ಟಿಶ್ಯೂನಲ್ಲಿ ಬರೆದಿದ್ದು ಒಂದೇ ಒಂದು ಪದ! ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್​ ದಿಢೀರ್​ ಯು-ಟರ್ನ್​ | Air India Express Flight

ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್​ ದಿಢೀರ್​ ಯು-ಟರ್ನ್​
ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್​ ದಿಢೀರ್​ ಯು-ಟರ್ನ್​
Published on: 

ಪ್ರಮುಖ ಮುಖ್ಯಾಂಶಗಳು

  • ಸೌದಿ ಅರೇಬಿಯಾದ ದಮ್ಮಾಮ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ
  • ವಾಶ್​ರೂಂನಲ್ಲಿ ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್​ ಪತ್ತೆ ​
  • ಕೆಲಕಾಲ ಭಾರಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ವಿಮಾನವನ್ನು ಅಹಮದಾಬಾದ್​ನಲ್ಲಿ ಲ್ಯಾಂಡಿಂಗ್​
ನವದೆಹಲಿ: ಸೌದಿ ಅರೇಬಿಯಾದ ದಮ್ಮಾಮ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ವಾಶ್​ರೂಂನಲ್ಲಿ ಟಿಶ್ಯೂ ಪೇಪರ್​ ಪತ್ತೆಯಾಗಿದ್ದು, ಅದರಲ್ಲಿ ಬರೆದಿದ್ದ ಬಾಂಬ್​ ಎಂದ ಪದ ಕೆಲಕಾಲ ಭಾರಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ವಿಮಾನವನ್ನು ಅಹಮದಾಬಾದ್​ಗೆ ತಿರುಗಿಸಿದ ಪ್ರಕರಣದ ತನಿಖೆ ಸದ್ಯ ಇನ್ನಷ್ಟು ಚುರುಕುಗೊಂಡಿದೆ.
ವಿಮಾನದ ಶೌಚಾಲಯದಲ್ಲಿ ಬೆದರಿಕೆ ಸಂದೇಶ ಪತ್ತೆಯಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಪೈಲಟ್​ ಅಹಮದಾಬಾದ್‌ಗೆ ತಿರುಗಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಬ್ಬರು ಹಾಗೂ ಪ್ರಯಾಣಿಕರೊಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಟಿಶ್ಯೂ ಪೇಪರ್​ನಲ್ಲಿ ಬಾಂಬ್ ಎಂದು ಬರೆದಿದ್ದು ಯಾರು? ಅದನ್ನು ಯಾವ ಕಾರಣಕ್ಕೆ ವಾಶ್​ರೂಮ್​ನಲ್ಲಿ ಇಟ್ಟು ಬಂದರು ಎಂಬ ಪ್ರಶ್ನೆಗಳು ತೀವ್ರ ಗೊಂದಲ, ಅನುಮಾನಗಳಿಗೆ ಕಾರಣವಾಗಿದೆ.

ಏನಿದು ಪ್ರಕರಣ?

ಕಳೆದ ಸೋಮವಾರ (ಸೆ.01) ದಮ್ಮಾಮ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ಶೌಚಾಲಯಕ್ಕೆ ತೆರಳಿದ್ದಾಗ, ಅಲ್ಲಿ, ಬಾಂಬ್ ಎಂದು ಬರೆಯಲಾಗಿದ್ದ ಟಿಶ್ಯೂ ಪೇಪರ್​ ನೋಡಿದ್ದಾರೆ. ತಕ್ಷಣವೇ, ಈ ಕುರಿತು ಮಾಹಿತಿ ಪಡೆದ ಪೈಲಟ್​, ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 32 ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿ ಸೇರಿ ಒಟ್ಟು 40 ಜನರ ಜೀವ ಅಮೂಲ್ಯ ಎಂದು ಹೆಚ್ಚು ಸಮಯ ವ್ಯರ್ಥ ಮಾಡದೆ ಅಹಮದಾಬಾದ್​ನಲ್ಲಿ ಲ್ಯಾಂಡ್​ ಮಾಡಿದರು.  

ತನಿಖೆ ಚುರುಕು

ಘಟನೆ ಸಂಬಂಧ ಏರ್ ಇಂಡಿಯಾ ಸಂಸ್ಥೆಯು ಅಹಮದಾಬಾದ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿದೆ. ಈ ಮಧ್ಯೆ, ವಿಮಾನದ ಸಿಬ್ಬಂದಿಯ ಹ್ಯಾಂಡ್‌ರೈಟಿಂಗ್ ಹೋಲಿಕೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಪ್ರಾಥಮಿಕ ತನಿಖೆ ಮತ್ತು ಪರಿಶೀಲನೆ ವೇಳೆ ಬೆದರಿಕೆ ಪತ್ರದಲ್ಲಿದ್ದ ಕೈಬರಹವು ಸಿಬ್ಬಂದಿಯೊಬ್ಬರ ಹ್ಯಾಂಡ್‌ರೈಟಿಂಗ್‌ಗೆ ಹೋಲುವಂತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆ ಸಿಬ್ಬಂದಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).