More

    ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

    ಚಾಮರಾಜನಗರ: ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಚಾರವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದ ಪರಿಣಾಮವಾಗಿ ಜಿಲ್ಲಾಧಿಕಾರಿ ಭವನದ ಮುಖ್ಯದ್ವಾರದ ಮುಂಭಾಗದಲ್ಲೇ ಕುಳಿತ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಾಗಿರುವ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. 187 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಹಗಲು ದರೋಡೆಯಾಗಿದೆ. ರಾಜ್ಯ ಸರ್ಕಾರ ಎಸ್ಟಿ/ಎಸ್ಟಿಗಳ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ನೀಡುವ ಮೂಲಕ ಹಾಗೂ ಪೆಟ್ರೋಲ್, ಡಿಸೇಲ್ ಮತ್ತು ಹಾಲಿನ ದರವನ್ನು ಏರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ನೂಕಿದೆ. ರಾಜ್ಯದ ಜನತೆ ಮತ್ತು ಎಸ್ಟಿ/ಎಸ್ಟಿ ಸಮುದಾಯದವರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಒಂದುಕಡೆ ಲೋಕಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಯವರು ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅವರದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನಕ್ಕೆ ದ್ರೋಹ ಬಗೆಯುವ ಕೆಲಸಮಾಡಿದೆ. ಕಾಂಗ್ರೆಸ್‌ನವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತೇವೆ ಎನ್ನುವುದು ಕುತಂತ್ರದ ನಡೆಯಾಗಿದೆ. ಜವಾಹರ್ ಲಾಲ್ ನೆಹರು ಕಾಲದಿಂದಲೂ ಇಲ್ಲಿಯವರೆಗೂ ಕಾಂಗ್ರೆಸ್ ಸಂವಿಧಾನಕ್ಕೆ ಅಪಚಾರವನ್ನೇ ಮಾಡಿದೆ ಎಂದು ಕಿಡಿಕಾರಿದರು.

    ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ, ಈಗಾಗಲೇ ಕಳೆದ ಒಂದು ವರ್ಷದಲ್ಲಿ ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಗ್ಯಾರೆಂಟಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡದೇ ದಿವಾಳಿಯಾಗಿದೆ. 52 ಸಾವಿರ ಕೋಟಿ ಹಣವನ್ನು ಕ್ರೂಢೀಕರಿಸಲು ದಲಿತರಿಗೆ ಮೀಸಲಿಟ್ಟಿರುವ ಅನುದಾನಕ್ಕೆ ಕೈ ಹಾಕಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

    ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಏರಿಕೆ ಮಾಡಿದರು. ಇದರಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ನೀಡುವ ಹಣವನ್ನು ಬೆಲೆ ಏರಿಕೆಯಿಂದ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಈ ಸರ್ಕಾರವನ್ನು ಜನರು ಆದಷ್ಟು ಬೇಗ ಕಿತ್ತೊಗೆಯಬೇಕಿದೆ ಎಂದರು.

    ಪ್ರತಿಭಟನೆಯಲ್ಲಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೂನ್ನೂರು ಮಹದೇವಸ್ವಾಮಿ, ಮೂಡ್ನಕೂಡು ಪ್ರಕಾಶ್, ಪಿ.ವೃಷಭೇಂದ್ರಪ್ಪ, ಮುಖಂಡ ಹನುಮಂತಶೆಟ್ಟಿ, ನೂರೊಂದುಶೆಟ್ಟಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಹಳ್ಳಿಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಕಾಡಹಳ್ಳಿ ಕುಮಾರ್, ನಗರಸಭಾ ಸದಸ್ಯರಾದ ಶಿವರಾಜ್, ಮನೋಜ್ ಪಟೇಲ್, ಮಮತಾ, ಆಶಾ ನಟರಾಜ್, ಶಂಕರ್ ನಾಯಕ್, ಮಂಜುನಾಥ್, ವಿರೇಂದ್ರ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಲೋಕೇಶ್, ಆನಂದ್ ಭಗೀರಥ ಹಾಗೂ ಇತರರು ಭಾಗವಹಿಸಿದ್ದರು.

    ಬಿಜೆಪಿ ಮುಖಂಡರ ಬಂಧನ:
    ವಾಲ್ಮೀಕಿ ನಿಗಮದ ಹಗರಣವನ್ನು ಖಂಡಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಗೇಟ್ ಬಳಿಯೇ ಪ್ರತಿಭಟನಾಕಾರರನ್ನು ತಡೆದ ಪೋಲೀಸರು ಮುಖಂಡ ಎನ್.ಮಹೇಶ್, ಎಸ್.ಬಾಲರಾಜ್, ವೆಂಕಟೇಶ್ ಹಾಗೂ ಇನ್ನಿತರೆ ಮುಖಂಡರನ್ನು ಬಂಧಿಸಿ ಕರೆದೊಯ್ದರು. ಮತ್ತೊಂದು ವಾಹನದಲ್ಲಿ ಮತ್ತಷ್ಟು ಬಿಜೆಪಿಯ ಯುವಮುಖಂಡರನ್ನು ಬಂಧಿಸಿದರು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಭಟನೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಚಾಮುಲ್ ಅಧ್ಯಕ್ಷರಿಂದ ಮುಜುಗರ:
    ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಲಿನ ದರ ಏರಿಕೆ ಕುರಿತು ಮಾತನಾಡುವ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಾಗೇಂದ್ರ ಅವರನ್ನು ಅರ್ಧ ಲೀ, ಹಾಲಿಗೆ 50 ಮಿ.ಲೀ ಹೆಚ್ಚುವರಿಯಾಗಿ ಸೇರಿಸಿರುವುದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೇ ನಾಗೇಂದ್ರ ಅವರು ಹೌದು ಎಂದು ಪ್ರತಿಕ್ರಿಯಿಸಿದರು. ಇದರಿಂದ ಮುಜುಗರಕ್ಕೆ ಒಳಗಾದ ಎನ್.ಮಹೇಶ್ ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು ಕೇಳಿದರು. ಅರ್ಧ ಲೀ, ಹಾಲಿಗೆ ಹೆಚ್ಚುವರಿ 50 ಮಿ.ಲೀ ಸೇರ್ಪಡೆ ಮಾಡಿಲ್ಲ ಎಂದು ಮಹಿಳೆಯರು ಉತ್ತರಿಸಿದರು. ಇದರಿಂದ ಕೋಪಗೊಂಡ ಎನ್.ಮಹೇಶ್ ಅವರು ನಾಗೇಂದ್ರ ಅವರೇ ಯಾಕೇ ಸುಳ್ಳು ಹೇಳುತ್ತಿದ್ದೀರಿ? ನಿಮಗೆ ಅಷ್ಟೊಂದು ಭಯವಾದರೇ ರಾಜೀನಾಮೆ ಕೊಟ್ಟು ಬಂದುಬಿಡಿ ಎಂದರು. ಇದರಿಂದ ಕೆಲಕಾಲ ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾದರು.

    ಗ್ಯಾರೆಂಟಿ ಯೋಜನೆಗಳಿಂದ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸೂಕ್ತ ರೀತಿಯಲ್ಲಿ ಜನರಿಗೆ ಯೋಜನೆ ತಲುಪಿಸಲು ಸಾಧ್ಯವಾಗಿಲ್ಲ. ಗ್ಯಾರೆಂಟಿ ಯೋಜನೆಯಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಪೆಟ್ರೋಲ್, ಡಿಸೇಲ್ ಹಾಗೂ ಹಾಲಿನ ದರ ಏರಿಕೆಯಾಗಿದೆ. ವಾಲ್ಮೀಕಿ ನಿಗಮ ಅತ್ಯಂತ ಬಡವರು ಜೀವನವನ್ನು ಕಟ್ಟಿಕೊಳ್ಳಲು ಇರುವಂತಹ ನಿಗಮವಾಗಿದೆ. ಅಂತಹ ಸಂಸ್ಥೆಯಲ್ಲಿ 187 ಕೋಟಿ ರೂ. ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಲೂಟಿ ಕೋರ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ.
    -ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts