More

    ಹಾಲಿನ ದರ ಹೆಚ್ಚಳ ಬೇಡ

    ದಾವಣಗೆರೆ : ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸದೆ, ಸಂಗ್ರಹವಾದ ಹೆಚ್ಚುವರಿ 1 ಕೋಟಿ ಲೀಟರ್ ಹಾಲಿಗೆ ಸಬ್ಸಿಡಿ ನೀಡಬೇಕು ಮತ್ತು ರಿಯಾಯಿತಿ ದರದಲ್ಲಿ ಬಡಜನರಿಗೆ ದೊರಕುವಂತೆ ಮಾಡಿ ರಾಜ್ಯದ ಜನರ ಹಾಗೂ ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಆಗ್ರಹಿಸಿದೆ.

    ಕೆಎಂಎಫ್ ನಂದಿನಿ ಹಾಲಿನ ಅರ್ಧ ಲೀಟರ್ ಹಾಗೂ 1 ಲೀಟರ್ ಪ್ಯಾಕೆಟ್ಗೆ 50 ಎಂ.ಎಲ್ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ದರವನ್ನು 2 ರೂ. ಹೆಚ್ಚಿಸಿರುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಪ್ರತಿ ದಿನ 1 ಕೋಟಿ ಲೀಟರ್ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು, ಉತ್ಪಾದಕರಿಂದ ಅದನ್ನು ಖರೀದಿಸಬೇಕಾಗಿದೆ. ಜನರಿಗೆ 50 ಎಂ.ಎಲ್ ಹೆಚ್ಚು ತಲುಪಿಸಿ, ಹೆಚ್ಚುವರಿ 2 ರೂ. ಸಂಗ್ರಹಿಸಲಾಗುತ್ತಿದೆ ಎಂಬುದು ಸರ್ಕಾರದ ವಾದವಾಗಿದೆ.
    ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವುದು ಸಂತೋಷದ ವಿಷಯ. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆಯೂ ದೊರಕಬೇಕು. ಆದರೆ ಕೆಎಂಎಫ್‌ನ ಈ ಪ್ರಸ್ತಾಪವು ಜನರಿಗೆ ‘ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪ’ದಂತಾಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ದರ ಕೈಗೆ ನಿಲುಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಖರ್ಚು ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts