ಸತೀಶ್ ಜಾರಕಿಹೊಳಿ, ಅವರ ಆಪ್ತರು, ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ ಸೇರಿ 21 ಸ್ಥಳಗಳ ಮೇಲೆ ಇ.ಡಿ ನಡೆಸಿದ ದಾಳಿ ವೇಳೆ 3.30 ಕೋಟಿ ನಗದು, 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಅನ್ವಯ ನಡೆದ ಕಾರ್ಯಾಚರಣೆಯಲ್ಲಿ ಜಾರಕಿಹೊಳಿ ಕುಟುಂಬದ ಅಘೋಷಿತ ವಿದೇಶಿ ಹೂಡಿಕೆಗಳು, ಗಡಿ ದಾಟಿದ ವ್ಯವಹಾರ ಸಂಪರ್ಕಗಳು ಹಾಗೂ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕೃತವಾಗಿ ಮಾಹಿತಿ ನೀಡಿದೆ. ಚಿಕ್ಕೋಡಿ ಸಂಸದೆ, ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಹೋದರಿ ಮಹಾದೇವಿ ಹಾಗೂ ಅವರ ಪತಿ, ಸಚಿವರ ಭಾವ ವೈ.ಡಿ. ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಸೆ.9 ಮತ್ತು 10ರಂದು ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದರ ಜತೆ ಸಚಿವರ ಆಪ್ತ ಸಹಾಯಕರಾದಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠಲ್ ಹಾಗೂ ಡಾ. ಗಿರೀಶ್ ಸೋನ ವಾಲ್ಕರ್ ಸೇರಿ ಹಲವು ಆಪ್ತರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್).