More

    ದೃಶ್ಯಕಲಾ ಮಹಾವಿದ್ಯಾಲಯಕ್ಕೆ ವಜ್ರ ಮಹೋತ್ಸವ ಸಂಭ್ರಮ

    ದಾವಣಗೆರೆ : ನಗರದಲ್ಲಿರುವ ರಾಜ್ಯದ ಮೊಟ್ಟ ಮೊದಲ ಸರ್ಕಾರಿ ಚಿತ್ರಕಲಾ ಶಾಲೆಗೆ (ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ) 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವದ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರಗಳು, ಉದ್ದೇಶ ಮತ್ತು ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.
    ವಜ್ರ ಮಹೋತ್ಸವದ ಉದ್ಘಾಟನೆ ಜುಲೈನಲ್ಲಿ ನಡೆಯಲಿದೆ. ಅದೇ ತಿಂಗಳಲ್ಲಿ ಹಳೇ ವಿದ್ಯಾರ್ಥಿಗಳ ಸಭೆ ಮತ್ತು ನಿವೃತ್ತ ಅಧ್ಯಾಪಕರ ಸಭೆಗಳನ್ನು ಆಯೋಜಿಸಲಾಗುವುದು. ಆಗಸ್ಟ್‌ನಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಸೆಪ್ಟೆಂಬರ್‌ನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ, ಕಲಾ ಪ್ರದರ್ಶನ ಮತ್ತು ವಿಚಾರ ಸಂಕಿರಣ. ಅಕ್ಟೋಬರ್‌ನಲ್ಲಿ ಟೆರಾಕೋಟಾ ಕಾರ್ಯಾಗಾರ. ನವೆಂಬರ್‌ನಲ್ಲಿ ಲಲಿತಕಲಾ ಅಕಾಡೆಮಿ ಕಲಾ ಶಿಬಿರ, ಡಿಸೆಂಬರ್‌ನಲ್ಲಿ ಡಿಜಿಟಲ್ ಕಲಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.
    ಮುಂದಿನ ವರ್ಷ ಜನವರಿಯಲ್ಲಿ ವಿಷುಯಲ್ ಆರ್ಟ್ಸ್‌ನ ವಿಚಾರ ಸಂಕಿರಣ, ಫೆಬ್ರವರಿಯಲ್ಲಿ ಶಿಲ್ಪಕಲಾ ಅಕಾಡೆಮಿಯಿಂದ ಕಲಾ ಶಿಬಿರ, ಮಾರ್ಚ್‌ನಲ್ಲಿ ಹೊಸ ಮಾಧ್ಯಮ ಕಾರ್ಯಾಗಾರ, ಏಪ್ರಿಲ್‌ನಲ್ಲಿ ರಾಜ್ಯಮಟ್ಟದ ಕಲಾ ಶಿಕ್ಷಕರು, ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರ, ಮೇ ತಿಂಗಳಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ಕಲಾವಿದರಿಗೆ ಸನ್ಮಾನ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ವಿಶ್ವವಿದ್ಯಾಲಯದ ಕುಲಸಚಿವ ಮಹಾಬಲೇಶ್ವರ, ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ, ಪ್ರಾಧ್ಯಾಪಕ ಡಾ. ಸತೀಶ ಕುಮಾರ ವಲ್ಲೇಪುರೆ ಇದ್ದರು.

    (ಬಾಕ್ಸ್)
    ಟೆಕ್ನಾಲಜಿ ಪಾರ್ಕ್‌ಗೆ ಚಿಂತನೆ
    ಕಾಲೇಜು ಆವರಣದಲ್ಲಿ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಚಿಂತನೆಯಿದ್ದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕುಲಪತಿ ಬಿ.ಡಿ. ಕುಂಬಾರ ಹೇಳಿದರು.
    ಈ ಪಾರ್ಕ್ ಸ್ಥಾಪನೆಯಿಂದ ಶಾಲಾ ಮಕ್ಕಳಿಗೆ ಉಪಯೋಗವಾಗಲಿದೆ. ಆಧುನಿಕ ತಂತ್ರಜ್ಞಾನ, ಉಪಕರಣಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಲಿದೆ ಎಂದು ತಿಳಿಸಿದರು.
    ಕಾಲೇಜಿನ ಪ್ರವೇಶ ದ್ವಾರ ಮತ್ತು ರಸ್ತೆಯ ಅಭಿವೃದ್ಧಿಯಾಗಬೇಕಿದೆ. ಕಾಲೇಜು ಕ್ಯಾಂಪಸ್‌ಗೆ ಹೊಸ ರೂಪ ಕೊಡುವ ಉದ್ದೇಶವಿದೆ, ಇನ್ನಷ್ಟು ಮೂಲಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.
    ಕಲಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಸುವ ಕುರಿತು ವಿವಿಯ ಬೋರ್ಡ್ ಆಫ್ ಸ್ಟಡೀಸ್‌ನಲ್ಲಿ ಚರ್ಚಿಸಲಾಗಿದ್ದು 2024-25ನೇ ಸಾಲಿನಿಂದಲೇ ಅದನ್ನು ಅಳವಡಿಸುವ ಉದ್ದೇಶವಿದೆ ಎಂದು ಹೇಳಿದರು.

    ಮುಖ್ಯಾಂಶಗಳು
    * 1964 ರಲ್ಲಿ ‘ಸರ್ಕಾರಿ ಚಿತ್ರಕಲೆ ಮತ್ತು ಕರಕುಶಲ ಶಾಲೆ’ ಹೆಸರಿನಲ್ಲಿ ಆರಂಭ
    * 60 ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ
    * ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಪ್ರಚಾರ
    * ಹಳೆಯ ವಿದ್ಯಾರ್ಥಿಗಳಿಂದ ಕಲಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ
    * ಕಲಾ ಗ್ಯಾಲರಿ, ಮೂಲಸೌಕರ್ಯ

    ಯೋಜನೆಗಳು
    * ಕಾರ್ಯಾಗಾರ, ಮಾಸ್ಟರ್ ಕ್ಲಾಸ್‌ಗಳು
    * ವಿಚಾರ ಸಂಕಿರಣ, ಸಮಿತಿ ಚರ್ಚೆಗಳು
    * ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ
    * ಸ್ಮರಣಾರ್ಥ ಪುಸ್ತಕದ ಪ್ರಕಟಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts