More

    ಸಿಎಂ, ಡಿಸಿಎಂ ಹುದ್ದೆಗಳ ಬಗ್ಗೆ ಲಿಂಗಾಯಿತ ಸಮುದಾಯದಲ್ಲೂ ಚರ್ಚೆ

    ಬೆಂಗಳೂರು:
    ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತ್ರ ಸೀಮಿತವಾಗಿ ನಡೆಯುತ್ತಿದ್ದ ಚರ್ಚೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಶುರುವಾದ ಬೆನ್ನಲ್ಲಿಯೇ ವೀರಶೈವ ಲಿಂಗಾಯಿತ ಸಮುದಾಯದಲ್ಲಿಯೂ ಹೊಸ ನಿರೀಕ್ಷೆಗಳು ಗರಿಗೆದರಿವೆ.
    ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಉಪ ಮುಖ್ಯಮಂತ್ರಿ ಆಗಬೇಕು ಎನ್ನುವ ನಿಟ್ಟಿನಲ್ಲಿ ತೆರೆ ಮರೆಯಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಪ್ರಯತ್ನ ನಡೆಸಿದ್ದನ್ನು ಬಿಟ್ಟರೆ ಇನ್ನೊಬ್ಬರ ಹೆಸರು ಕೂಡ ಕೇಳಿ ಬಂದಿರಲಿಲ್ಲ.
    ಈಗಾಗಲೇ ಇರುವ ಒಂದು ಡಿಸಿಎಂ ಹುದ್ದೆ ಜೊತೆಗೆ ಇನ್ನೂ ಮೂರು ಹುದ್ದೆ ಸೃಷ್ಟಿ ಮಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಕೊಡಬಹುದು ಎನ್ನುವ ನಿಟ್ಟಿನಲ್ಲಿಯೇ ಸಮುದಾಯದಲ್ಲಿ ಚರ್ಚೆಗಳು ನಡೆಯುತ್ತಿದ್ದವು.
    ಕೆಂಪೇಗೌಡರ ದಿನಾಚರಣೆ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ನೀಡಿದ ಹೇಳಿಕೆಯಿಂದ ವೀರಶೈವ ಲಿಂಗಾಯಿತ ಸಮುದಾಯದಲ್ಲಿಯೂ ಅವಕಾಸ ಸಿಕ್ಕರೆ ಮುಖ್ಯಮಂತ್ರಿಗಳ ಹುದ್ದೆ ಅಲಂಕರಿಸಲು ಸಮುದಾಯದ ನಾಯಕರು ಮುಂದಾಗಬೇಕು ಎನ್ನುವ ನಿರೀಕ್ಷೆಗಳು ಚಿಗುರೊಡೆದಿವೆ.
    ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾದ ಬಳಿಕ ಈ ತನಕ ಕಾಂಗ್ರೆಸ್‌ನಿಂದ ಮತ್ತೊಬ್ಬರು ಲಿಂಗಾಯಿತ ನಾಯಕರು ಮುಖ್ಯಮಂತ್ರಿಗಳ ಹುದ್ದೆ ಅಲಂಕರಿಸಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಆದರೆ ಈ ರೀತಿಯ ಅವಕಾಶ ಕಾಂಗ್ರೆಸ್‌ನಿಂದ ಲಭ್ಯವಾಗಿಲ್ಲ. ಈ ವಿಷಯವನ್ನೆ ಮುಂದಿಟ್ಟುಕೊಂಡು ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಬಹುದು ಎಂದು ಸಮುದಾಯದ ಪ್ರಮುಖರು ಚರ್ಚೆಯಲ್ಲಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಸ್ಥಾನ ಪಲ್ಲಟ ಮಾಡುವ ಸಂದರ್ಭ ಬಂದರೆ ಆ ಅವಕಾಶವನ್ನು ಲಿಂಗಾಯಿತ ಸಮುದಾಯಕ್ಕೆ ಮೊದಲು ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಮುದಾಯದ ಸ್ವಾಮೀಜಿಗಳು, ಮುಖಂಡರ ಜೊತೆಗೆ ಮಾತನಾಡುತ್ತಿರುವುದು ಹೊಸ ಬೆಳವಣಿಗೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts