More

    ನಾಮ್‌ಕೇವಾಸ್ತೆಯಾದ ಚೌಡಯ್ಯ ಅಧ್ಯಯನ ಪೀಠಗಳು    ಉಪನ್ಯಾಸಕ ಜಿ.ವಿ. ಮಂಜುನಾಥ್ ವಿಷಾದ

    ದಾವಣಗೆರೆ: ಗುಲ್ಬರ್ಗಾ ಹಾಗೂ ಮಂಗಳೂರು ವಿವಿಗಳಲ್ಲಿ ಸ್ಥಾಪಿಸಲಾಗಿದ್ದ ವಚನಕಾರ ಅಂಬಿಗರ ಚೌಡಯ್ಯ ಅವರ ಕುರಿತ ಅಧ್ಯಯನ ಪೀಠಗಳಲ್ಲಿ ಯಾವುದೇ ಸಂಶೋಧನಾ ಚಟುವಟಿಕೆ ನಡೆದಿಲ್ಲ. ಕೇವಲ ನಾಮ್‌ಕೇವಾಸ್ತೆ ಎಂಬಂತಾಗಿವೆ ಎಂದು ಚಿಕ್ಕಮಗಳೂರಿನ ಉಪನ್ಯಾಸಕ ಜಿ.ವಿ. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
    ಸರಸ್ವತಿ ನಗರದ ಬಸವ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಅವರ ಕುರಿತು ಉಪನ್ಯಾಸ ನೀಡಿದರು.
    ಕ್ರಮವಾಗಿ 2007 ಹಾಗೂ 2012ನೇ ವರ್ಷದಲ್ಲಿ ಸ್ಥಾಪಿತವಾಗಿದ್ದ ಎರಡೂ ಪೀಠಗಳು ಹಣಕಾಸಿನ ಕೊರತೆಯಿಂದ ನರಳುತ್ತಿವೆ. ಚೌಡಯ್ಯನವರ ಕುರಿತಾದ ಯಾವುದೇ ಸಂಶೋಧನೆ ನಡೆದಿಲ್ಲ ಎಂದು ಹೇಳಿದರು.
    12ನೇ ಶತಮಾನದಲ್ಲಿ ಕಂಡುಬರುವ ನಾಲ್ವರು ಚೌಡಯ್ಯನವರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು. ಅವರ ಕುರಿತಂತೆ ಆಧಾರಗಳು ವಿರಳ. ಸಿದ್ದನಂಜೇಶರು ಬರೆದ ಗುರುರಾಜ ಚಾರಿತ್ರೃ ಹಾಗೂ ಕವಿ ನಂಜುಂಡೇಶ್ವರ ಅವರ ಭೈರವೇಶ್ವರ ಕಾವ್ಯ ಕೃತಿಯಲ್ಲಿ ಅವರ ವಿವರಗಳಿವೆ ಎಂದು ವಿವರಿಸಿದರು.
    ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಶಿವಪುರ ಗ್ರಾಮದ ಅಂಬಿಗರ ಚೌಡಯ್ಯನವರು ದೋಣಿ ನಡೆಸುವ ಕಾಯಕದಿಂದ ಜೀವನ ನಡೆಸುತ್ತಿದ್ದರು. ಸತಿ ಸುಲೋಚನ ಜತೆ ಉತ್ತಮ ದಾಂಪತ್ಯ ಹೊಂದಿದ್ದರು. ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣ ಚಳವಳಿಯಲ್ಲಿ ವಿವಿಧೆಡೆಗಳ ಶರಣರು ಭಾಗವಹಿಸುತ್ತಿದ್ದರು. ಚೌಡಯ್ಯ- ಸುಲೋಚನ ದಂಪತಿ ಕೂಡ ಭಾಗಿಯಾಗಿದ್ದರು. ಅಲ್ಲಿ ಬಸವಣ್ಣನವರು ಚೌಡಯ್ಯ ಅವರನ್ನು ‘ನಿಜ ಶರಣ’ ಎಂದು ಸಂಬೋಧಿಸಿದ್ದರು ಎಂದು ಸ್ಮರಿಸಿದರು.
    ಕಲ್ಯಾಣ ಕ್ರಾಂತಿ ವೇಳೆ ಮಾರಣ ಹೋಮ ನಡೆದವು. ಶಿವಶರಣರ ಸಾಕಷ್ಟು ವಚನಗಳು ನಾಶವಾದವು. 770 ಅಮರ ಗಣಂಗಳದಲ್ಲಿ ಒಬ್ಬರಾಗಿದ್ದ ಚೌಡಯ್ಯನವರ ಸಾವಿರಾರು ಸಂಖ್ಯೆಯ ವಚನಗಳನ್ನು ಬರೆದಿರಬಹುದು. ಅದರಲ್ಲಿ ಕೆಲವು ಸುಟ್ಟು ಹೋಗಿರಬಹುದು. ಅದರಲ್ಲಿ ಚೌಡಯ್ಯನವರ ಸಾಹಿತ್ಯವೂ ನಾಶ ಆಗಿರಬಹುದು. ನಮಗಿಂದು ಸಿಕ್ಕ 23 ಸಾವಿರ ವಚನಗಳಲ್ಲಿ ಚೌಡಯ್ಯನವ 330 ವಚನಗಳಿವೆ ಎಂದು ಹೇಳಿದರು.
    ಕಲ್ಯಾಣ ಕ್ರಾಂತಿ ಬಳಿಕ ಶಿವಪುರಕ್ಕೆ ಮರಳಿದ ಅಂಬಿಗರ ಚೌಡಯ್ಯವರು ಪಾದೋದಕ ಮಂತ್ರದಿಂದ ಜನರ ಸಮಸ್ಯೆ ಬಗೆಹರಿಸುತ್ತಿದ್ದರು. ಪಾದೋದಕದಿಂದ ಮಗನನ್ನು ಉಳಿಸಿದ ಕಾರಣಕ್ಕೆ ಹುತ್ತಲ ಅರಸರು ಚೌಡಯ್ಯ ಅವರಿಗೆ ಶಿವಪುರ ಬಳಿ ನೀಡಿದ ಜಮೀನನ್ನು ದಾನವಾಗಿ ನೀಡಿದರು. ಅಲ್ಲಿಂದ ಶಿವಪುರ ಗ್ರಾಮವು ಚೌಡಯ್ಯ ದಾನಪುರ ಎಂದು ಹೆಸರಾಯಿತು ಎಂದು ವಿವರಿಸಿದರು.
    ತುಂಗಭದ್ರಾ ನದಿ ತಟದ ಬಳಿ ಚೌಡಯ್ಯನವರ ಸಮಾಧಿ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಹೆಚ್ಚಾಗಿ ಈ ಸಮಾಧಿ ಮುಳುಗಡೆಯಾಗಿತ್ತದೆ ಎಂದ ಅವರು, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅಂಬಿಗರ ಚೌಡಯ್ಯನವರ ವ್ಯಕ್ತಿತ್ವ ದೊಡ್ಡದಿದೆ. ಅವರ ಮಾತಿನಲ್ಲಿ ವಾಗ್ಬಾಣವಿತ್ತು. ಅದರ ಮೂಲಕ ಸಮಾಜದ ಅಂಕುಡೊಂಕು ತಿದ್ದಿದರು. ವಚನಗಳ ಮೂಲಕವೆ ಸಮಾಜದಲ್ಲಿನ ಮೌಠ್ಯ, ಕಂದಾಚಾರ ಹಾಗೂ ಢಂಬಾಚಾರಗಳನ್ನು ವಿರೋಧಿಸಿದರು ಎಂದು ಹೇಳಿದರು.
    ಪ್ರಾಸ್ತಾವಿಕ ಮಾತನಾಡಿದ ಬಸವಬಳಗದ ಗೌರವಾಧ್ಯಕ್ಷೆ ದಮಯಂತಿ ಎಚ್.ಎಂ.ಸ್ವಾಮಿ, ಬಸವಣ್ಣನವರ ಅನುಭವಮಂಪಟದಲ್ಲಿ ಅಂಬಿಗ ಕಾಯಕದ ಚೌಡಯ್ಯನವರು ಸ್ಥಾನ ಪಡೆದಿದ್ದರು. ಅವರ ವಚನಗಳಲ್ಲಿ ಪರಿಸರದ ಕಾಳಜಿ ಇರುತ್ತಿತ್ತು. ಇಷ್ಟಲಿಂಗ ಪೂಜೆ ಹೊರತಾಗಿ ವಿಗ್ರಹಾರಾಧನೆ ವಿರೋಧಿಸುತ್ತಿದ್ದರು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಬಸವಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್, ಕಾರ್ಯದರ್ಶಿ ವೀಣಾ ಮಂಜುನಾಥ್ ಇದ್ದರು. ಸುನೀತಾ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts