More

    ಕೌಟುಂಬಿಕ ಕಲಹಕ್ಕೆ ಕಾನ್‌ಸ್ಟೆಬಲ್ ಆತ್ಮಹತ್ಯೆ

    ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಮಡಿವಾಳ ಠಾಣೆ ಕಾನ್‌ಸ್ಟೆಬಲ್, ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಮಡಿವಾಳ ಕಾನ್‌ಸ್ಟೆಬಲ್ ಶಿವರಾಜು ಮೃತರು. ಮೈಸೂರು ರಸ್ತೆ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದ ಬಾವಿಯಲ್ಲಿ ಸೋಮವಾರ ಶಿವರಾಜು ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರಚೋಧನೆ ಆರೋಪದ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಯಚೂರು ಮೂಲದ ಶಿವರಾಜು, 2016ರಲ್ಲಿ ಕಲುಬುಗರಿ ಡಿಎಆರ್ ಕಾನ್‌ಸ್ಟೆಬಲ್ ಆಗಿ ಸೇವೆಗೆ ಸೇರಿದ್ದರು. 2020ರಲ್ಲಿ ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾದ ಶಿವರಾಜು, ಮಡಿವಾಳ ಠಾಣೆಯಲ್ಲಿ ನ್ಯಾಯಾಲಯದಿಂದ ಬರುವ ಸಮನ್ಸ್ ಜಾರಿ ಮಾಡುವ ಕರ್ತವ್ಯ ನಿರ್ವಹಿಸುತ್ತಿದ್ದರು.
    ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಶಿವರಾಜು, ಸುಬ್ರಮಣ್ಯಪುರದಲ್ಲಿ ಮನೆಯಲ್ಲಿ ನೆಲೆಸಿದ್ದರು. ಇವರ ಅಣ್ಣ ಮಗ ಗೌರೀಶ್ ದಾವಣಗೆರೆ ಮೂಲದ ವಾಣಿ ಎಂಬಾಕೆ ಜತೆ ಮದುವೆ ಆಗಿದ್ದ. ಕೌಟುಂಬಿಕ ಕಲಹದಿಂದ ವಾಣಿ ಮತ್ತು ಗೌರೀಶ್ ದೂರವಾಗಿದ್ದರು.

    ದಾವಣಗೆರೆ ಮಹಿಳಾ ಠಾಣೆಯಲ್ಲಿ ವಾಣಿ, ತನ್ನ ಪತಿ ಗೌರೀಶ್, ಅತ್ತೆ, ಮಾವ ಮತ್ತು ಶಿವರಾಜು ವಿರುದ್ಧವೂ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಳು. ಪದೇ ಪದೆ ಶಿವರಾಜುಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದರು. ಜಾಲತಾಣದಲ್ಲೂ ವಿರುದ್ಧ ಪೋಸ್ಟ್ ಮಾಡಿದ್ದರು.
    ಈ ವಿಚಾರಕ್ಕೆ ಸಾಕಷ್ಟು ನೊಂದಿದ್ದ ಶಿವರಾಜು, ಜೂನ್ 25ರಂದು ಕೆಲಸಕ್ಕೆ ಹೋಗುವುದಾಗಿ ಬೈಕ್ ಏರಿ ಮನೆಯಿಂದ ಹೊರಬಂದಿದ್ದರು. ಆದರೆ, ಕರ್ತವ್ಯಕ್ಕೆ ಹೋಗದೆ ರಾತ್ರಿ ಮನೆಗೂ ಹೋಗಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದ ಪತ್ನಿ, ಸಹೋದರರು ಸುಬ್ರಹ್ಮಣ್ಯಪುರ ಠಾಣೆ ದೂರು ಸಲ್ಲಿಸಿದ್ದರು.
    ನಾಪತ್ತೆ ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ ಮಡಿವಾಳ ಠಾಣೆ ಪಿಎಸ್‌ಐ ಕೆ.ವಿನು ನೇತೃತ್ವದಲ್ಲಿ ಶಿವರಾಜು ಪತ್ತೆಗೆ ತಂಡ ರಚನೆ ಮಾಡಲಾಗಿತ್ತು.

    ಮೊಬೈಲ್ ಟವರ್ ಲೋಕೇಷನ್ ಪತ್ತೆ ಮಾಡಿದಾಗ ಕೊನೆಯದಾಗಿ ಮೈಸೂರು ರಸ್ತೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಎಂಡ್ ಆಗಿರುತ್ತದೆ. ಬೈಕ್ ಸಹ ಅಲ್ಲಿಯೇ ಪತ್ತೆಯಾಗಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ರೈಲಿನಲ್ಲಿ ಶಿವರಾಜು ಪ್ರಯಾಣ ಮಾಡಿರುವುದಿಲ್ಲ. ಅನುಮಾನ ಬಂದು ಪೊಲೀಸರು ಜ್ಞಾನಭಾರತಿ ಆವರಣದಲ್ಲಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾಗ ಬಾವಿಯ ಬಳಿ ಚಪ್ಪಲಿ ಪತ್ತೆಯಾಗಿದ್ದು, ಬಾವಿ ಒಳಗೆ ನೋಡಿದಾಗ ಶವ ಕಂಡು ಬಂದಿದೆ. ಈ ಬಗ್ಗೆ ಆತ್ಮಹತ್ಯೆಗೆ ಪ್ರಚೋಧನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts