More

    ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಲು ಎಐಡಿಎಸ್‌ಒ ಆಗ್ರಹ

    ದಾವಣಗೆರೆ :  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಲು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಯದ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.  ಭಿತ್ತಿ ಪತ್ರಗಳನ್ನು ಹಿಡಿದು ಬಂದಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಸೇರಿ ಘೋಷಣೆ ಕೂಗಿದರು. ನಂತರ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.  ಸಂಘಟನೆಯ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, 2023-24ನೇ ಸಾಲಿನಲ್ಲಿ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಮೊದಲ ಬ್ಯಾಚಿನ ವಿದ್ಯಾರ್ಥಿಗಳಲ್ಲಿ ಅನೇಕರು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ. 1ನೇ ಸೆಮಿಸ್ಟರ್ ಪರೀಕ್ಷೆಯಲ್ಲೇ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿಲ್ಲ. 1, 2 ಮತ್ತು 3ನೇ ಸೆಮಿಸ್ಟರಿನಲ್ಲಿ ಅನುತ್ತೀರ್ಣಗೊಂಡ ವಿಷಯಗಳಿಗೆ ಒಮ್ಮೆಲೆ 4ನೇ ಸೆಮಿಸ್ಟರ್‌ನಲ್ಲಿ ಅವಕಾಶ ನೀಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.  ಹೀಗಾಗಿ ಅವರ ಒಟ್ಟು ಪದವಿ ಶಿಕ್ಷಣವೇ ಒತ್ತಡ ಮತ್ತು ಗೊಂದಲದಲ್ಲಿ ಕಳೆದಿದೆ. ಈಗ ಈ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾರೆ. 1ನೇ ಸೆಮಿಸ್ಟರ್ ಮೊದಲುಗೊಂಡು ಬೆಸ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಹಲವರು ಅನುತ್ತೀರ್ಣರಾಗಿದ್ದು, ವಿದ್ಯಾರ್ಥಿಗಳು ತೀವ್ರ ಆತಂಕದಲ್ಲಿದ್ದಾರೆ. ಇವರಲ್ಲಿ ಹಲವರು ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೆಸ ಸೆಮಿಸ್ಟರ್‌ನ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಮರು ಮೌಲ್ಯಮಾಪನದಲ್ಲಿ ಬಂದಿದ್ದ ಅಂಕದಲ್ಲಾಗಿರುವ ದೋಷಗಳನ್ನು ಸರಿಪಡಿಸುವಂತೆ ಮನವಿ ಮಾಡಲಾಯಿತು.  ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿ ಬಿ.ಡಿ. ಕುಂಬಾರ, ಮರು ಮೌಲ್ಯಮಾಪನದ ಅಂಕಗಳಲ್ಲಿ ಆಗಿರುವ ದೋಷಗಳನ್ನು ಕೂಡಲೇ ಸರಿಪಡಿಸುವುದಾಗಿ ಹೇಳಿದರು. 6ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕದ ದಿನಾಂಕವನ್ನು ಜುಲೈ 7ನೇ ತಾರೀಖಿನವರೆಗೂ ವಿಸ್ತರಿಸುವುದಾಗಿ ಪ್ರಕಟಿಸಿದರು.  ರಾಜ್ಯ ಮಟ್ಟದಲ್ಲಿ ಯುಯುಸಿಎಂಎಸ್ ಪೋರ್ಟಲ್ ಮೂಲಕವೇ ಪರೀಕ್ಷಾ ಶುಲ್ಕಗಳನ್ನು ಪಾವತಿಸಲು ಅವಕಾಶ ಇರುವುದರಿಂದ ಈ ಕುರಿತು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಗಮನ ಸೆಳೆದು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಯತ್ನಿಸುವುದಾಗಿ ತಿಳಿಸಿದರು.  ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್, ಜಿಲ್ಲಾ ಉಪಾಧ್ಯಕ್ಷರಾದ ಬಿ. ಕಾವ್ಯಾ, ಯಶವಂತ್, ನಿಖಿಲ್, ಅಬ್ಜಲ್, ನಯನ, ತನುಶ್ರೀ, ನಿವೇದಿತಾ ಇತರರು ಭಾಗವಹಿಸಿದ್ದರು.

    See also  ಮೆಕ್ಕೆಜೋಳ ಕಣಜದಲ್ಲಿ ಕೇಸರಿ ಕಂಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts