More

    ದಾವಣಗೆರೆ ಜಿಲ್ಲೆಯಲ್ಲಿ ನಿಲ್ಲದ ಡೆಂಘೆ ಓಟ

    ರಮೇಶ ಜಹಗೀರದಾರ್ ದಾವಣಗೆರೆ  
    ಹೊನ್ನಾಳಿ ತಾಲೂಕಿನ ಪಿಯುಸಿ ವಿದ್ಯಾರ್ಥಿನಿ ಡೆಂಘೆ ಜ್ವರಕ್ಕೆ ಬಲಿಯಾದ ಪ್ರಕರಣವು ರೋಗದ ಗಂಭೀರತೆಗೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.  ಮಳೆಗಾಲ ಆರಂಭವಾಗಿದ್ದು ರಾಜ್ಯಾದ್ಯಂತ ಡೆಂಘೆ ನರ್ತನ ಶುರುವಾಗಿದೆ. ಜಿಲ್ಲೆಯಲ್ಲೂ ಅದರ ಓಟ ನಿಂತಿಲ್ಲ. ಜನವರಿಯಿಂದ ಇಲ್ಲಿಯ ವರೆಗೆ 1904 ಶಂಕಿತ ಪ್ರಕರಣಗಳು ವರದಿಯಾಗಿದ್ದು 1348 ಕೇಸ್ ಪರೀಕ್ಷಿಸಲಾಗಿದೆ. ಒಟ್ಟು 142 ಪ್ರಕರಣಗಳು ದೃಢಪಟ್ಟಿವೆ.  ಕಳೆದ ವರ್ಷ ಈ ಹೊತ್ತಿಗೆ ಕೇವಲ 48 ಪ್ರಕರಣಗಳು ದೃಢಪಟ್ಟಿದ್ದವು. ಈ ಬಾರಿ 3 ಪಟ್ಟು ಹೆಚ್ಚಳವಾಗಿದೆ. ಬಿಟ್ಟು, ಬಿಟ್ಟು ಬರುವ ಮಳೆ, ಮತ್ತೆ ಬಿಸಿಲು ಬೀಳುವುದು. ಈ ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದೆ ಎನ್ನಲಾಗುತ್ತಿದೆ. ಜತೆಗೆ ಮನೆಗಳಲ್ಲಿ ನೀರನ್ನು ಡ್ರಮ್ ಇನ್ನಿತರ ಪರಿಕರಗಳಲ್ಲಿ ತುಂಬಿಡುವುದೂ ಜಾಸ್ತಿಯಾಗಿದೆ. ಅವುಗಳ ಮೇಲೆ ಮುಚ್ಚದೇ ಇರುವುದು ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.  ಈ ವರ್ಷ ಕಳೆದ ಮೂರು ತಿಂಗಳ ಅಂಕಿ ಅಂಶವನ್ನು ಗಮನಿಸಿದರೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ 20 ಡೆಂೆ ಪಾಸಿಟಿವ್ ಪ್ರಕರಣಗಳಿದ್ದವು. ಮೇನಲ್ಲಿ 27ಕ್ಕೆ ಜಿಗಿಯಿತು. ಈ ತಿಂಗಳಲ್ಲಿ 28 ಕೇಸ್‌ಗಳು ದೃಢಪಟ್ಟಿವೆ.  ಜೂನ್‌ನಲ್ಲಿ ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 14 ಪಾಸಿಟಿವ್ ಬಂದಿದೆ. ಹರಿಹರ 3, ಚನ್ನಗಿರಿ 2, ಹೊನ್ನಾಳಿ 7, ಜಗಳೂರು ತಾಲೂಕಿನಲ್ಲಿ 2 ಪ್ರಕರಣಗಳು ಕಂಡುಬಂದಿವೆ.  ಡೆಂೆ ಜ್ವರವು ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಅವುಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಹಾಗೂ ಮುಂದೆ ಅಂಥ ತಾಣಗಳು ಇಲ್ಲದಂತೆ ನೋಡಿಕೊಳ್ಳುವುದೇ ಇಂದಿನ ಅಗತ್ಯವಾಗಿದೆ.  ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜತೆಗೆ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ನಾಶಪಡಿಸುತ್ತಿದ್ದಾರೆ. ಈ ಕೆಲಸವನ್ನು ಸಾರ್ವಜನಿಕರು ಮುಂದುವರಿಸಿಕೊಂಡು ಹೋಗಬೇಕಿದೆ.  …  (ಬಾಕ್ಸ್)  ಶುಕ್ರವಾರ ಮರೆಯದಿರಿ  ಜುಲೈ ತಿಂಗಳಲ್ಲಿ ಡೆಂೆ ವಿರೋಧಿ ಮಾಸಾಚರಣೆ ನಡೆಯಲಿದ್ದು, ‘ಸಮುದಾಯದೊಂದಿಗೆ ಸೇರಿ ಡೆಂೆ ಜ್ವರವನ್ನು ನಿಯಂತ್ರಿಸೋಣ’ ಎಂಬುದು ಪ್ರಸ್ತುತ ಸಾಲಿನ ಧ್ಯೇಯ ವಾಕ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಾಗೂ ಸಿಬ್ಬಂದಿಯು ಕಚೇರಿ, ಶಾಲಾ ಕಾಲೇಜುಗಳಲ್ಲಿ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.  ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವುದನ್ನು ಸಾರ್ವಜನಿಕರು ಅಭ್ಯಾಸ ಮಾಡಿಕೊಳ್ಳಬೇಕು. ಈ ಚಟುವಟಿಕೆಯನ್ನು ಅಭಿಯಾನದಂತೆ ಅನುಷ್ಠಾನಗೊಳಿಸಬೇಕು ಎಂಬುದು ಇಲಾಖೆಯ ಆಶಯವಾಗಿದೆ. ಜಿಲ್ಲೆಯಲ್ಲೂ ಈ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts