More

    ವಿದ್ಯಾರ್ಥಿಗಳು ಪ್ರಶ್ನಿಸುವ ಕೌಶಲ ಬೆಳೆಸಿಕೊಳ್ಳಲಿ

    ಪಾಂಡವಪುರ: ವಿದ್ಯಾರ್ಥಿಗಳು ವ್ಯಾಸಂಗದ ದಿನಗಳಲ್ಲಿ ತಾಳ್ಮೆ, ಶಿಸ್ತು, ಸಂಯಮ ರೂಢಿಸಿಕೊಂಡು ಶಿಕ್ಷಣವನ್ನು ಉನ್ನತೀಕರಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಿತರಾಗಿ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

    ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುವುದರ ಜತೆಗೆ ಮಾತನಾಡುವ, ಪ್ರಶ್ನಿಸುವ ಕೌಶಲ ಬೆಳೆಸಿಕೊಳ್ಳಬೇಕು. ಘಟಿಕೋತ್ಸವ ಎನ್ನುವುದು ಒಂದು ಪ್ರಮುಖ ಘಟ್ಟವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಗುಣಮಟ್ಟದ ಶಿಕ್ಷಣ ಪಡೆಯಬೇಕಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಎಸ್‌ಟಿಜಿ ಕಾಲೇಜಿನಲ್ಲಿ ಎಲ್ಲ ರೀತಿ ಸವಲತ್ತು ಇದೆ. ಈ ಮೂಲಕ ಮಕ್ಕಳ ಪ್ರಗತಿಗೆ ಸಂಸ್ಥೆ ಸಹಕಾರಿಯಾಗಿದೆ ಎಂದರು.

    ಎಸ್‌ಟಿಜಿ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಗರ ಪ್ರದೇಶದ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬ ಆಶಯದೊಂದಿಗೆ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ(ಮೆಡಿಕಲ್) ಶಿಕ್ಷಣ ಆರಂಭಿಸಿ ಗ್ರಾಮೀಣ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದು ಹೇಳಿದರು.

    ಮಕ್ಕಳ ಶೈಕ್ಷಣಿಕ ಪ್ರಗತಿಗೆ ತಂದೆ-ತಾಯಿಗಳು ಸಾಕಷ್ಟು ಪರಿಶ್ರಮ ಪಡುತ್ತಾರೆ. ಅದನ್ನು ಅರಿತು ವಿದ್ಯಾರ್ಥಿಗಳು ಚನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು. ಪದವಿ ಬಳಿಕ ವಿದೇಶಕ್ಕೆ ಹೋದ ಸಂದರ್ಭದಲ್ಲಿ ಪಾಲಕರನ್ನು ಸಹ ತಮ್ಮೊಡನೆ ಕರೆದುಕೊಂಡು ಹೋಗಿ ಹೊರ ಜಗತ್ತಿನನ್ನು ಪರಿಚಯಿಸುವ ಕೆಲಸ ಮಾಡಬೇಕು. ಪದವಿ ಮುಗಿಯುವರೆಗೂ ಮಾತ್ರವಲ್ಲ ಮುಂದೆಯೂ ವಿದ್ಯಾರ್ಥಿಗಳ ನೆರವಿಗೆ ನಮ್ಮ ಶಿಕ್ಷಣ ಸಂಸ್ಥೆ ಇರಲಿದೆ ಎಂದು ಭರವಸೆ ನೀಡಿದರು.

    ಸಿಇಒ ಸಿ.ಪಿ.ಶಿವರಾಜು ಮಾತನಾಡಿ, ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಚೆನ್ನಾಗಿ ಓದಿ ಪದವಿ ಪಡೆದಾಗ ಪಾಲಕರಿಗೆ ಆಗುವ ಸಂತೋಷ ಮತ್ತಾರಿಗೂ ಆಗೋದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಸಾಕಷ್ಟು ಕನಸು ಕಂಡಿರುತ್ತಾರೆ. ಅವರ ಕನಸು ನನಸು ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.

    ಸಂಸ್ಥೆಯ 92 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪದವಿ ಪ್ರಮಾಣಪತ್ರ ವಿತರಣೆ ಮಾಡಿದರು. ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು, ಎಂ.ಎನ್.ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts