More

    ಸಾಮೂಹಿಕ ವಿವಾಹದಿಂದ ಹೊರೆ ಇಳಿಕೆ   ಉದ್ಯಮಿ ಪ್ರಭಾಕರ ಶೆಟ್ಟಿ ಹೇಳಿಕೆ

    ದಾವಣಗೆರೆ: ಬಡಜನರ ಆರ್ಥಿಕ ಹೊರೆ ತಪ್ಪಿಸಲು ಸಾಮೂಹಿಕ ವಿವಾಹಗಳು ಅತ್ಯಂತ ಸಹಕಾರಿಯಾಗಿವೆ ಎಂದು ಉದ್ಯಮಿ ಪ್ರಭಾಕರ ಶೆಟ್ಟಿ ಹೇಳಿದರು.
    ಜಿಲ್ಲಾ ಬಹುಜನ ಸಮಾಜ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್‌ನ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 6 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
    ಸಮಾಜದಲ್ಲಿ ಬಡಜನರಿಗೆ ನೆರವಾಗುವಂತಹ  ಸಮಾಜಮುಖಿ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ದಾನಿಗಳು ಇದಕ್ಕಾಗಿ ನೆರವು ನೀಡಬೇಕು ಎಂದ ಅವರು, ನವ ದಂಪತಿ ಆದರ್ಶ ಜೀವನ ನಡೆಸಬೇಕು ಎಂದು ತಿಳಿಸಿದರು.
    ದಲಿತ ಮುಖಂಡ ಆನೆಕೊಂಡ ನಾಗರಾಜ್ ಮಾತನಾಡಿ, ಸಮಾಜದಲ್ಲಿ ಬಹುತೇಕ ದಲಿತ ಕುಟುಂಬಗಳು ಬಡತನದ ಜೀವನ ನಡೆಸುತ್ತಿದ್ದು, ಸಾಮೂಹಿಕ ವಿವಾಹಗಳು ಅವರಿಗೆ ವರದಾನವಾಗಿವೆ ಎಂದರು.
    ನವ ದಂಪತಿ ಆದರ್ಶ ಹಾಗೂ ಮಿತ ಕುಟುಂಬದೊಂದಿಗೆ ಸುಖೀ ಜೀವನ ನಡೆಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆರ್ಥಿಕ ಸಬಲತೆಗೆ ಶಿಕ್ಷಣವೇ ಶಕ್ತಿ ಮತ್ತು ಆಧಾರ ಎಂದು ಹೇಳಿದರು.
    ಸಂಘದ ಗೌರವಾಧ್ಯಕ್ಷ ಹೆಗ್ಗೆರೆ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರ್ಜಾತಿ ವಿವಾಹದಿಂದ ಸಮಾಜದಲ್ಲಿ ಜಾತಿ ಪದ್ಧತಿ ತೊಡೆದುಹಾಕಲು ಸಾಧ್ಯ ಎಂದು ತಿಳಿಸಿದರು.
    ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಆರು ಜೋಡಿ ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸುರೇಶ್ ಭಟ್ ಮದುವೆಯ ಧಾರ್ಮಿಕ ವಿಧಿ ನಡೆಸಿಕೊಟ್ಟರು.
    ಬಹುಜನ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ. ಆಂಜನೇಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶೇಖರ್ ಕಾಟೀಹಳ್ಳಿ, ಕುಬೇರಪ್ಪ ಎಚ್. ಗೌರಿಪುರ, ಲೋಕಪ್ಪ ಜಗಳೂರು, ಹನುಮಂತಪ್ಪ ಹಿಂಡಸಘಟ್ಟ, ಎ. ಶಾಂತರಾಜು, ಹುಲಿಕಟ್ಟಿ ಮಂಜಪ್ಪ ಇತರರು ಇದ್ದರು. ಕತ್ತಿಗೆ ಪರಮೇಶ್ವರಪ್ಪ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts