More

    ಎನ್​ಒಸಿ ಪಡೆಯದೇ 14 ಮರಗಳಿಗೆ ಕತ್ತರಿ: ಅರಣ್ಯ ಇಲಾಖೆಯಿಂದಲೇ ನಿಯಮ ಉಲ್ಲಂಘನೆ

    ಬ್ಯಾಡಗಿ: ಹಳೇ ತಹಸೀಲ್ದಾರ್ ಕಟ್ಟಡದ ಆವರಣದಲ್ಲಿ ಬೆಳೆದು ನಿಂತಿದ್ದ 14 ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪುರಸಭೆ ಹಾಗೂ ಜೀವವೈವಿಧ್ಯ ಸಮಿತಿಯಿಂದ ನಿರಾಪೇಕ್ಷಣಾ ಪತ್ರ (ಎನ್​ಒಸಿ) ಪಡೆಯದೆ ಮರಗಳನ್ನು ಕತ್ತರಿಸಿ ನಿಯಮ ಉಲ್ಲಂಘಿಸಿದ್ದಾರೆ. ಮೇಲಧಿಕಾರಿಗಳು ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಬ್ಯಾಡಗಿ ಜೀವ ವೈವಿಧ್ಯ ಸಮಿತಿ ಸದಸ್ಯ ಹಾಗೂ ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಸಿ.ಎಚ್. ಆಗ್ರಹಿಸಿದ್ದಾರೆ.

    ಶನಿವಾರ ಸ್ಥಳಕ್ಕೆ ಸಮಿತಿ ಸದಸ್ಯರ ಜತೆ ಭೇಟಿ ನೀಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳೇ ನಿಯಮಗಳನ್ನು ಉಲ್ಲಂಘಿಸಿರುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದ್ದಾರೆ.

    ಘಟನೆ ನಡೆದಿದ್ದು ಏನು..?

    ಬ್ಯಾಡಗಿ ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ ನೂತನ ಕಟ್ಟಡ ನಿರ್ವಿುಸಲಾಗುತ್ತಿದೆ. ಕಟ್ಟಡದ ಬಳಿ ತೆಂಗು, ಅತ್ತಿ, ನೀಲಗಿರಿ, ನೇರಳೆ, ಸಿರಸಲ, ಬೇವು, ಬಂಗಾಳಿ ಸೇರಿದಂತೆ 14 ಜಾತಿಯ ಮರಗಳಿದ್ದವು. ಈ ಮರಗಳನ್ನು ಕಡಿಯುವ ಮುನ್ನ ಪುರಸಭೆ ಹಾಗೂ ಜೀವ ವೈವಿಧ್ಯ ಸಮಿತಿ ನಿರಾಪೇಕ್ಷಣ ಪತ್ರ (ಎನ್​ಒಸಿ) ಪಡೆದು ಕತ್ತರಿಸಬೇಕಿತ್ತು. ಆದರೆ, 14 ಮರಗಳನ್ನು ಕತ್ತರಿಸುವ ವೇಳೆ ನಿಯಮ ಪಾಲಿಸಿಲ್ಲ, ಹೀಗಾಗಿ ಹರಾಜು ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

    ಸಮಿತಿ ಅಧಿಕಾರ ಮೊಟಕಿಗೆ ಯತ್ನ:

    6 ವರ್ಷದ ಹಿಂದೆ ಬ್ಯಾಡಗಿಯಲ್ಲಿ ನೂರಾರು ವರ್ಷದ ಹುಣಸೆ ಮರಗಳನ್ನು ರಕ್ಷಿಸುವ ಹೋರಾಟ ನಡೆದಿತ್ತು. ಆಗ ಸರ್ಕಾರದ ನಿರ್ದೇಶನದಂತೆ ಬ್ಯಾಡಗಿಯಲ್ಲಿ ಜೀವ ವೈವಿಧ್ಯ ಸಮಿತಿ ರಚಿಸಿದ್ದು, ಪುರಸಭೆ ಮುಖ್ಯಾಧಿಕಾರಿ ಸಮಿತಿ ಅಧ್ಯಕ್ಷರಾಗಿದ್ದಾರೆ. ನಾಲ್ವರು ಸ್ಥಳೀಯ ಸಮಿತಿ ಸದಸ್ಯರಿದ್ದಾರೆ. ಸ್ಥಳೀಯವಾಗಿ ಮರ ಕಡಿಯುವ ಮುನ್ನ ಅರಣ್ಯಾಧಿಕಾರಿ ಪುರಸಭೆಗೆ ಪತ್ರ ಬರೆದು, ನಿರಾಪೇಕ್ಷಣಾ ಪತ್ರ (ಎನ್​ಒಸಿ) ಪಡೆಯಬೇಕಿತ್ತು. ಹಿಂದಿನ ಎಲ್ಲ ಅರಣ್ಯಾಧಿಕಾರಿಗಳು ನಿಯಮ ಪಾಲಿಸಿದ್ದು, ಸ್ಥಳೀಯ ಅರಣ್ಯಾಧಿಕಾರಿಗಳು ಸಮಿತಿ ಅಧಿಕಾರಕ್ಕೆ ಕಿಂಚಿತ್ತೂ ಗೌರವ ನೀಡದೆ, ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಅರಣ್ಯ ಇಲಾಖೆ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.

    See also  ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ

    ಅರಣ್ಯ ಇಲಾಖೆಗೆ ಪತ್ರ:

    ಘಟನೆ ಆಧರಿಸಿ ಜೀವವೈವಿಧ್ಯ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಸ್ಥಳೀಯ ಅರಣ್ಯಾಧಿಕಾರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಪುರಸಭೆಯ ಜೀವ ವೈವಿಧ್ಯ ಸಮಿತಿ ಅಧ್ಯಕ್ಷ, ಸದಸ್ಯರ ನಿರಾಪೇಕ್ಷಣ ಪ್ರಮಾಣ ಪತ್ರ ಏಕೆ ಪಡೆಯಲಿಲ್ಲ? ಇದು 2002 ಅರಣ್ಯ ಕಾಯ್ದೆಯ ನಿಯಮ ಉಲ್ಲಂಘನೆಯಾಗಿದೆ. 14 ಮರಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೂಡಲೇ ಸಮಿತಿಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.

    ಜೀವವೈವಿಧ್ಯ ಕಾಯಿದೆಯಂತೆ ಸ್ಥಳೀಯ ಸಮಿತಿಗೆ ಬ್ಯಾಡಗಿ-ಮೋಟೆಬೆನ್ನೂರು ರಸ್ತೆಯ ಹುಣಸೆ ಮರಗಳು ಹಾಗೂ ಸ್ಥಳೀಯವಾಗಿ ನೆಟ್ಟ ಮರಗಳಿಗೆ ಸಂಬಂಧಿಸಿದಂತೆ ಮಾತ್ರ ನಿರಾಪೇಕ್ಷಣಾ ಪತ್ರ ಪಡೆಯಬೇಕು. ಬೇರೆ ಮರ ಕಡಿಯಲು ಅವರ ಅನುಮತಿ ಅಗತ್ಯವಿಲ್ಲ. ಡಿಎಫ್​ಒ ಅನುಮತಿ ಪಡೆದು ಹರಾಜು ನಡೆಸಲಾಗಿದೆ. ಇಲ್ಲಿ ಯಾವುದೆ ಕಾಯಿದೆ ಉಲ್ಲಂಘನೆ ಆಗಿಲ್ಲ.

    | ಬಿ.ಅಣ್ಣಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts