More

    ಆಂಗ್ಲ ಮಾಧ್ಯಮ ಶಾಲೆಗಳಿಗೆ ಡಿಮಾಂಡ್

    *25 ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಗ್ರೀನ್‌ಸಿಗ್ನಲ್

    ಮಕ್ಕಳ ದಾಖಲಿಸಲು ಪಾಲಕರ ಒಲವು


    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಸರ್ಕಾರಿ ಶಾಲೆಗಳಲ್ಲಿನ ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ದಾಖಲಿಸಲು ಪಾಲಕರು ಒಲವು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಹಾಲಿ ನಡೆಯುತ್ತಿರುವ 25 ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಆಂಗ್ಲ ಮಾಧ್ಯಮದ ವಿಭಾಗ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.
    ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಶಿಕ್ಷಣ ಇಲಾಖೆ ಮೇಲೆ ಪಾಲಕರು ಒತ್ತಡ ಹಾಕುತ್ತಿದ್ದಾರೆ. ರಾಜ್ಯದ ಅಷ್ಟೂ ಜಿಲ್ಲೆಗಳಿಂದ ಎಲ್ಲೆಲ್ಲಿ, ಎಷ್ಟೆಷ್ಟು ಬೇಡಿಕೆ ಇದೆ ಎಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರವೂ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಉತ್ಸುಕವಾಗಿದೆ.
    ರಾಜ್ಯದ 2,404 ಸರ್ಕಾರಿ ಶಾಲೆಗಳಲ್ಲಿ ಕನ್ನಡ-ಉರ್ದು ಮಾಧ್ಯಮದ ಜತೆಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮದ (ದ್ವಿಭಾಷಾ ಮಾಧ್ಯಮ) ತರಗತಿ ಆರಂಭಿಸಲಾಗಿದೆ. ಈ ಶಾಲೆಗಳ ಪೈಕಿ ಮೊದಲ ಹಂತದ ಸರ್ವೇಯಲ್ಲಿ 25 ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದೆ ಎಂಬ ವರದಿ ಸರ್ಕಾರಕ್ಕೆ ತಲುಪಿದೆ ಎನ್ನಲಾಗಿದೆ. ಜತೆಗೆ ರಾಜ್ಯದ ಹಲವು ಕಡೆಗಳಲ್ಲಿ ಪಾಲಕರಿಂದ ಒತ್ತಡ ಹೆಚ್ಚುತ್ತಿದೆ. ಈ ಬಗ್ಗೆ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ಪಟ್ಟಿ ಸಲ್ಲಿಸಿದ್ದು, ಇದನ್ನು ಪರಿಶೀಲನೆ ನಡೆಸಿರುವ ಸರ್ಕಾರ ಹೆಚ್ಚುವರಿ ವಿಭಾಗ ಆರಂಭಿಸಲು ಸುತ್ತೋಲೆ ಹೊರಡಿಸಿದೆ.
    ಆರ್ಥಿಕ ಹೊರೆಯಾಗದಂತೆ ನಿಗಾ: 1ನೇ ತರಗತಿಯಿಂದ ಆರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ 25 ಶಾಲೆಗಳಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಆಂಗ್ಲ ಮಾಧ್ಯಮ ವಿಭಾಗ ಆರಂಭಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಇದಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ವಿಭಾಗ ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ.

    ಎಲ್ಲ ಕಡೆಯಿಂದಲೂ ಡಿಮಾಂಡ್ ಪ್ರಸ್ತುತ ಆಯಾ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮಾಹಿತಿಯಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಆಂಗ್ಲಮಾಧ್ಯಮಕ್ಕೆ ಪಾಲಕರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹಾಲಿ ಇರುವ ತರಗತಿಗಳ ಜತೆಗೆ ಪ್ರಸಕ್ತ ಸಾಲಿನಲ್ಲಿ ದುಪ್ಪಟ್ಟು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಇದರಿಂದಾಗಿ ಎರಡೆರಡು ವಿಭಾಗಗಳನ್ನು ಆರಂಭಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಆರಂಭಿಸಿರುವ ತರಗತಿಯಲ್ಲಿ ಕನಿಷ್ಠ 30, ಗರಿಷ್ಠ 45 ವಿದ್ಯಾರ್ಥಿಗಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕನಿಷ್ಠ 40ರಿಂದ 50 ಮಕ್ಕಳು ದಾಖಲಾತಿ ಬಯಸುತ್ತಿದ್ದಾರೆ. ಆದ್ದರಿಂದ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಂಪನ್ಮೂಲ ಆಧರಿಸಿ ಪಟ್ಟಿಆಯಾ ಜಿಲ್ಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಇರುವ ಬೇಡಿಕೆ ಎಷ್ಟೆಂಬುದನ್ನು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಹೆಚ್ಚುವರಿ ಆರ್ಥಿಕ ಹೊರೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚುವರಿ ವಿಭಾಗಕ್ಕೆ ಸ್ಥಳೀಯವಾಗಿ ಅಗತ್ಯವಿರುವ ಸಂಪನ್ಮೂಲಗಳ ಮಾನದಂಡದ ಆಧಾರದ ಮೇಲೆ 25 ಶಾಲೆಗಳನ್ನು ಗುರುತಿಸಿದೆ ಎನ್ನಲಾಗಿದೆ.


    ಸುಸಜ್ಜಿತ ಶಾಲೆಗಳು ಆಯ್ಕೆ ಪ್ರಸ್ತುತ ರಾಜ್ಯದಲ್ಲಿ ಆಯ್ಕೆ ಮಾಡಿರುವ 25 ಶಾಲೆಗಳು ಸುಸಜ್ಜಿತವಾಗಿವೆ, ಶಿಕ್ಷಕರು, ಇನ್ನಿತರ ಶಾಲಾ ಸಿಬ್ಬಂದಿ ಸೇರಿ ಮೂಲಸೌಕರ್ಯಗಳು ಅಚ್ಚುಕಟ್ಟಾಗಿವೆ. ಇದರಲ್ಲಿ ಬಹುತೇಕ ಶಾಲಾ ಕಟ್ಟಡಗಳು ಸಿಎಸ್‌ಆರ್ ಅನುದಾನದಡಿ ಅಭಿವೃದ್ಧಿಯಾಗಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆಯುವಂತಿವೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2, ತುಮಕೂರು-2, ದಾವಣಗೆರೆ-2,ರಾಮನಗರ-2, ಬೆಂಗಳೂರು ಉತ್ತರ-6, ಬೆಂಗಳೂರು ಗ್ರಾಮಾಂತರ-3, ಹಾವೇರಿ-1, ಚಿಕ್ಕೂಡಿ-1, ಶಿರಸಿ-2, ವಿಜಯಪುರ-3 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಶಾಲೆ ಆಯ್ಕೆಯಾಗಿದೆ.

    ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಒಲವು ತೋರಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಬೇಡಿಕೆ ಎಷ್ಟಿದೆ ಎಂಬುದರ ಬಗ್ಗೆ ಇಲಾಖೆಗೆ ಪಟ್ಟಿ ನೀಡಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಮಾನದಂಡದ ಆಧಾರದ ಮೇಲೆ ಸರ್ಕಾರ ದೇವನಹಳ್ಳಿಯ ಅರದೇರ್‌ಶನಹಳ್ಳಿ ಶಾಲೆ, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಶಾಲೆ ಹಾಗೂ ಹೊಸಕೋಟೆಯ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿದೆ.
    ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಬೆಂ. ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts