More

    ಪ್ರತಿಕೂಲ ವಾತಾವರಣದಲ್ಲಿ ಕಾಫಿ

    ಚಾಮರಾಜನಗರ: ಪ್ರತಿಕೂಲ ವಾತಾವರಣದಲ್ಲಿ, ಅದರಲ್ಲೂ ಸಾವಯವ ಕೃಷಿ ಪದ್ಧತಿಯಲ್ಲಿ ಕಾಫಿ ಬೆಳೆಯುವುದರ ಮೂಲಕ ಕೃಷಿಕರೊಬ್ಬರು ಯಶಸ್ಸು ಸಾಧಿಸಿದ್ದಾರೆ. ಸಾವಯವ ಕೃಷಿಯಲ್ಲಿ ಖುಷಿಯಾದ ಜೀವನವನ್ನು ಕಂಡುಕೊಂಡಿದ್ದಾರೆ.

    ತಾಲೂಕಿನ ಹೆಬ್ಬಸೂರು ಗ್ರಾಮದ ಲೇ.ಎಚ್.ಸಿ.ಸುಬ್ರಹ್ಮಣ್ಯಂ ಮತ್ತು ಲೇ.ನಾಗರತ್ನಮ್ಮ ದಂಪತಿಗಳ ಪುತ್ರರಾದ ಶ್ರೀಧರ್‌ಪ್ರಸಾದ್ ಅವರು ಕೃಷಿ ಬದುಕನ್ನೇ ಪ್ರಧಾನವಾಗಿಸಿಕೊಂಡು ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ಶ್ರೀಧರ್ ಪ್ರಸಾದ್ ಅವರು ಮೈಸೂರಿನ ಶಾರದಾ ವಿಲಾಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡಿದ್ದಾರೆ. ಅವರ ಅವಧಿಯಲ್ಲಿ ಹಲವಾರು ಉದ್ಯೋಗಗಳಿಗೆ ಹೋಗುವಂತಹ ಅವಕಾಶಗಳು ಇದ್ದರೂ, ತಮ್ಮ ಜೀವನದ ನಿರ್ವಹಣೆಗೆ ವ್ಯವಸಾಯವನ್ನೇ ಆಯ್ಕೆ ಮಾಡಿಕೊಂಡರು. ಆ ಮೂಲಕ ತಮ್ಮ ಗ್ರಾಮದಲ್ಲಿ ಇರುವ ಸ್ವಂತ 6 ಎಕರೆ ಜಮೀನು ಹಾಗೂ 1 ಎಕರೆ ತೆಂಗಿನ ತೋಟದಲ್ಲಿ ಕಳೆದ 5 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ವ್ಯವಸಾಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅಂದಿನಿಂದಲೂ ಯಾವುದೇ ರಾಸಾಯನಿಕಗಳನ್ನು ಬೇಸಾಯದಲ್ಲಿ ಬಳಕೆ ಮಾಡದೇ ಜೀವಾಮೃತವನ್ನೇ ಆಧಾರವಾಗಿ ಇಟ್ಟುಕೊಂಡು ತೆಂಗು, ಅಡಿಕೆ, ಬಾಳೆ, ಕಾಳು ಮೆಣಸು, ಕಾಫಿ, ಏಳಕ್ಕಿ, ಜಾಯ್ ಕಾಯಿ ಹಾಗೂ ಇನ್ನಿತರೆ ಬೆಳೆಗಳನ್ನು ಬಹಳ ಅಚ್ಚುಕಟ್ಟಾಗಿ, ಸಮೃದ್ಧಿಯಾಗಿ ಬೆಳೆಯುತ್ತಿದ್ದಾರೆ.

    ಪ್ರತಿಕೂಲ ವಾತಾವರಣದಲ್ಲಿ ಕಾಫಿಯನ್ನು ಬೆಳೆದಿರುವ ಶ್ರೀಧರ್‌ಪ್ರಸಾದ್ ಅವರು ಅಡಿಕೆಯಲ್ಲೂ ಬಹಳಷ್ಟು ಲಾಭ ಕಾಣುತ್ತಿದ್ದಾರೆ. ತಮ್ಮ ತೋಟದಲ್ಲಿ ದೊರೆಯುವ ಯಾವುದೇ ವಸ್ತುಗಳನ್ನು ವ್ಯರ್ಥಮಾಡದೇ, ಭೂಮಿಯಲ್ಲಿ ಎರೆಹುಳು ಉತ್ಪತ್ತಿಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸೂಕ್ತ ರೀತಿಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆಯುವ ಬೆಳೆಗಳಿಗೆ ಬೆಲೆ ಸಿಕ್ಕರೇ ಇಷ್ಟು ಜಮೀನಿನಲ್ಲಿ ವರ್ಷಕ್ಕೆ 15-20 ಲಕ್ಷ ರೂ, ಲಾಭ ಪಡೆಯಬಹುದು ಎಂದು ಹೇಳುವ ಶ್ರೀಧರ್ ಅವರು ಮುಂದಿನ ದಿನಗಳಲ್ಲಿ ಜೀವಾಮೃತ ಪ್ಲಾಂಟ್ ನಿರ್ಮಾಣ ಹಾಗೂ ಇನ್ನಿತರೆ ಯೋಜನೆ ಹಾಕಿಕೊಂಡಿದ್ದಾರೆ.

    ನಿರಂತರ ಜೀವಾಮೃತ ಬಳಕೆ:
    ಸುಮಾರು 10 ಕೆ.ಜಿ ಯಷ್ಟು ಸಗಣಿ, ಗಂಜಲ, 4 ಕೆ.ಜಿ ಯಷ್ಟು ದ್ವಿದಳ ಧಾನ್ಯದ ಹಿಟ್ಟು, ಬೆಲ್ಲವನ್ನು ಮಿಶ್ರಣಮಾಡಿ ಹಲವು ದಿನಗಳ ವರೆಗೆ ಕೊಳೆಯಲು ಬಿಡುತ್ತಾರೆ. ಬಳಿಕ ಕೊಳೆತ ಜೀವಾಮೃತವನ್ನು 5 ಲೀ, ನೀರಿಗೆ ಮಿಶ್ರಣಮಾಡಿ ಬೆಳೆಗಳಿಗೆ ನಿರಂತರವಾಗಿ ಕೊಡುತ್ತಿದ್ದಾರೆ. ಬೇವಿನ ಎಣ್ಣೆ, ಬೆಳ್ಳುಳ್ಳಿಯನ್ನು ಔಷಧ ರೂಪದಲ್ಲಿ ನೀಡುತ್ತಿದ್ದಾರೆ. ಗಿಡ ಸಮೃದ್ಧಿಯಿಂದ ಬೆಳೆದರೇ ಅದಕ್ಕೆ ಯಾವುದೇ ರೋಗವು ಬರುವುದಿಲ್ಲ ಎಂಬುದನ್ನು ಅರಿತುಕೊಂಡಿರುವ ಶ್ರೀಧರ್ ಅವರು ಸತತ 5 ವರ್ಷಗಳಿಂದಲೂ ರಾಸಾಯನಿಕ ಗೊಬ್ಬರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮೂರು
    ಮಲೆನಾಡುಗಿಡ್ಡ ಹಸುಗಳನ್ನು ಸಾಕಿಕೊಂಡಿದ್ದು, ಜೀವಾಮೃತಕ್ಕೆ ಅಗತ್ಯವಾದ ಗೊಬ್ಬರ, ಗಂಜಲ ಇದರಿಂದಲೇ ದೊರೆಯುತ್ತಿದೆ. ಜತೆಗೆ ಉತ್ಕೃಷ್ಟವಾದ ಹಾಲು ಮನೆ ಬಳಕೆಗೆ ಲಭ್ಯವಾಗುತ್ತಿದೆ.

    ಕಾಫಿ ಘಮಲು:
    ಬಿಳಿಗಿರಿರಂಗನಬೆಟ್ಟ ಹಾಗೂ ಇನ್ನಿತರೆ ಕಾಡಂಚಿನ ಪ್ರದೇಶವನ್ನು ಹೊರತುಪಡಿಸಿ, ತಾಲೂಕಿನಲ್ಲಿ ಎಲ್ಲೂ ಕೂಡ ಕಾಫಿ ಬೆಳೆಯಲು ಸಾಧ್ಯವಿಲ್ಲ. ಆದರೆ ಪ್ರತಿಕೂಲ ವಾತಾವರಣದಲ್ಲೂ 2 ವರ್ಷಗಳ ಹಿಂದೆಯೇ ಸುಮಾರು 4 ಸಾವಿರ ಅರೇಬಿಕ್ ಕಾಫಿ ಗಿಡಗಳನ್ನು ಹಾಕಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಗಿಡಗಳು 3-4 ಅಡಿಯಷ್ಟು ಎತ್ತರವಾಗಿ ಬೆಳೆದಿದ್ದು, ಹೂ ಬಂದು, ಕಾಯಿಯನ್ನು ಬಿಡುತ್ತಿದೆ. ಈ ಬೆಳೆ ಸುಮಾರು 30 ವರ್ಷಗಳವರೆಗೂ ಇದ್ದು, ಮಾರ್ಕೆಟಿಂಗ್ ಮಾಡುವುದು ಕೂಡ ಸುಲಭವಾಗಿದೆ. ಅದಲ್ಲದೇ ಕಾಫಿ ಎಲೆ ಉದುರುವುದರಿಂದ ಮಣ್ಣಿನ ಫಲವತ್ತತೆಯನ್ನು ವೃದ್ಧಿಸುವ ಪ್ರಕ್ರಿಯೆಯನ್ನು ಶ್ರೀಧರ್ ಅವರು ಕಂಡುಕೊಂಡಿದ್ದಾರೆ. ಇದರಿಂದಾಗಿ ಎಷ್ಟು ಮಳೆಯಾದರೂ ನೀರು ನಿಲ್ಲದೇ, ತೋಟದಲ್ಲೇ ಇಂಗುವುದಕ್ಕೆ ಇದು ಸಹಕಾರಿಯಾಗಿದೆ. ಏಲಕ್ಕಿ ಮತ್ತು 100 ಜಾಯ್‌ಕಾಯಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿದೆ.

    ಅಡಕೆ ಬೆಳೆಯಲ್ಲೂ ಯಶಸ್ಸು:
    ಸಾವಯವ ಪದ್ಧತಿಯಲ್ಲಿ ಅಡಕೆ ಬೆಳೆದಿರುವ ಕೃಷಿಕ ಶ್ರೀಧರ್ ಪ್ರಸಾದ್ ಅವರು ಅಡಕೆ ಬೆಳೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡದೇ ಗುಣಮಟ್ಟದ ಅಡಕೆಯನ್ನು ಬೆಳೆದಿದ್ದಾರೆ. ಈಗಾಗಲೇ ಅಡಕೆ ಲ ಬಿಡುತ್ತಿದ್ದು, ನಿರಂತರ ಜೀವಾಮೃತ ನೀಡುವುದರಿಂದ 4-6 ತಾರುಗಳನ್ನು ಬಿಡುತ್ತಿದೆ. ಉತ್ತಮ ಬೆಲೆ ಇದ್ದರೇ ವರ್ಷದಲ್ಲಿ 6-7 ಲಕ್ಷ ರೂ, ಅಡಕೆಯಿಂದಲೇ ಸಂಪಾದನೆ ಮಾಡಬಹುದು ಎಂದು ಅಂದಾಜು ಮಾಡಿ ಹೇಳುತ್ತಾರೆ.
    ಜಮೀನಿನಲ್ಲಿ ಎರೆಹುಳು ಉತ್ಪತ್ತಿಯಾಗಬೇಕು, ಯಾವುದೇ ಕಾರಣಕ್ಕೂ ಕಳೆ ನಾಶಕ ಬಳಕೆ ಮಾಡಬಾರದು ಎಂಬ ಧ್ಯೇಯವನ್ನು ಅಳವಡಿಸಿಕೊಂಡಿರುವ ಶಾಂತಸ್ವಭಾವದ ಶ್ರೀಧರ್ ಅವರು ಕಳೆ ನಾಶಕ ಬಳಕೆಯಿಂದ ಗಿಡ ಹಾಳಾಗುತ್ತದೆ ಹಾಗೂ ಮನುಷ್ಯನ ಆರೋಗ್ಯವೂ ಕೆಡುತ್ತದೆ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಅವರು ಸಂಪೂರ್ಣ ಸಾವಯವ ಕೃಷಿಯನ್ನೇ ಅವಲಂಬಿಸಿದ್ದಾರೆ. ಇತರ ರೈತರಿಗೂ ಸಾವಯವ ಕೃಷಿಗೆ ತೊಡಗಿಸಿಕೊಳ್ಳುವಂತೆ ಸಲಹೆಯನ್ನು ನೀಡುತ್ತಾರೆ.

    ಪ್ರತಿಯೊಬ್ಬ ರೈತನು ಸಾವಯವ ಕೃಷಿಯತ್ತಾ ಮುಖ ಮಾಡಬೇಕು. ಜೀವಾಮೃತ ಬಳಕೆಯಿಂದ ಸಮೃದ್ಧವಾದ ಬೆಳೆಯನ್ನು ಕಾಣಬಹುದಾಗಿದೆ. ಕೃಷಿಯಲ್ಲಿ ನಿರಂತರವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಲಾಭವನ್ನು ಕಾಣಬಹುದಾಗಿದೆ.
    -ಶ್ರೀಧರ್ ಪ್ರಸಾದ್, ವಾವಯವ ಕೃಷಿಕ, ಹೆಬ್ಬಸೂರು, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts