More

    ಕಾಂಗ್ರೆಸ್ ಸರ್ಕಾರ ವಜಾಕ್ಕೆ ಒತ್ತಾಯ ಬೀದಿಗಿಳಿದ ಬಿಜೆಪಿ ಎಸ್ಟಿ ಮೋರ್ಚಾ

    ದಾವಣಗೆರೆ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾದಡಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಡಿಸಿ ಕಚೇರಿ ಪ್ರವೇಶದ್ವಾರದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಬ್ಬಿ ಒಳ ನುಗ್ಗಲು ಯತ್ನಿಸಿದರು. ಕೆಲವರು ಕಬ್ಬಿಣದ ಗೇಟ್ ಹತ್ತಿ ಪ್ರತಿಭಟಿಸಿದರು. ಈ ಹಂತದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.
    ಸಿಎಂ ಸಿದ್ದರಾಮಯ್ಯ ನಿರ್ವಹಣೆಯ ಆರ್ಥಿಕ ಇಲಾಖೆ ಮಾಹಿತಿಯಿಲ್ಲದೆ ಹಗರಣ ನಡೆಯಲು ಸಾಧ್ಯವಿಲ್ಲ. ಅಹಿಂದ ಜಪ ನಡೆಸುವ ಸಿದ್ದರಾಮಯ್ಯ ಅವರು ಅವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿಲ್ಲ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಮನವಿಪತ್ರ ಸಲ್ಲಿಸಿದರು.  
    ತೆಲಂಗಾಣದ ಬೇನಾಮಿ ಖಾತೆಗೆ ಹಣ ವರ್ಗಾಯಿಸಿ ಲಪಟಾಯಿಸುವ ಕುತಂತ್ರ ನಡೆದಿದ್ದು ಇದರ ಹಿಂದೆ ಅನೇಕ ಸಚಿವರ ಕೈವಾಡವಿದೆ. ನಿಗಮದ ಅಧ್ಯಕ್ಷ, ಶಾಸಕ ಬಸವನಗೌಡ ದದ್ದಲ್ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆ. ಪ್ರಕರಣದ ಸಾಕ್ಷೃ ನಾಶಕ್ಕೆ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಕೆಲವು ಜನಪ್ರತಿನಿಧಿಗಳು ಚರ್ಚಿಸಿದ್ದಾಗಿ ಬಂಧಿತ ಆರೋಪಿಗಳು ಹೇಳುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದೂ ಒತ್ತಾಯಿಸಿದರು.
    ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಎಸ್ಸಿ ನಿಗಮದ ಹಣವನ್ನು ಅನ್ಯ ರಾಜ್ಯದ ಚುನಾವಣೆಗೆ ಬಳಸಲಾಗಿದೆ. ಈ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲಾಗಿದೆ. ಇದಕ್ಕೆಲ್ಲ ಕಾರಣವಾದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸೂಕ್ತ ತನಿಖೆ ನಡೆಸಬೇಕು ಎಂದರು.
    ಗ್ಯಾರಂಟಿಗೆ ಹಣ ಹೊಂದಿಸಲು ಪ್ರಾರಂಭದಿಂದ ಅಬಕಾರಿ, ಸ್ಟ್ಯಾಂಪ್ ಡ್ಯೂಟಿ ಇತರೆ ಅಗತ್ಯ ವಸ್ತುಗಳ ಜತೆಗೆ ಇದೀಗ ಹಾಲು ಹಾಗೂ ಪೆಟ್ರೋಲ್ ಡೀಸೆಲ್ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಸರ್ಕಾರದಲ್ಲಿ ಅನುದಾನ ಸಿಗದೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದರು.
    ಬಿಜೆಪಿ ವಾಲ್ಮೀಕಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದಲಿತ ಪರ ಕೆಲಸ ಮಾಡುತ್ತೇನೆ ಎಂದವರು ದಲಿತರಿಗೇ ಮೋಸ ಮಾಡಿದ್ದಾರೆ. ಈ ಸರ್ಕಾರ ಮುಂದುವರಿಯಲು ಅರ್ಹವಿಲ್ಲ ಎಂದು ಹೇಳಿದರು.
    ಶಾಸಕ ಬಿ.ಪಿ.ಹರೀಶ್ ಮಾತನಾಡಿ ರಾಜ್ಯದಲ್ಲಿ ಬರಗಾಲ ಇರುವಾಗ ಡೀಸೆಲ್, ಪೆಟ್ರೋಲ್ ಬೆಲೆ ಏರಿಸಿದ ಕಾಂಗ್ರೆಸ್ ಸರ್ಕಾರ,  ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಆ ಪಕ್ಷದ ಶಾಸಕರಿಗೂ ಕೂಡ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನವಿದೆ. ಡಿಸಿಎಂ ಹಾಗೂ ಸಿಎಂ ಬದಲಾವಣೆ ಮಾಡಬೇಕು ಎಂಬ ಕೂಗು ಎದ್ದಿದೆ ಎಂದರು.
    ಲೋಕಸಭಾ ಚುನಾವಣೆಗೆ ಅನೇಕ ಇಲಾಖೆಗಳ ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿರುವ  ಶಂಕೆಯಿದ್ದು ಅದೆಲ್ಲಾ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಮುಖಂಡರಾದ ಗಾಯತ್ರಿ ಸಿದ್ದೇಶ್ವರ,  ಹನಗವಾಡಿ ವೀರೇಶ್, ಧನಂಜಯ ಕಡ್ಲೇಬಾಳ್, ಕೊಳೇನಹಳ್ಳಿ ಬಿ.ಎಂ. ಸತೀಶ್, ಜಿ.ಎಸ್.ಶ್ಯಾಮ್, ಬಿ.ಜಿ.ಅಜಯಕುಮಾರ್, ಅನಿಲ್‌ಕುಮಾರ ನಾಯ್ಕ, ರಮೇಶ ನಾಯ್ಕ, ಶಾಗಲೆ ದೇವೇಂದ್ರಪ್ಪ, ಕಬ್ಬೂರು ಶಿವಕುಮಾರ್, ಮಳಲ್ಕೆರೆ ಸದಾನಂದ,  ಕುಂದುವಾಡ ಗುರುನಾಥ, ಎಸ್.ಟಿ ವೀರೇಶ್,ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ಫಣಿಯಾಪುರ ಲಿಂಗರಾಜ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಮಹೇಶ್, ಭಾಗ್ಯಾ ಪಿಸಾಳೆ, ಚೇತೂಬಾಯಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts