More

    ದಾವಣಗೆರೆ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯ ಅಭಿನಂದನಾ ಕಾರ್ಯಕ್ರಮದಲ್ಲಿ   ಶಾಸಕ ಎಸ್ಸೆಸ್  ಹೇಳಿಕೆ

    ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇಲ್ಲದಿರುವುದರಿಂದ ಕೊಂಚ ನಿಧಾನವಾಗಬಹುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಭಾ ಮಲ್ಲಿಕಾರ್ಜುನ್ ನೂತನ ಸಂಸದರಾಗಿರುವುದರಿಂದ ಜನತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕಿಚಡಿ ಸರ್ಕಾರವಿದ್ದು, ವಿಮಾನ ನಿಲ್ದಾಣ, ಕೈಗಾರಿಕೆಗಳು ಒಂದೇ ಸಲಕ್ಕೆ ಬರುತ್ತವೆ ಎಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ತಿಳಿಸಿದರು.
    ಜನತೆ ಅಭಿವೃದ್ಧಿ ಕೆಲಸಗಳು ಬಂದಂತೆ ನೋಡಿಕೊಂಡು ಹೋಗಬೇಕು. ಸಂಸದರು ಆದಷ್ಟು ಸೂಕ್ಷ್ಮ ರೀತಿಯಲ್ಲಿ  ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಜತೆಗೆ ಕೆಲವೊಂದು ಸಲ ಸಂಸತ್‌ನಲ್ಲಿ ಒತ್ತಡವನ್ನು ಹೇರಬೇಕಾಗುತ್ತದೆ ಎಂದರು.
    ದಾವಣಗೆರೆ ನಗರವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ನಮಗೆ ಸಲ್ಲುತ್ತದೆ. ನಮ್ಮ ಸೊಸೆ ಜನ ಮೆಚ್ಚುವ ರೀತಿಯಲ್ಲಿ ಹಾಗೂ ಜನರ ಅಭಿಮಾನಕ್ಕೆ ಕುಂದು ಬಾರದಂತೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ. ಈ ಬಗ್ಗೆ ನಾವು ಸಹ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಹೇಳಿದರು.
    ಸನ್ಮಾನ ಸ್ವೀಕರಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಮೇಲೆ ಅಭಿಮಾನ ಇಟ್ಟುಕೊಂಡು ಎಲ್ಲ ಸಮಾಜದವರು ಪಕ್ಷಾತೀತವಾಗಿ ತಮ್ಮ ಪರವಾಗಿ ಕೆಲಸ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಪರ್ವ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
    ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾಸ್ಪತ್ರೆ, ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಯುವಜನರು ಹಾಗೂ ಮಹಿಳೆಯರಿಗೆ ಉದ್ಯೋಗವಕಾಶ ಮತ್ತು ಗುಡಿಕೈಗಾರಿಕೆ, ರೈತರ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗುವುದು. ಐಟಿ-ಬಿಟಿ, ವಿಮಾನ ನಿಲ್ದಾಣ ಸ್ಥಾಪನೆಗೂ ಪ್ರಮುಖ ಆದ್ಯತೆ ನೀಡಲಾಗುವುದು. ಜನತಾ ದರ್ಶನ ನಡೆಸಲಾಗುವುದು ಎಂದರು.
    ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ಹುಬ್ಬಳ್ಳಿ, ಬೆಳಗಾವಿಯಂತೆ ದಾವಣಗೆರೆ ನಗರ ಅಭಿವೃದ್ಧಿ ಹೊಂದಬೇಕಾದರೆ ವಿಮಾನ ನಿಲ್ದಾಣ ಸ್ಥಾಪನೆ ಜತೆಗೆ ಕೈಗಾರಿಕೆಗಳು ಸ್ಥಾಪನೆ ಆಗಬೇಕು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಐಎಎಸ್, ಐಪಿಎಸ್ ತರಬೇತಿ ಕೇಂದ್ರ ಆರಂಬಿಸಬೇಕು. ವೀರಶೈವ ಲಿಂಗಾಯತ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಸಬೇಕು ಎಂದು ನೂತನ ಸಂಸದರಿಗೆ ಸಲಹೆ ನೀಡಿದರು.
    ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ನಗರದಲ್ಲಿ ಮುಖ್ಯವಾಗಿ ಅಶೋಕ ಚಿತ್ರಮಂದಿರ ಹಾಗೂ ಅರುಣಾ ಟಾಕೀಸ್ ಸಮೀಪದ ರೈಲ್ವೇ ಗೇಟ್ ಸಮಸ್ಯೆ ನಿವಾರಣೆಗೆ ಪ್ರಭಾ ಮಲ್ಲಿಕಾರ್ಜುನ್ ಆಸಕ್ತಿ ವಹಿಸಿ ಕೆಲಸ ಮಾಡಬೇಕು. ವಿಮಾನ ನಿಲ್ಧಾನ ಹಾಗೂ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಬೇಕು ಎಂದರು.
    ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ  ಅಣಬೇರು ರಾಜಣ್ಣ ಪ್ರಾಸ್ತಾವಿಕ ಮಾತನಾಡಿ, ಪ್ರಭಾ ಮಲ್ಲಿಕಾರ್ಜುನ್ ರಾಜಕೀಯಕ್ಕೆ ಬಂದಿರುವುದು ಅತೀವ ಸಂತೋಷ ತಂದಿದೆ. ಬಿಜೆಪಿ ಭದ್ರಕೋಟೆ ಭೇದಿಸಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಅವರಿಂದ ರಾಜಕೀಯ ಹಾಗೂ ಸಮಾಜ ಸೇವೆ ನಿರಂತರ ಮುಂದುವರೆಯಲಿ ಆಶಿಸಿದರು.
    ಪ್ರಾಧ್ಯಾಪಕ ಎಚ್.ಎಸ್.ಮಂಜುನಾಥ ಕುರ್ಕಿ ಅಭಿನಂದನಾ ನುಡಿಗಳನ್ನಾಡಿದರು. ಮಹಾಸಭಾ ಕೈಗಾರಿಕಾ ಘಟಕ ಅಧ್ಯಕ್ಷ ಐಗೂರು ಚಂದ್ರಶೇಖರ್ ಇದ್ದರು. ಸೌಮ್ಯ ಸತೀಶ್ ಸ್ವಾಗತಿಸಿದರು, ಶುಭಾ ಐನಳ್ಳಿ ನಿರೂಪಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts