More

    ಚಂದ್ರಯಾನ-3: ಭಾರತದ ಬಾಹ್ಯಾಕಾಶ ವಲಯಕ್ಕೆ ಆರ್ಥಿಕ ವೇಗವರ್ಧಕವಾಗಲಿದೆ ಚಂದ್ರ ಅನ್ವೇಷಣಾ ಯೋಜನೆ

    ಚಂದ್ರಯಾನ-3: ಭಾರತದ ಬಾಹ್ಯಾಕಾಶ ವಲಯಕ್ಕೆ ಆರ್ಥಿಕ ವೇಗವರ್ಧಕವಾಗಲಿದೆ ಚಂದ್ರ ಅನ್ವೇಷಣಾ ಯೋಜನೆ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ 
    2019ರಲ್ಲಿ ಚಂದ್ರಯಾನ-2 ಯೋಜನೆಯ ವೈಫಲ್ಯದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭಾರತೀಯ ವಿಜ್ಞಾನಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3ರ ಯಶಸ್ವಿ ಉಡಾವಣೆಗೆ ಸಿದ್ಧಗೊಂಡಿದ್ದರು. ಇಸ್ರೋ ಮೂರು ವರ್ಷಗಳ ಕಠಿಣ ಪರಿಶ್ರಮ, ದುಡಿಮೆ ಮತ್ತು ಕಣ್ಣೀರುಗಳ ನಂತರ ಚಂದ್ರಯಾನ-3ರ ಯಶಸ್ವಿ ಉಡಾವಣೆ ನೆರವೇರಿಸಿದೆ. ಒಂದು ವೇಳೆ ಚಂದ್ರನ ಮೇಲೆ ಇಳಿಯುವ ಪ್ರಯತ್ನ ಯಶಸ್ವಿಯಾದರೆ, ಭಾರತ ಅಮೆರಿಕ, ರಷ್ಯಾ ಹಾಗೂ ಚೀನಾಗಳ ನಂತರ ಈ ಸಾಧನೆ ನಡೆಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಚಂದ್ರಯಾನ-3ರ ಹಿಂದೆ ಡಾ.ರಿತು ಕರಿದಾಲ್ ಶ್ರೀವಾತ್ಸವ ನೇತೃತ್ವದ 54 ಮಹಿಳೆಯರ ಶ್ರಮ

    ಚಂದ್ರಯಾನ-3 ಯೋಜನೆಯ ನಾಯಕತ್ವ ಪುರುಷರೇ ವಹಿಸಿದ್ದರೂ, ಚಂದ್ರಯಾನ-2 ಯೋಜನೆಯ ರೀತಿ ಅಲ್ಲದೆ, ಇದರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. 54 ಮಹಿಳಾ ಇಂಜಿನಿಯರ್‌ಗಳು, ವಿಜ್ಞಾನಿಗಳು ಚಂದ್ರಯಾನ-3 ಯೋಜನೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಅವರು ಯೋಜನೆಯ ವಿವಿಧ ವ್ಯವಸ್ಥೆಗಳ ನಿರ್ಮಾಣದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಮತ್ತು ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್‌ಗಳು, ಯೋಜನಾ ನಿರ್ದೇಶಕರಾಗಿ ವಿವಿಧ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

    ಈ ಯೋಜನೆಯ ನೇತೃತ್ವವನ್ನು ಇಸ್ರೋದ ಹಿರಿಯ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ರಿತು ಕರಿದಾಲ್ ಶ್ರೀವಾತ್ಸವ ಅವರು ವಹಿಸಿದ್ದರು. ಅವರ ಕುರಿತು ನಾವು ಒಂದಷ್ಟು ತಿಳಿದುಕೊಳ್ಳೋಣ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ರಿತು ಕರಿದಾಲ್ ಶ್ರೀವಾತ್ಸವ ಮಾರ್ಸ್ ಆರ್ಬಿಟರ್ ಮಿಶನ್ (ಮಂಗಳಯಾನ) ಯೋಜನೆಯ ಯಶಸ್ಸಿನಿಂದಾಗಿ ಜನಪ್ರಿಯರಾದರು. ಲಕ್ನೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ (ಐಐಎಸ್‌ಸಿ) ಬೆಂಗಳೂರಿನಿಂದ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಿತು, ಯೌವನದ ದಿನಗಳಿಂದಲೇ ಬಾಹ್ಯಾಕಾಶದ ಕುರಿತು ಅಪಾರ ಆಸಕ್ತಿ ಹೊಂದಿದ್ದರು. ಅವರು ಇಸ್ರೋ ಮತ್ತು ನಾಸಾದ ಯೋಜನೆಗಳ ಕುರಿತು ಹೆಚ್ಚು ಓದುತ್ತಿದ್ದರು. ನವೆಂಬರ್ 1997ರಲ್ಲಿ ಇಸ್ರೋಗೆ ಸೇರ್ಪಡೆಗೊಂಡ ಅವರು ಹಲವು ಮಹತ್ವದ ಬಾಹ್ಯಾಕಾಶ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆಪರೇಶನ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ 20ಕ್ಕೂ ಹೆಚ್ಚು ಬರಹಗಳನ್ನು ಪ್ರಕಟಿಸಿದ್ದಾರೆ. ಮಂಗಳಯಾನ ಯೋಜನೆಯ ಉಪನಿರ್ದೇಶಕಿಯಾಗಿ ಕೆಲಸ ಮಾಡಿದ ಅವರು ಭಾರತದ ರಾಕೆಟ್ ಮಹಿಳೆ ಎಂಬ ಹೆಸರೂ ಸಂಪಾದಿಸಿದ್ದರು. ಅವರಿಗೆ 2007ರಲ್ಲಿ ಭಾರತದ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಇಸ್ರೋ ಯಂಗ್ ಸೈಂಟಿಸ್ಟ್ ಪ್ರಶಸ್ತಿ ನೀಡಿ ಗೌರವಿಸಿದ್ದರು. ಅವರು ಮಂಗಳ ಅನ್ವೇಷಣಾ ಯೋಜನೆಯ ಕುರಿತು ಟೆಡ್ ಟಾಕ್‌ನಲ್ಲಿ ಹಲವು ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದರು.

    ಇದನ್ನೂ ಓದಿ: ಸ್ಪೆಷಲ್​ ಮಸಾಲೆ ದೋಸೆ ಜತೆ ಸಾಂಬಾರ್ ನೀಡದ್ದಕ್ಕೆ ಹೋಟೆಲ್ ಮಾಲೀಕರಿಗೆ 3,500 ರೂ. ದಂಡ!

    ಭಾರತದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಚಂದ್ರಯಾನ-3

    ಭಾರತ ತಂತ್ರಜ್ಞಾನ, ಪ್ರತಿಭೆ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಜಾಗತಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಚಂದ್ರಯಾನ-3ರ ಯಶಸ್ವಿ ಉಡಾವಣೆ ಭಾರತದ ದೃಢತೆ, ಸಂಕಲ್ಪ ಮತ್ತು ಕಳೆದುದನ್ನು ಗಳಿಸುತ್ತೇವೆಂಬ ವಿಶ್ವಾಸವನ್ನು ಜಗತ್ತಿಗೆ ತೋರಿಸುತ್ತಿದೆ. ಈ ಸಾಧನೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಸ ಮಜಲಿಗೆ ಕೊಂಡೊಯ್ದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಭಿವೃದ್ಧಿಯನ್ನು ತೋರಿಸುತ್ತಿದೆ.

    ಈ ಯೋಜನೆ ಭಾರತದ ಬಾಹ್ಯಾಕಾಶ ವಲಯದ ಅಭಿವೃದ್ಧಿಯನ್ನು ತೋರಿಸಲು, ನಾವೀನ್ಯತೆಗೆ ಹೊಸ ಬಾಗಿಲು ತೆರೆಯಲು, ತಾಂತ್ರಿಕ ಅಭಿವೃದ್ಧಿ ಸಾಧಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಹತ್ತರವಾಗಿದೆ.

    ಈ ಯೋಜನೆಯ ಯಶಸ್ಸು ಇನ್ನಷ್ಟು ಹೂಡಿಕೆಯನ್ನು ಆಕರ್ಷಿಸಿ, ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದೆ. ಭಾರತದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ವಲಯಕ್ಕೆ ವಿವಿಧ ಶ್ರೇಣಿಗಳ ಅವಕಾಶಗಳಿದ್ದು, ಅದಕ್ಕೆ ಹೊಸ ತಲೆಮಾರಿನ ಉದ್ಯಮಿಗಳೂ ಕಾರಣರಾಗಿದ್ದಾರೆ.

    ಇದನ್ನೂ ಓದಿ: ‘ಕಾಸಿಗಾಗಿ ಹುದ್ದೆ’ಯಲ್ಲಿ 500 ಕೋಟಿ ರೂ. ಕೈಬದಲು: ಕುಮಾರಸ್ವಾಮಿ ಗಂಭೀರ ಆರೋಪ

    ಚಂದ್ರಯಾನ-3ಕ್ಕೆ ಕೊಡುಗೆ ನೀಡಿದ ಖಾಸಗಿ ಸಂಸ್ಥೆಗಳು

    ಲಾರ್ಸನ್ & ಟೂಬ್ರೋ ಪ್ರೈವೇಟ್ ಲಿಮಿಟೆಡ್: ಲಾರ್ಸನ್ & ಟೂಬ್ರೋ ಲಿಮಿಟೆಡ್ ತಾನು ಭಾರತದ ಚಂದ್ರಯಾನ ಯೋಜನೆಗೆ ಮಹತ್ವದ ಬಿಡಿಭಾಗಗಳನ್ನು ಒದಗಿಸಿದ್ದೇನೆ ಎಂದು ಘೋಷಿಸಿದ ತಕ್ಷಣ ಸಂಸ್ಥೆಯ ಮೌಲ್ಯ 1% ಹೆಚ್ಚಳ ಕಂಡಿತು. ಶೇರುಗಳ ಮೌಲ್ಯ ಜುಲೈ 13ರ ವೇಳೆಗೆ 1.28% ಹೆಚ್ಚಿ, ಪ್ರತಿ ಶೇರಿಗೆ 2,485 ತಲುಪಿತು. ಲಾರ್ಸನ್ & ಟೂಬ್ರೋ ತಾನು ಚಂದ್ರಯಾನ ಯೋಜನೆಗೆ ಮಿಡಲ್ ಸೆಕ್ಷನ್, ನಾಜಲ್ ಬಕೆಟ್ ಫ್ಲಾಂಗ್, ಗ್ರೌಂಡ್ ಆ್ಯಂಡ್ ಫ್ಲೈಟ್ ಅಂಬಿಲಿಕಲ್ ಪ್ಲೇಟ್‌ಗಳು ಸೇರಿದಂತೆ ಹಲವು ಪ್ರಮುಖ ಬಿಡಿಭಾಗಗಳನ್ನು ಒದಗಿಸಿರುವುದಾಗಿ ಹೇಳಿತ್ತು.

    ಪೋವೈ ಮತ್ತು ಕೊಯಂಬತ್ತೂರುಗಳಲ್ಲಿರುವ ಸಂಸ್ಥೆಯ ಅತ್ಯಾಧುನಿಕ ಕಾರ್ಖಾನೆಗಳು ಈ ಭಾಗಗಳನ್ನು ಉತ್ಪಾದಿಸಿದ್ದವು. ಎಲ್&ಟಿ ಭಾರತದ ಬಾಹ್ಯಾಕಾಶ ಯೋಜನೆಗಳಲ್ಲಿ ಈಗಾಗಲೇ ಭಾಗವಹಿಸಿತ್ತು. ಇದು ಗಗನಯಾನ, ಮಂಗಳಯಾನ, ಚಂದ್ರಯಾನ-1, ಚಂದ್ರಯಾನ-2 ಯೋಜನೆಗಳಿಗೂ ವಿವಿಧ ಹಾರ್ಡ್‌ವೇರ್‌ಗಳನ್ನು ಒದಗಿಸಿತ್ತು.

    ಗೋಡ್ರೇಜ್ ಏರೋಸ್ಪೇಸ್: ಗಾಡ್ರೇಜ್ ಏರೋಸ್ಪೇಸ್ ಚಂದ್ರಯಾನ-3ರಲ್ಲಿ ತಾನೂ ಪಾತ್ರ ವಹಿಸಿದ್ದೇನೆ ಎಂದು ಹೇಳುವ ಮೂಲಕ ಪ್ರಸ್ತುತ ಚರ್ಚೆಗೊಳಗಾಗುತ್ತಿದೆ. ಗಾಡ್ರೇಜ್ & ಬಾಯ್ಸ್ ಸಂಸ್ಥೆಯ ಅಂಗವಾದ ಗಾಡ್ರೇಜ್ ಏರೋಸ್ಪೇಸ್‌ನ ಎವಿಪಿ ಮತ್ತು ಬಿಸಿನೆಸ್ ಹೆಡ್ ಆಗಿರುವ ಮಾನೆಕ್ ಬೆಹ್‌ರಾಮ್‌ಕಾಮ್‌ದಿನ್ ಅವರು ನಾವು ಇಸ್ರೋದ ಚಂದ್ರಯಾನ-3 ಯೋಜನೆಯಲ್ಲಿ ಪಾಲ್ಗೊಂಡಿದ್ದೇವೆ ಎನ್ನಲು ಬಹಳ ಸಂತೋಷ ಪಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸೌದಿಯಿಂದ ಬಂದು ಹರಕೆ ಸಲ್ಲಿಸಿದ ಅಭಿಮಾನಿ; ಚಿನ್ನಲೇಪಿತ ಬೆಳ್ಳಿಯ ನಾಗಾಭರಣ ಅರ್ಪಣೆ

    ಈ ಹಿಂದೆ, ಗಾಡ್ರೇಜ್ ಏರೋಸ್ಪೇಸ್ ಚಂದ್ರಯಾನ-1 ಮತ್ತು ಚಂದ್ರಯಾನ-2 ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅದು ವಿಕಾಸ್ ಇಂಜಿನ್, ಥ್ರಸ್ಟರ್‌ಗಳು, ರಿಮೋಟ್ ಸೆನ್ಸಿಂಗ್ ಆ್ಯಂಟೆನಾದ ಪ್ರಮುಖ ಬಿಡಿಭಾಗಗಳು, ಹಾಗೂ ಚಂದ್ರಯಾನ-1ರ ಗ್ರೌಂಡ್ ಸಿಸ್ಟಮ್ ಆ್ಯಂಟೆನಾಗಳನ್ನು ಒದಗಿಸಿತ್ತು. ಅದರೊಡನೆ, ಜಿಎಸ್ಎಲ್‌ವಿ ಎಂಕೆ 3 ಉಡಾವಣಾ ವಾಹನದ ಎಲ್110 ಹಾಗೂ ಸಿಇ20 ಇಂಜಿನ್‌ಗಳನ್ನು, ಚಂದ್ರಯಾನ-2 ಯೋಜನೆಯ ಆರ್ಬಿಟರ್ ಮತ್ತು ಲ್ಯಾಂಡರ್‌ಗಳ ಥ್ರಸ್ಟರ್‌ಗಳು, ಡಿಎಸ್ಎನ್ ಆ್ಯಂಟೆನಾಗಳನ್ನು ಒದಗಿಸಿತ್ತು.

    ದೀರ್ಘಕಾಲದ ತನಕ ಗಾಡ್ರೇಜ್ ಏರೋಸ್ಪೇಸ್ ಭಾರತದ ಬಾಹ್ಯಾಕಾಶ ಅನ್ವೇಷಣಾ ಯೋಜನೆಗಳಿಗೆ ಪ್ರಮುಖ ಭಾಗವಾಗಿದೆ. ಕಳೆದ ಮೂರು ದಶಕಗಳಲ್ಲಿ ಸಂಸ್ಥೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ (ಪಿಎಸ್ಎಲ್‌ವಿ) 175 ಇಂಜಿನ್‌ಗಳನ್ನು ಒದಗಿಸಿದೆ.

    ಇತರ ಖಾಸಗಿ ಸಂಸ್ಥೆಗಳು: ಎಲ್&ಟಿ ಮತ್ತು ಗಾಡ್ರೇಜ್ ಏರೋಸ್ಪೇಸ್ ಜೊತೆಗೆ, ಹೈದರಾಬಾದ್ ಮೂಲದ ಎರಡು ಸಂಸ್ಥೆಗಳು ಈ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಮಾರ್ಕ್-11 ರಿಲೀಸ್ ಮೆಕಾನಿಸಂ ಸೇರಿದಂತೆ, ಚಂದ್ರಯಾನ-3 ಯೋಜನೆಯ ಹಲವು ಬಿಡಿಭಾಗಗಳನ್ನು ಶ್ರೀ ವೆಂಕಟೇಶ್ವರ ಏರೋಸ್ಪೇಸ್ ಸಂಸ್ಥೆ ನಿರ್ಮಿಸಿದೆ. ನಾಗ ಸಾಯಿ ಪ್ರಿಸಿಷನ್ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆ ಅಲ್ಯುಮಿನಿಯಮ್ ಮಿಶ್ರಲೋಹದಿಂದ ತಯಾರಿಸಿದ ಲಿಥಿಯಂ ಅಯಾನ್ ಬ್ಯಾಟರಿ ಕವಚವನ್ನು ಒದಗಿಸಿದೆ.

    ಭಾರತದ ಬಾಹ್ಯಾಕಾಶ ಉದ್ಯಮದೆಡೆಗೊಂದು ನೋಟ

    – ತೀರಾ ಇತ್ತೀಚಿನ ವರ್ಷಗಳ ತನಕ, ಅಂದರೆ 2020ರಲ್ಲಿ ಭಾರತದ ಬಾಹ್ಯಾಕಾಶ ಉದ್ಯಮದ ಒಟ್ಟು ಮೌಲ್ಯ 9.6 ಬಿಲಿಯನ್ ಡಾಲರ್ ಆಗಿತ್ತು. ಆದರೆ, ಇವೈ ಇಂಡಿಯಾದ ಅಂದಾಜಿನ ಪ್ರಕಾರ, 2025ರ ವೇಳೆಗೆ ಈ ಮೌಲ್ಯ 13 ಬಿಲಿಯನ್ ಡಾಲರ್ ತಲುಪಲಿದೆ.

    – ಭಾರತ ಬಾಹ್ಯಾಕಾಶ ಅನ್ವೇಷಣೆ ಮತ್ತು ಅಧ್ಯಯನದಲ್ಲಿ ಜಗತ್ತಿನ ಅಗ್ರ ಹತ್ತು ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಹಾದಿಯಲ್ಲಿದೆ.

    – ಭಾರತ ಸರ್ಕಾರ 2022-23ರ ಕೇಂದ್ರ ಬಜೆಟ್‌ನಲ್ಲಿ ಬಾಹ್ಯಾಕಾಶ ಇಲಾಖೆಗೆ 137 ಬಿಲಿಯನ್ ಡಾಲರ್ ಒದಗಿಸಿದೆ.

    – ಭಾರತ ಕಡಿಮೆ ವೆಚ್ಚದಲ್ಲಿ ಉಪಗ್ರಹ ನಿರ್ಮಿಸುವ, ಮತ್ತು ಇತರ ದೇಶಗಳಿಗೆ ಕಡಿಮೆ ಖರ್ಚಿನಲ್ಲಿ ಉಪಗ್ರಹ ಉಡಾವಣಾ ಸೇವೆ ಒದಗಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    – ಭಾರತ ಪ್ರಸ್ತುತ ಜಾಗತಿಕ ಬಾಹ್ಯಾಕಾಶ ಉದ್ದಿಮೆಯ 2-3% ಪಾಲು ಹೊಂದಿದ್ದು, 2030ರ ವೇಳೆಗೆ 10% ಪಾಲು ಹೊಂದುವ ನಿರೀಕ್ಷೆಯಿದೆ.

    – ಬಾಹ್ಯಾಕಾಶ ಯೋಜನೆಗಳನ್ನು ಸರ್ಕಾರಿ ಮತ್ತು ಖಾಸಗಿ ಸಹಯೋಗದ ಮೂಲಕ ನೆರವೇರಿಸಲಾಗುತ್ತಿದೆ. ಸರ್ಕಾರ ಖಾಸಗಿ ವಲಯದ ಉದ್ದಿಮೆಗಳೊಡನೆ ಸಹಯೋಗ ಹೊಂದಿ, ಉಪಗ್ರಹ ಮತ್ತು ಉಡಾವಣಾ ವಾಹನಗಳಿಗೆ ಅವಶ್ಯಕವಾದ ಬಿಡಿಭಾಗಗಳನ್ನು ಉತ್ಪಾದಿಸುತ್ತಿದೆ.

    – ಚಂದ್ರಯಾನ-3ರ ಯಶಸ್ಸು ಭಾರತದಲ್ಲಿ ನೋಂದಾಯಿತವಾಗಿರುವ ಬಹುತೇಕ 140 ಬಾಹ್ಯಾಕಾಶ ಸಂಬಂಧಿ ಸ್ಟಾರ್ಟಪ್‌ಗಳಿಗೆ ಪ್ರಯೋಜನಕಾರಿಯಾಗಲಿದೆ. ಈ ಸ್ಟಾರ್ಟಪ್‌ಗಳು ಪ್ರಾಯೋಗಿಕ ಬಳಕೆಗೆ ಅವಶ್ಯಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

    ವೈಜ್ಞಾನಿಕ ಕುತೂಹಲಗಳನ್ನು ಬೆಳೆಸುವುದು ಮತ್ತು ಭವಿಷ್ಯದ ನಾವೀನ್ಯತೆಗಳಿಗೆ ಸ್ಫೂರ್ತಿ ನೀಡುವುದು

    ಚಂದ್ರಯಾನ-3 ಯೋಜನೆಯ ಯಶಸ್ವಿ ಉಡಾವಣೆ ಭಾರತೀಯರಲ್ಲಿ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳನ್ನು ತುಂಬಿ, ವೈಜ್ಞಾನಿಕ ಅನ್ವೇಷಣೆಗಳ ಕುರಿತು ಆಸಕ್ತಿ ಮೂಡಿಸಿದೆ. ಅದರಲ್ಲೂ ಈ ಯಶಸ್ಸು ಯುವ ಭಾರತೀಯರಲ್ಲಿ ಹೆಚ್ಚು ಸ್ಫೂರ್ತಿ ತುಂಬಿದ್ದು, ಬಾಹ್ಯಾಕಾಶ ಅನ್ವೇಷಣೆಯೆಡೆಗೆ ಅವರನ್ನು ಆಕರ್ಷಿಸಿದೆ.

    ಚಂದ್ರಯಾನ-3ರ ಸಾಧನೆಗಳು ಹೊಸ ತಲೆಮಾರಿನ ಯುವ ಜನತೆಯನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಹಾಗೂ ಗಣಿತಶಾಸ್ತ್ರದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು, ಉದ್ಯೋಗ ಹೊಂದಲು ಹೆಚ್ಚು ಹೆಚ್ಚು ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯ ಸಾಕಷ್ಟು ವೃದ್ಧಿಸಲಿದೆ.

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts