್ಟು ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. ಅಭದ್ರ ಉದ್ಯೋಗ 11 ತಿಂಗಳ ಹೊರಗುತ್ತಿಗೆ ನೇಮಕಾತಿ ಪದ್ಧತಿ ರದ್ದು ಮಾಡುವ ಮೂಲಕ ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
    ರಾಜ್ಯಸರ್ಕಾರ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಸರ್ಕಾರದ ಸುತ್ತೋಲೆಯಲ್ಲಿ ಕನಿಷ್ಟ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿ ಜಾರಿಗೊಳಿಸತಕ್ಕದ್ದು ಎಂದು ಸೂಚಿಸಿರುವುದು ಹೆಸರಿಗೆ ಮಾತ್ರ ಹೊರ ಗುತ್ತಿಗೆಯಲ್ಲಿ ಮೀಸಲಾತಿ ಎಂಬಂತಾಗಿದೆ. ಇದೊಂದು ಸರ್ಕಾರದ ಗಂಭೀರ ಲೋಪ ಆಗಿದ್ದು, ಕೂಡಲೇ ಲೋಪವನ್ನು ತಿದ್ದುಪಡಿ ಮಾಡಿ ಸುತ್ತೋಲೆ ಹೊರಡಿಸಿ ಕಾಯಂ ನೇಮಕಾತಿ ವೇಳೆ ಅನುಸರಿಸುವ ಮೀಸಲು ನಿಯಮಗಳನ್ನು ಹೊರ ಗುತ್ತಿಗೆ ನೇಮಕಾತಿಯಲ್ಲಿ ಪಾಲಿಸಬೇಕು ಆಗ್ರಹಪಡಿಸಿದರು.
    ಸಮಿತಿಯ ಮುಖಂಡರಾದ ಆರ್.ಕೃಷ್ಣ, ಗಿರಿಜಮ್ಮ, ಅಂಬೂಜಿ, ವಿಜೇಂದ್ರಕುಮಾರ್, ಕೆ.ಎಸ್.ಶಿವಲಿಂಗಯ್ಯ, ರಾಜೇಶ್, ಪರಶುರಾಮ, ಮಲ್ಲಿಕಾರ್ಜುನಸ್ವಾಮಿ ಇದ್ದರು.

    See also  ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಫೈನಲ್, ಹೈಕಮಾಂಡ್‌ನಿಂದ ಹೆಸರು ಘೋಷಣೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts