More

    ಅನಗತ್ಯ ಕಿಟ್ ವಿತರಣೆ ಕೈಬಿಡಿ  ಕಟ್ಟಡ ಕಾರ್ಮಿಕರ ಪ್ರತಿಭಟನೆ

    ದಾವಣಗೆರೆ: ಹೈಕೋರ್ಟ್ ತಡೆಯಾಜ್ಞೆ ಆದೇಶದಂತೆ ಅನಗತ್ಯ ಕಿಟ್ ವಿತರಣೆ ಕೈಬಿಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
    ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಕಟ್ಟಡ ಕಾರ್ಮಿಕರು ಎಸಿ ದುರ್ಗಾಶ್ರೀ ಅವರ ಮೂಲಕ ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು.
    ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿರುವ 25-30 ಲಕ್ಷ ಕಟ್ಟಡ ಕಾರ್ಮಿಕರಿಗೆ ಯೋಗ್ಯ ಯೋಜನೆಗಳನ್ನು ಕೈಬಿಟ್ಟು ಅನುಪಯೋಗಿ ಕಿಟ್‌ಗಳು, ಕೋಟ್ಯಂತರ ರೂ. ವೆಚ್ಚ ಮಾಡಿ ಕ್ಯಾಲೆಂಡರ್‌ಗಳನ್ನು ನೀಡುವುದು ಸರಿಯಲ್ಲ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
    ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ ಕಿಟ್ ವಿಚಾರದಲ್ಲಿ ಸರ್ಕಾರ ತಡೆಯಾಜ್ಞೆ ಪಾಲಿಸಬೇಕು. ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೊಟ್ಟಿರುವ ಗುತ್ತಿಗೆ ರದ್ದುಗೊಳಿಸಬೇಕು. ಇದರಿಂದ 500 ಕೋಟಿ ರೂ. ಹಣ ಉಳಿಯಲಿದೆ. ಬಿಬಿಎಂಪಿ ಮಾದರಿಯಲ್ಲಿ ಇಎಸ್‌ಐ  ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಹಿಂದಿದ್ದ ಶೈಕ್ಷಣಿಕ ಧನಸಹಾಯ ಮುಂದುವರೆಸಬೇಕು.ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳ ಬಾಕಿ ಧನಸಹಾಯ ಬಿಡುಗಡೆ ಮಾಡಬೇಕು. ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಇದಕ್ಕೆ ಅರ್ಜಿ ಹಾಕಲು ಕ್ರಮಕೈಗೊಳ್ಳಬೇಕು. ನಕಲಿ ಕಾರ್ಡ್ ಹೆಸರಲ್ಲಿ ನೈಜ ಕಾರ್ಮಿಕರ ಕಾರ್ಡ್‌ಗಳನ್ನು ತಿರಸ್ಕರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
    ಸಿಐಟಿಯು ಮುಖಂಡ ಕೆ.ಎಚ್.ಅನಂದರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಏಕಪಕ್ಷೀಯ ತೀರ್ಮಾನ ಕೈಬಿಡಬೇಕು. ಕಾರ್ಮಿಕ ಸಂಘಟನೆಗಳ ಜೊತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆಸಿ ತ್ರಿಪಕ್ಷೀಯ ತೀರ್ಮಾನಕ್ಕೆ ಬರಬೇಕು. ಕಾರ್ಮಿಕರಿಗೆ ಹೊರೆಯಾಗಿರುವ ಪೆಟ್ರೋಲ್, ಡೀಸೆಲ್, ಹಾಲು ಹಾಗೂ ತರಕಾರಿ ಸೇರಿದಂತೆ ದಿನಬಳಕೆಯ ವಸ್ತುಗಳ ದರ ಇಳಿಸಬೇಕು ಎಂದು ಆಗ್ರಹಿಸಿದರು.
    ಕಾರ್ಮಿಕ ಸಂಘಟನೆಗಳ ಜತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿ ತ್ರಿಪಕ್ಷೀಯ ತೀರ್ಮಾನಕ್ಕೆ ಬರಬೇಕು ಮತ್ತು ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳನ್ನು ಕಲ್ಯಾಣ ಮಂಡಳಿಯ ಪ್ರತಿನಿಧಿಯಾಗಿ ನಿಯೋಜಿಸಬೇಕೆಂದು ಹೇಳಿದರು.
    ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆ ಮುಖಂಡರಾದ ವಿ.ಲಕ್ಷ್ಮಣ, ಶಿವಕುಮಾರ್ ಡಿ.ಶೆಟ್ಟರ್, ಎಚ್‌ಕೆಆರ್ ಸುರೇಶ್, ಎಸ್.ಕೆ.ಆದಿಲ್ ಖಾನ್, ಮಹಮ್ಮದ್ ರಫೀಕ್, ನಾಗಮ್ಮ, ಸತೀಶ್ ಅರವಿಂದ್, ಭರಮಪ್ಪ, ಹನುಮಂತಪ್ಪ, ತಿಪ್ಪೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts