More

    ಬೋಧನೆ ಮಾಡದ ಶಿಕ್ಷಕರು ಎಂಬ ಆರೋಪ

    ಚಾಮರಾಜನಗರ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರೇ ಶಾಲೆಗೆ ಮಂಗಳವಾರ ಬೀಗ ಹಾಕಿದ್ದಾರೆ.

    ತಾಲೂಕಿನ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರಾದ ರವೀಶ್ ಮತ್ತು ನಟರಾಜ್ ಅವರನ್ನು ಶಾಲೆಯಿಂದ ಹೊರಗೆ ಕಳುಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿಶಂಕರ್ ಮಾತನಾಡಿ, ನಮ್ಮ ಗ್ರಾಮದ ಶಾಲೆಯಲ್ಲಿ ಕಳೆದ 4-5 ವರ್ಷಗಳಿಂದಲೂ 80-90 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈಗ ಶಾಲೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ-ಪ್ರವಚನ ಮಾಡದ ಪರಿಣಾಮವಾಗಿ ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಹಲವಾರು ಪಾಲಕರು ತಮ್ಮ ಮಕ್ಕಳನ್ನು ಈಕಾರಣಕ್ಕೆ ಆಲೂರು, ಕಾಗಲವಾಡಿ, ಗೂಳಿಪುರ ಹಾಗೂ ಇನ್ನಿತರೆ ಗ್ರಾಮಗಳ ಕಾನ್ವೆಂಟ್‌ಗಳಿಗೆ ಸೇರಿಸಿದ್ದಾರೆ ಎಂದು ದೂರಿದರು.

    ಈ ಹಿಂದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ರವೀಶ್ ಹಾಗೂ ನಟರಾಜ್ ಅವರನ್ನು ಈ ಶಾಲೆಯಿಂದ ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ್ದೆವು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದ್ದರು. ಆದರೆ ಈ ಶಾಲೆಗೆ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಶಿಕ್ಷಕರು ನಮ್ಮ ಶಾಲೆಗೆ ಬೇಕಾಗಿಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts