More

    ಮಳೆ ನೀರು ಕೊಯ್ಲಿಗಾಗಿ ಭಗೀರಥರಾಗೋಣ

    ದಾವಣಗೆರೆ : ನೈಸರ್ಗಿಕವಾಗಿ ಬೀಳುವ ಮಳೆ ನೀರನ್ನು ಹಿಡಿದಿಡುವ ಮೂಲಕ ನಾವೆಲ್ಲ ‘ಭಗೀರಥ’ರಾಗಬೇಕು. ಇದನ್ನು ಚಳವಳಿಯ ರೂಪದಲ್ಲಿ ಬೆಳೆಸಬೇಕು ಎಂದು ಮಳೆ ನೀರು ಕೊಯ್ಲು ಸಲಹೆಗಾರ ವಿಜಯರಾಜ್ ಸಿಸೋದ್ಯಾ ಹೇಳಿದರು.
    ಪ್ರೇರಣಾ ಯುವ ಸಂಸ್ಥೆ, ಭಾರತ ವಿಕಾಸ ಪರಿಷದ್ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಳೆ ನೀರು ಕೊಯ್ಲು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ನಮ್ಮ ಹಿರಿಯರು ಕೆರೆ ಕಟ್ಟೆಗಳನ್ನು ಕಟ್ಟಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ನಾವು ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಿದೆ. ಅಭಿವೃದ್ಧಿಯ ನಾಗಾಲೋಟದ ನಡುವೆ ಭವಿಷ್ಯದ ಬಗ್ಗೆ ಆಲೋಚಿಸುವ ಅಗತ್ಯವಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ ಎಂದು ತಿಳಿಸಿದರು.
    ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿಲ್ಲ, ಕಡಿಮೆ ಅವಧಿಯಲ್ಲಿ ರಭಸವಾಗಿ ಬೀಳುತ್ತಿದೆ. ನಮಗೆ ಅದು ಕೊರತೆ ಎನಿಸುತ್ತಿದೆ. ಬಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ ಎಂದರು.
    ನಾವು ಬಾವಿಗಳನ್ನು ಮರೆತಿದ್ದೇವೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈ ಬಗ್ಗೆ ಜನ ಜಾಗೃತಿ ಮೂಡಬೇಕು. ಮನೆಗಳ ಚಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
    ಹಿರಿಯ ವೈದ್ಯೆ ಡಾ. ಶಾಂತಾ ಭಟ್, ಭಾರತ ವಿಕಾಸ ಪರಿಷದ್ ದಾವಣಗೆರೆ ಘಟಕದ ಅಧ್ಯಕ್ಷ ಎ.ಎಸ್. ವಿಜಯ ಕುಮಾರ್, ಕಾರ್ಯದರ್ಶಿ ಎಂ.ಆರ್. ಮಧುಕರ್, ರೋಟರಿ ಕ್ಲಬ್ ಅಧ್ಯಕ್ಷೆ ಕುಸುಮಾ ವಿಜಯಾನಂದ್, ಕಾರ್ಯದರ್ಶಿ ಸುನೀತಾ ಮೃತ್ಯುಂಜಯ ಇದ್ದರು.

    (ಬಾಕ್ಸ್)
    ನಗರ ಸ್ತುಮುತ್ತ ಕೆರೆಗಳ ಅಭಿವೃದ್ಧಿ
    ನಗರದ ಸುತ್ತಮುತ್ತ ನಾಲ್ಕೈದು ಕೆರೆಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.
    ಯರಗುಂಟೆ ಬಳಿಯ ಅರಸನಕಟ್ಟೆಯಲ್ಲಿ 1.5 ಎಕರೆ ಜಾಗವಿದೆ. ಅದನ್ನು ಧರ್ಮಸ್ಥಳ ಸಂಸ್ಥೆಯ ಸಹಯೋಗದಿಂದ ಅಥವಾ ಪಾಲಿಕೆ ವತಿಯಿಂದಲೇ ಅಭಿವೃದ್ದಿಪಡಿಸುವ ಚಿಂತನೆಯಿದೆ. ಹರಿಹರದ ಸಮೀಪ ತುಂಗಭದ್ರಾ ನಾಲೆಯ ಪಕ್ಕದಲ್ಲಿರುವ 8 ಎಕರೆ ಜಾಗವಿದ್ದು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
    ಅಮೃತ್ 2.0 ಅಡಿಯಲ್ಲಿ ಆವರಗೆರೆ ಕೆರೆಯ ಅಭಿವೃದ್ಧಿಗೆ ಡಿಪಿಆರ್ ಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ. ರಾಜನಹಳ್ಳಿ ಬಳಿ ರೈತರಿಂದ ಜಾಗ ಖರೀದಿಸಿ ಕೆರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆ ಭಾಗದ ಕೃಷಿಕರೊಂದಿಗೆ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.
    ಬಾತಿ ಬಳಿ 44 ಎಕರೆಯಷ್ಟು ಪಾಲಿಕೆಯ ಜಾಗವಿದೆ. ಅದರಲ್ಲಿ 30 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ಜಲ ಸಂಗ್ರಹಾಗಾರ ಮಾಡುವ ಆಲೋಚನೆಯಿದೆ ಎಂದು ವಿವರಿಸಿದರು.
    ಈ ಸಾಲಿನಲ್ಲಿ ನಗರದ ಉದ್ಯಾನವನಗಳಲ್ಲಿ ಚಿಕ್ಕ ಇಂಗು ಗುಂಡಿಗಳನ್ನು ನಿರ್ಮಿಸುವುದು. ಮಳೆ ನೀರು ಚರಂಡಿಗಳನ್ನು ಸ್ವಚ್ಛಗೊಳಿಸುವ ಯೋಜನೆಯಿದೆ. ಮಳೆ ನೀರು ಕೊಯ್ಲು ಕಡ್ಡಾಯ ಮಾಡುವ ಉದ್ದೇಶವೂ ಇದೆ ಎಂದು ಹೇಳಿದರು.
    ಸ್ವಚ್ಛ ಸರ್ವೇಕ್ಷಣೆ ಯೋಜನೆಯಡಿ ಕಳೆದ ಸಾಲಿನಲ್ಲಿ ದಾವಣಗೆರೆ ಮಹಾನಗರ ಪಾಲಿಕೆಗೆ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಟಾರ್ ರೇಟಿಂಗ್ ಬಂದಿದೆ. ರಾಜ್ಯಮಟ್ಟದಲ್ಲಿ 4ನೇ ಸ್ಥಾನದಲ್ಲಿದ್ದೇವೆ. ಈ ಬಾರಿ 2ನೇ ಸ್ಥಾನ ಪಡೆಯಲು ಪ್ರಯತ್ನ ನಡೆದಿದೆ. ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ಘನ ತ್ಯಾಜ್ಯ ವಿಲೇವಾರಿಯಲ್ಲಿ ದಾವಣಗೆರೆಯನ್ನು ರಾಜ್ಯದಲ್ಲೇ ಅತ್ಯುತ್ತಮ ನಗರವಾಗಿಸುವ ಕನಸಿದೆ ಎಂದು ತಿಳಿಸಿದರು.

    (ಕೋಟ್)
    ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಿದೆ. ನಗರದಲ್ಲಿ 8 ದಿನಗಳಿಗೊಮ್ಮೆ ಪೂರೈಕೆ ಮಾಡುತ್ತಿದ್ದೇವೆ. ಮಳೆ ನೀರು ಕೊಯ್ಲು ಹೆಚ್ಚು ಜನರು ಮಾಡಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನಿರ್ದಿಷ್ಟ ಗುರಿಯೊಂದಿಗೆ ಕೆಲಸ ಮಾಡಬೇಕು.
    ಎಸ್.ಟಿ. ವೀರೇಶ್, ಮಾಜಿ ಮೇಯರ್

    ಮುಖ್ಯಾಂಶಗಳು
    * ದೇಶದಲ್ಲಿ ಸರಾಸರಿ 1270 ಮಿ.ಮೀ. ಮಳೆ
    * ಒಂದು ಇಂಚು ಮಳೆ ಬಂದರೆ 2500 ಲೀಟರ್ ನೀರು ಹಿಡಿದಿಡಬಹುದು
    * ನೀರಿನ ಕೊರತೆ ಎದುರಿಸುವ ದೇಶಗಳಲ್ಲಿ ಜಗತ್ತಿನಲ್ಲಿ ಭಾರತಕ್ಕೆ 5ನೇ ಸ್ಥಾನ
    * 20 ರಿಂದ 25 ಸಾವಿರ ರೂ. ಖರ್ಚು ಮಾಡಿದರೆ ಮಳೆ ನೀರು ಕೊಯ್ಲು ಮಾಡಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts