More

    ಸಹಾಯವಾಣಿ ಕಾರ್ಯಪಡೆ ರಚನೆಗೆ ಪಟ್ಟು  ಬೀದಿಗಿಳಿದ ಮನೆಗೆಲಸ ಕಾರ್ಮಿಕರು

    ದಾವಣಗೆರೆ: ಗೃಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ ಜತೆಗೆ ಗೃಹ ಕಾರ್ಮಿಕರ ಕಾರ್ಯಪಡೆ ಸ್ಥಾಪಿಸಬೇಕೆಂದು ಆಗ್ರಹಿಸಿ ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಮನೆಗೆಲಸ ಕಾರ್ಮಿಕರ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ನಗರದಲ್ಲಿನ ಬಳ್ಳಾರಿ ವಿಭಾಗದ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮನೆಗೆಲಸದ ಮಹಿಳೆಯರು ಅಲ್ಲಿನ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
    ಲೈಂಗಿಕ ಕಿರುಕುಳ ಸಂಭವಿಸಿದಾಗ ನಿವಾಸಿ ಕಲ್ಯಾಣ ಸಂಘಗಳು ಮತ್ತು ಉದ್ಯೋಗದಾತರು ಜವಾಬ್ದಾರರಾಗಿರಬೇಕು. ಮಹಿಳಾ ಆಯೋಗವು ಅಂತಹ ಪ್ರಕರಣಗಳ ತ್ವರಿತ ವರದಿಗಾಗಿ ಘಟಕಗಳನ್ನು ಕಡ್ಡಾಯಗೊಳಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕಾನೂನು ನೆರವು ಮತ್ತು ರಕ್ಷಣೆ ಕಲ್ಪಿಸಬೇಕು. ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆಯಡಿ ಸ್ಥಳೀಯ ಸಮಿತಿ ನಿಯಮಗಳನ್ನು ಪರಿಷ್ಕರಿಸಬೇಕು.
    ಗೃಹ ಕಾರ್ಮಿಕರು ಮತ್ತು ಅವರ ಸಂಘಗಳನ್ನು ಒಳಗೊಂಡ ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಅದರ ಮೂಲಕ ಗೃಹ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಸಾಮಾಜಿಕ ರಕ್ಷಣೆಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಬೇಕು.
    2008ರ ಲೋಕಸಭೆಯ ಸ್ಥಾಯಿ ಸಮಿತಿಯ ಶಿಫಾರಸಿನಂತೆ ಜಿಎಸ್‌ಟಿಯ ಶೇ. 1, ವಾರ್ಷಿಕ ಕೇಂದ್ರ ಮತ್ತು ರಾಜ್ಯ ಬಜೆಟ್‌ನ ಶೇ.3ರಷ್ಟು ಹೆಚ್ಚುವರಿ ತೆರಿಗೆ /ಸೆಸ್‌ನೊಂದಿಗೆ ತ್ರಿಪಕ್ಷೀಯ ಮಂಡಳಿಗಳ ಮೂಲಕ ಗೃಹ ಕಾರ್ಮಿಕರಿಗೆ ಸಮಗ್ರ ಪ್ರಯೋಜನಗಳನ್ನು ನೀಡಬೇಕು.
    ಏಜೆನ್ಸಿಗಳು, ಗೃಹ ಕಾರ್ಮಿಕರ ಕಳ್ಳಸಾಗಣೆಯಲ್ಲಿರುವ ಉದ್ಯೋಗದಾತರು ಮತ್ತು ಅವರಿಂದ ಅವರ ಶೋಷಣೆಗೆ ತಕ್ಷಣದ ಕಠಿಣ ಕ್ರಮ ಕೈಗೊಳ್ಳಬೇಕು. ಪ್ಲೇಸ್‌ಮೆಂಟ್ ಏಜೆನ್ಸಿ ನಿಯಂತ್ರಣ ಕಾಯ್ದೆ ಜಾರಿ ಮಾಡಬೇಕು. ಕಳ್ಳಸಾಗಣೆ ನಿಷೇಧ ಸಂಬಂಧ ಹೈಕೋರ್ಟ್‌ನ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
    ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದ್ದು ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೂ ತನಿಖೆಯ ಖಚಿತತೆಗೆ ಮಹಿಳಾ ಪರ ಸೂಕ್ಷ್ಮತೆ ಹೊಂದಿರುವ ಅಧಿಕಾರಿಗಳನ್ನು ನೇಮಿಸಬೇಕು. ವಿಡಿಯೋಗಳ ಪ್ರಸಾರ ತಡೆಗೆ ಪ್ರಯತ್ನಿಸಬೇಕು. ಸಂತ್ರಸ್ತರ ಖಾಸಗಿತನವನ್ನು ಕಾಪಾಡುವ ಜತೆಗೆ ರಕ್ಷಣೆ ಒದಗಿಸಬೇಕು ಎಂದೂ ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಜಿಲ್ಲಾ ಮನೆಗೆಲಸ ಕಾರ್ಮಿಕರ ಯೂನಿಯನ್‌ನ ಮುಖಂಡರಾದ ಜಬೀನಾಖಾನಂ, ಎಂ.ಕರಿಬಸಪ್ಪ, ಗೃಹ ಕಾರ್ಮಿಕರಾದ ರಜೀಯಾ ಬಾನು, ರಾಬಿಯಾ ಬಾನು, ಜರೀನ್, ಉಮಾ, ಎಸ್.ವಿ. ಸ್ವಾತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts