More

    ಎಸ್ಸಿ-ಎಸ್ಟಿ ಸಭೆಯಲ್ಲಿ ಸಮಸ್ಯೆಗಳ ಅನಾವರಣ  ಪರಿಹಾರಕ್ಕೆ ಎಸ್ಪಿಗೆ ಒತ್ತಾಯ

    ದಾವಣಗೆರೆ: ಅಟ್ರಾಸಿಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಕೊಡಿಸಬೇಕು, ಎಸ್‌ಸಿ-ಎಸ್‌ಟಿ ಕಾಲನಿಗಳಲ್ಲಿ ದಾವಣಗೆರೆ ಒನ್ ಕೇಂದ್ರ ತೆರೆಯಬೇಕು, ಶಾಲೆಗಳಲ್ಲಿ ಬೇಡ ಜಂಗಮ ಎಂದು ಬರೆಸುವುದನ್ನು ತಡೆಗಟ್ಟಬೇಕು ಎಂಬುದೂ ಸೇರಿ ಹಲವು ಸಮಸ್ಯೆಗಳ ನಿವಾರಣೆಗೆ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮುಖಂಡರು ಒತ್ತಾಯಿಸಿದರು.
    ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರು ಹಲವು ಸಮಸ್ಯೆ ತೆರೆದಿಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಾಕ್ಷಿ ಹೇಳದೇ ಇರುವುದರಿಂದ ಶೇ.90ರಿಂದ 95ರಷ್ಟು ಪ್ರಕರಣ ಖುಲಾಸೆಯಾಗುತ್ತಿವೆ ಎಂದು ಹೇಳಿದರು.
    ಹೊನ್ನಾಳಿಯ ಜಿ.ಎಸ್. ತಮ್ಮಣ್ಣ ಅವರ ದೂರಿಗೆ ಪ್ರತಿಕ್ರಿಯಿಸಿ, ಪೊಲೀಸ್ ಇಲಾಖೆ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮುತುವರ್ಜಿ ವಹಿಸಿರುತ್ತದೆ. ಆದರೆ, ಪ್ರಕರಣ ದಾಖಲಿಸಿದ ನಂತರ ಅದು ಮುಗಿಯುವ ಹಂತದವರೆಗೂ ಸಾಕ್ಷಿಗಳು ಬದ್ಧರಾಗಿರಬೇಕು. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದಾಗ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದರು.
    ಎಸ್‌ಸಿ, ಎಸ್‌ಟಿ ಕಾಲನಿಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ದಾವಣಗೆರೆ ಒನ್ ಕೇಂದ್ರ ಪ್ರಾರಂಭಿಸಿ ನಿರುದ್ಯೋಗಿ ಯುವಜನರಿಗೆ ಆಸರೆಯಾಗಬೇಕು ಎಂದು ಸೂರ್ಯಪ್ರಕಾಶ್ ಸಲಹೆ ನೀಡಿದರು.
    ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ವೀರಶೈವ ಜಂಗಮರು ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸುವಾಗ ಬೇಡ ಜಂಗಮ ಎಂದು ಬರೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೇಡ ಜಂಗಮರು ಇಲ್ಲ. ಈ ರೀತಿ ದಾಖಲಾತಿ ಆಗುವುದನ್ನು ತಡೆಯಲು ಶಾಲಾ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.
    ತಾಲೂಕಿನ ಕಡ್ಲೇಬಾಳು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡಿರುವ ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಂಚಪ್ಪ ಹಂಚಿನಮನೆ ಹೇಳಿದರು. ಈ ಕುರಿತು ವಿಚಾರಣೆ ನಡೆಸಲಿದ್ದು, ಲಿಖಿತ ದೂರು ನೀಡುವಂತೆ ಎಸ್ಪಿ ತಿಳಿಸಿದರು.
    ಚನ್ನಗಿರಿ ತಾಲೂಕಿನ ಕಂಸಾಗರ ಹಾಗೂ ಹಿರೇಗಂಗೂರು ಗ್ರಾಮಗಳಲ್ಲಿ ಪ. ಜಾತಿ ಹಾಗೂ ವರ್ಗದವರಿಗೆ ಸ್ಮಶಾನ ಭೂಮಿ ಇಲ್ಲ. ಇದರಿಂದ ಶವ ಸಂಸ್ಕಾರಕ್ಕೆ ತೊಂದರೆ ಅನುಭವಿಸುವಂತಾಗಿದ್ದು, ಸ್ಮಶಾನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ಮಂಜುನಾಥ್ ಹಾಗೂ ಚಿರಂಜೀವಿ ಒತ್ತಾಯಿಸಿದರು.
    ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿಡಬೇಕು ಎಂದು ಭೀಮ್ ಆರ್ಮಿ ಸಂಘಟನೆ ನಿಂಗಪ್ಪ ಬನ್ನಿಹಟ್ಟಿ ಮನವಿ ಮಾಡಿದರು.
    ಉಪವಿಭಾಗಾಧಿಕಾರಿ ದುರ್ಗಾಶ್ರೀ, ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts