More

    ನಾಗಮ್ಮ ಕೇಶವಮೂರ್ತಿ ಬಗ್ಗೆ ಸಂಶೋಧನಾ ಗ್ರಂಥ ಹೊರಬರಲಿ

    ದಾವಣಗೆರೆ :  ಸಮಾಜಸೇವೆಯ ಪ್ರೇರಕ ಶಕ್ತಿಯಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರ ಕುರಿತು ಸಂಶೋಧನಾ ಗ್ರಂಥ ಹೊರತರಬೇಕು ಎಂದು ಸಾಧನಾಶ್ರಮದ ಮಾತಾ ಯೋಗಾನಂದಮಯಿ ಹೇಳಿದರು.  ವನಿತಾ ಸಮಾಜ ಹಾಗೂ ಈಶ್ವರಮ್ಮ ಟ್ರಸ್ಟ್ ಸಹಯೋಗದಲ್ಲಿ ನಗರದ ವನಿತಾ ಸಮಾಜದ ಶ್ರೀ ಸತ್ಯಸಾಯಿ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಾಗಮ್ಮ ಆಂಟಿ ಒಂದು ನೆನಪು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.  ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಾಗಮ್ಮ ಕೇಶವಮೂರ್ತಿ ಅವರು, ಮಾನವಾಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು, ಇದು ಸಂಶೋಧನಾ ಗ್ರಂಥದ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣಾದಾಯಕ ಆಗಬೇಕು ಎಂದು ಆಶಿಸಿದರು.  ವನಿತಾ ಸಮಾಜದ ಮೂಲಕ ಸಾವಿರಾರು ಮಹಿಳೆಯರ ಪಡೆಯನ್ನು ಕಟ್ಟಿಕೊಂಡ ನಾಗಮ್ಮನವರು ಎಲ್ಲರನ್ನು ಒಂದೊಂದು ಸೇವಾ ಕೆಲಸದಲ್ಲಿ ತೊಡಗಿಸಿದ್ದು ಸಾಮಾನ್ಯವಲ್ಲ. ಎಲ್ಲರಿಗೂ ಸಮಾಜ ಸೇವೆಯ ಸ್ಫೂರ್ತಿಯ ಸೆಲೆಯಾಗಿದ್ದ ಅವರು ಚಿರಂತನವಾಗಿದ್ದಾರೆ ಎಂದರು.  ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸದಾ ಸಮಾಜ ಸೇವೆಯ ತುಡಿತ ಹೊಂದಿದ್ದ ನಾಗಮ್ಮನವರು ಮಹಿಳಾ ಸೈನ್ಯವನ್ನೇ ಕಟ್ಟಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಕೈಗೊಂಡರು. ಯಾರನ್ನು ಯಾವ ಕೆಲಸದಲ್ಲಿ ತೊಡಗಿಸಬೇಕು ಎಂಬ ಗುಣಗ್ರಾಹಿ ಶಕ್ತಿ ಅವರಲ್ಲಿತ್ತು. ವನಿತಾ ಸಮಾಜ ಎಂಬ ಜೇನುಗೂಡಿನಲ್ಲಿ ರಾಣಿಜೇನಿನಂತೆ ಅವರು ಕೆಲಸ ಮಾಡಿದರು ಎಂದು ಬಣ್ಣಿಸಿದರು.  ಇತ್ತೀಚಿನ ದಿನಗಳಲ್ಲಿ ಶಾಸಕರಾದರೆ ಹಣ ಮಾಡುವವರೇ ಹೆಚ್ಚು. ಆದರೆ, ನಾಗಮ್ಮ ಕೇಶವಮೂರ್ತಿ ಅವರು ಒಬ್ಬ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ರಾಜಕಾರಣದಲ್ಲಿ ಒಂದು ಬದ್ಧತೆ ಹೊಂದಿದ್ದರು. ತಮ್ಮ ಜೀವನದ ಕೊನೆಯ ಕ್ಷಣಗಳಲ್ಲೂ ವನಿತಾ ಸಮಾಜದ ಬೆಳವಣಿಗೆಗೆ ಪತ್ರ ಬರೆದಿಟ್ಟಿದ್ದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.  ಶೈಕ್ಷಣಿಕ ಸಲಹೆಗಾರ ಜಗನ್ನಾಥ್ ನಾಡಿಗೇರ್ ಮಾತನಾಡಿ, ಅನ್ನ, ಆಶ್ರಯ ಸೇರಿ ಸಮಾಜದಲ್ಲಿ ಯಾರಿಗೆ ಯಾವ ಅಭಾವ ಇದೆಯೋ ಅದನ್ನು ನೀಗಿಸಿದ ನಾಗಮ್ಮ ಅವರು ತಮ್ಮ ಮಾನವತೆಯ ಸ್ವಭಾವದ ಮೂಲಕ ಎಲ್ಲರ ಮೇಲೂ ಪ್ರಭಾವ ಬೀರಿದರು. ಅವರ ನೆನಪು ಜೀವನಕ್ಕೊಂದು ಹುರುಪಾಗಬೇಕು ಎಂದು ತಿಳಿಸಿದರು.  ನಾಗಮ್ಮ ಕೇಶವಮೂರ್ತಿ ಅವರಿಗಿದ್ದ ವಿಜನ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯಾರಿಗೂ ಇರಲಿಲ್ಲ. ಅವರು ಮಾಡಿರುವ ಕೆಲಸಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ನಮ್ಮ ಜವಾಬ್ಧಾರಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅವರ ಕುರಿತಂತೆ ಪಿಎಚ್‌ಡಿ ಮಾಡಿದರೆ ಅದೊಂದು ಆಕರ ಗ್ರಂಥವಾಗಲಿದೆ ಎಂದರು.  ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷೆ ಉಷಾ ರಂಗನಾಥ್ ಸ್ವಾಗತಿಸಿದರು, ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಅನುರಾಧಾ ಬಕ್ಕಪ್ಪ ನಿರೂಪಿಸಿದರು. ಸಂಗೀತ ರಾಘವೇಂದ್ರ, ವಿದ್ಯಾ ಹೆಗಡೆ ಮತ್ತು ಸಂಗಡಿಗರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts