More

    ಭಾರತದ ಶೇ.80 ಜನರಲ್ಲಿ ಕಣ್ಣಿನ ಪೊರೆ ಸಮಸ್ಯೆ   ಆರೋಗ್ಯ ಕಾರ್ಯಾಗಾರದಲ್ಲಿ ತಜ್ಞ ಡಾ. ಶಿವಯೋಗಿ ಆರ್. ಕುಸಗೂರ ಹೇಳಿಕೆ

    ದಾವಣಗೆರೆ: ಭಾರತದಲ್ಲಿ ಶೇ.80ರಷ್ಟು ಮಂದಿ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಾಪೂಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಶಿವಯೋಗಿ ಆರ್. ಕುಸಗೂರ ಹೇಳಿದರು.
    ಇಲ್ಲಿನ ಬಾಪೂಜಿ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಜನಸಾಮಾನ್ಯರಲ್ಲಿ ಕಣ್ಣಿನ ಆರೋಗ್ಯ’ ವಿಷಯ ಕುರಿತು ಉಪನ್ಯಾಸ ನೀಡಿದರು.
    ದೇಶದಲ್ಲಿ ವರ್ಷಕ್ಕೆ 55 ಲಕ್ಷ ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಆಗಬೇಕಿದೆ. ಕೇವಲ 37 ಲಕ್ಷ ಜನರು ಆಪರೇಷನ್‌ಗೆ ಒಳಗಾಗುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ 2 ಲಕ್ಷ ಮಂದಿಗೆ ಈ ಶಸ್ತ್ರಚಿಕಿತ್ಸೆ ಆಗುತ್ತಿದೆ. ಅಂಧತ್ವ ನಿವಾರಣಾ ಸಮಿತಿ ಜತೆಗೆ ಸ್ವಯಂಸೇವಾ ಸಂಸ್ಥೆಗಳು ಶಿಬಿರ ನಡೆಸುತ್ತ ಸಹಕಾರ ನೀಡುತ್ತಿವೆ ಎಂದು ವಿವರಿಸಿದರು.
    ಸರ್ ಹೆರಾಲ್ಡ್ ರಿಡ್ಲೆ ಸಂಶೋಧಿಸಿದ ಲೆನ್ಸ್ ಇಂದಿಗೂ ಶಸ್ತ್ರಚಿಕಿತ್ಸೆಯಲ್ಲಿ ಅಳವಡಿಕೆಯಾಗುತ್ತಿದೆ. ಗ್ಲಾಕೋಮಾ (ಅರಿವಾಗದ ಅಂಧತ್ವ) ಸಮಸ್ಯೆ ಶೇ.50ರಷ್ಟು ಕಣ್ಣಿನ ಹಾನಿ ತರಲಿದೆ. ಕಣ್ಣಿನ ನರಗಳು ಸಂಕುಚಿತಗೊಂಡು ದೃಷ್ಟಿ ಮಾಸುವ ಸಂಭವವಿದೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.
    ಆನುವಂಶಿಕವಾಗಿ ಈ ಕಾಯಿಲೆ ಇದ್ದಲ್ಲಿ ಅವರ ಕುಟುಂಬದವರು, 40 ವರ್ಷ ಮೇಲ್ಪಟ್ಟವರು ಹಾಗೂ ಮೈನಸ್ ನಂಬರ್‌ನ ಕನ್ನಡಕ ಧರಿಸುವವರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಮೂರು ಹಂತದ ಡ್ರಾಪ್ಸ್ ಹಾಕಿದ್ದರೂ ಹತೋಟಿಗೆ ಬರದಿದ್ದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಕಣ್ಣಿನ ದೋಷವನ್ನು 18 ಮಿ.ಮೀ. ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
    ಅಗತ್ಯಕ್ಕೂ ಮೀರಿದ ಒತ್ತಡ, ಆಹಾರಶೈಲಿಯಿಂದಾಗಿ ಮಧುಮೇಹಿಗಳಲ್ಲಿ ದೃಷ್ಟಿದೋಷ ಕಂಡುಬರಲಿದೆ. ಕಣ್ಣಿನ ದೃಷ್ಟಿ ಮಂಜಾಗಲಿದೆ. ಇಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಲೇಸರ್ ಮತ್ತು ಇಂಜೆಕ್ಷನ್ ಮೂಲಕ ಸಮಸ್ಯೆ ಹತೋಟಿಗೆ ತರಬಹುದು. ಮಧುಮೇಹಿಗಳು ಪ್ರತಿ 6 ತಿಂಗಳಿಗೊಮ್ಮೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ತಿಳಿಸಿದರು.  
    ಮಕ್ಕಳು ಹತ್ತಿರದಿಂದ ಟೀವಿ ನೋಡುತ್ತಿದ್ದರೆ ಅವರಿಗೆ ದೂರದ (ಮಯೋಪಿಯ) ದೃಷ್ಟಿದೋಷ ಇರುವ ಸಾಧ್ಯತೆ ಇರಲಿದೆ. ಇದನ್ನು ಖಚಿತಪಡಿಸಿಕೊಳ್ಳಬೇಕು. ಧೂಮಪಾನಿ, ಮದ್ಯಪಾನಿಗಳು ವ್ಯಸನದಿಂದ ದೂರ ಇರಬೇಕು.
    ಸೂರ್ಯನನ್ನು ನೇರವಾಗಿ ದಿಟ್ಟಿಸುವುದು ಸರಿಯಲ್ಲ. ಕನ್ನಡಕವನ್ನು ಹೆಚ್ಚು ಧರಿಸಿದರೆ ಕಣ್ಣಿನ ದೋಷದ ನಂಬರ್ ಕಡಿಮೆಯಾಗುವುದಿಲ್ಲ. ಮೊಬೈಲ್ ವ್ಯಸನದಿಂದಾಗಿ ದಟ್ಟವಾದ ಬೆಳಕಿನ ಪರಿಣಾಮವಾಗಿ ಮುಂಬರುವ ದಿನದಲ್ಲಿ ಕೋವಿಡ್‌ನಂಥ ಮತ್ತೊಂದು ರೋಗ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಸಿಎಚ್‌ಐ ಆಸ್ಪತ್ರೆಯ ನಿರ್ದೇಶಕರಾದ ಡಾ. ಗುರುಪ್ರಸಾದ್, ಡಾ. ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಹಾಗೂ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳಿದ್ದರು.
    ಭಾವನಾತ್ಮಕ ಕಣ್ಣೀರಲ್ಲಿದೆ ಸಮಾಧಾನ
    ಮೂಲಭೂತವಾದ, ಪ್ರತಿಕ್ರಿಯೆ ಹಾಗೂ ಕುಣಿಕೆ ಚೀಲದ ಕಣ್ಣೀರು ಎಂಬ ಪ್ರಬೇಧವಿವೆ. ಭಾವನಾತ್ಮಕ ಕಣ್ಣೀರಿನಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ಇದು ವೈಜ್ಞಾನಿಕವಾಗಿಯೂ ಋಜವಾತಾಗಿದೆ.  ಹೆಣ್ಣುಮಕ್ಕಳು ಪುರುಷರಿಗಿಂತ ಹೆಚ್ಚು ಅಳಲಿದ್ದು, ಪ್ರೊಲ್ಯಾಕ್ಟಿವ್ ಹಾರ್ಮೋನ್‌ನಿಂದಾಗಿ ಅವರಲ್ಲಿ ಸಮಾಧಾನ ತರಲಿದೆ ಎಂದರು.
    ಮೆಳ್ಳೆಗಣ್ಣು ಅದೃಷ್ಟವಲ್ಲ
    ಹುಟ್ಟುವ ಮಕ್ಕಳು ಮೆಳ್ಳೆಗಣ್ಣಿನವರಾಗಿದ್ದರೆ ಅದು ಅದೃಷ್ಟ, ಶುಭಸೂಚಕ, ಇದಕ್ಕೆ ಆಪರೇಷನ್ ಮಾಡಿಸಬಾರದು ಎಂಬುದಾಗಿ ಕೆಲ ಪಾಲಕರಲ್ಲಿ ತಪ್ಪು ಗ್ರಹಿಕೆ ಇದೆ. ಸೂಕ್ತ ಚಿಕಿತ್ಸೆ ನೀಡಿದರೆ ಇದನ್ನು ಪರಿಹರಿಸಬಹುದು. ಒಬ್ಬರ ಮರಣಾಂತರದಲ್ಲಿ ಎರಡು ಕಣ್ಣುಗಳು ಇಬ್ಬರಿಗೆ ದೃಷ್ಟಿ ನೀಡಲಿವೆ. ಹೀಗಾಗಿ ನೇತ್ರದಾನ ಶ್ರೇಷ್ಠವಾದುದು. ನೇತ್ರದಾನಕ್ಕೆ ಜನರು ಮುಂದಾಗಬೇಕು. ಮರಣವಾದ ಆರು ಗಂಟೆಗಳಲ್ಲಿ ನೇತ್ರ ಪಡೆಯಲಾಗುವುದು ಎಂದು ವಿವರಿಸಿದರು.

    ಅಂಧರಿಗಾಗಿ ಬರಲಿದೆ ಜೈವಿಕ ಕಣ್ಣು!
    ಪೂರ್ಣ ಅಂಧರಿಗೆ ಜೈವಿಕ ಕಣ್ಣು (ಬಯೋನಿಕ್ ಐ)ಬರುತ್ತಿದೆ. ಅಮೆರಿಕದಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ಪೂರ್ಣ ಅಂಧರಿಗೆ ಕನ್ನಡಕದಲ್ಲಿ ಕ್ಯಾಮರಾ ಮೂಲಕ ರಿಸೀವರ್ ಜತೆಗೆ ಎಲೆಕ್ಟ್ರೋಡ್‌ಗಳು ಅಕ್ಷಿಪಟಲವನ್ನು ತಲುಪಿ ದೃಶ್ಯ ಮೂಡಿಸಲಿದೆ. ಇದು ಅಂಧರಿಗೆ ಅಶಾಕಿರಣವಾಗಲಿದೆ. ದೇವರ ದಯೆಯಿಂದ ಇನ್ನು 10 ವರ್ಷದಲ್ಲಿ ಇದು ಭಾರತಕ್ಕೂ ಬರಬಹುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts